ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಅಪ್ರಾಪ್ತರು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು (suo motu cognisance) ದಾಖಲಿಸಿಕೊಂಡಿದೆ. ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿನ ಅಪಾಯಕಾರಿ ಪ್ರದೇಶಗಳನ್ನು ತಕ್ಷಣವೇ ಗುರುತಿಸುವಂತೆ, ಗಸ್ತು ತಿರುಗುವಿಕೆಯನ್ನು ಹೆಚ್ಚಿಸುವಂತೆ ಮತ್ತು ನಾಲ್ಕು ವಾರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿನ ದೀಪದ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಲೆಕ್ಕಪರಿಶೋಧನೆ (audit) ನಡೆಸುವಂತೆ ದೆಹಲಿ ಪೊಲೀಸರಿಗೆ ನ್ಯಾಯಾಲಯ ಸೋಮವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಉದ್ಯಾನವನಗಳು, ಬಸ್ಸುಗಳು ಮತ್ತು ಮೆಟ್ರೋ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಬೆಳಕಿನ ಕೊರತೆ ಮತ್ತು “ಕಳಪೆ ಗಸ್ತು” ವ್ಯವಸ್ಥೆಯಿಂದಾಗಿ ಅವುಗಳನ್ನು “ಹೆಚ್ಚಿನ ಅಪಾಯದ ವಲಯ”ಗಳಾಗಲು ಬಿಡಬಾರದು ಎಂದು ಪೀಠ ಹೇಳಿದೆ. ತಡೆಯಬಹುದಾದ ಇಂತಹ ಮೂಲಭೂತ ಸುರಕ್ಷತಾ ಕ್ರಮಗಳೇ ಇಲ್ಲದಿದ್ದಾಗ, ವಯಸ್ಸು, ಲಿಂಗ ಅಥವಾ ಲೈಂಗಿಕ ಗುರುತಿನ ಭೇದವಿಲ್ಲದೆ ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಭಾವನೆಯಿಂದ ಓಡಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಲೇಡಿ ಶ್ರೀರಾಮ್ ಕಾಲೇಜು ಬಳಿಯ ಆಸ್ತಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ, ಸ್ವರೂಪ್ ನಗರದಲ್ಲಿ ಅಪ್ರಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಮತ್ತು ಗ್ರೇಟರ್ ನೊಯ್ಡಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯದಂತಹ ಇತ್ತೀಚಿನ ಘಟನೆಗಳನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರಿಗೆ ಮೂಲಭೂತ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆಡಳಿತವು ಸಂಪೂರ್ಣ ವಿಫಲವಾಗಿರುವುದನ್ನು ಈ ಘಟನೆಗಳು ಎತ್ತಿ ತೋರಿಸುತ್ತವೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. “ಹಿಂಸಾಚಾರದ ಭಯವಿಲ್ಲದೆ ಗೌರವದಿಂದ ಬದುಕುವುದು ಸಂವಿಧಾನದ 21ನೇ ವಿಧಿಯಡಿ ಪ್ರತಿಪಾದಿಸಲಾದ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಅಂತರ್ಗತ ಭಾಗವಾಗಿದೆ” ಎಂದು ಪೀಠ ಹೇಳಿದೆ. ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ದೆಹಲಿ ಪೊಲೀಸರು ಹಾಗೂ ಇತರ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.
ನಿರ್ಭಯಾ ಪ್ರಕರಣದ ನೆನಪು ಹಾಗೂ ಹೊಣೆಗಾರಿಕೆಯ ಕೊರತೆ
ಗ್ರೇಟರ್ ನೊಯ್ಡಾದಿಂದ ಕಾಶ್ಮೀರಿ ಗೇಟ್‌ಗೆ 47 ಕಿ.ಮೀ ವರೆಗೆ ಚಲಿಸುತ್ತಿದ್ದ ಬಸ್ಸಿನಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಇದು “2012ರ ನಿರ್ಭಯಾ ಪ್ರಕರಣದ ನೋವಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ” ಎಂದಿದೆ. ಮಾರ್ಗಮಧ್ಯೆ ಒಂದೇ ಒಂದು ಪೊಲೀಸ್ ಚೌಕಿಯಲ್ಲೂ ಬಸ್ಸನ್ನು ತಡೆಯದಿರುವುದು ವ್ಯವಸ್ಥೆಯ ಲೋಪವನ್ನು ತೋರಿಸುತ್ತದೆ ಹಾಗೂ ಅಂದಿನಿಂದ ಇಂದಿನವರೆಗೆ ಕಾನೂನು ಜಾರಿ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಪ್ರಗತಿಯಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಹೇಳಿದೆ.
ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕ ಪ್ರಾಧಿಕಾರಗಳು ಮತ್ತು ಜನಪ್ರತಿನಿಧಿಗಳು ಕೇವಲ ಹೇಳಿಕೆಗಳ ಮೂಲಕ ‘ಒಗ್ಗಟ್ಟು’ ವ್ಯಕ್ತಪಡಿಸುವುದು ಈ ಸಾಮಾಜಿಕ ಅನಿಷ್ಟಕ್ಕೆ ಪರಿಹಾರವಲ್ಲ ಎಂದು ನ್ಯಾಯಾಲಯ ಕಿಡಿಕಾರಿದೆ. ಬದಲಾಗಿ ಅಪರಾಧ ತಡೆಗಟ್ಟುವ, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾರಗಳ ಮೇಲೆ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತ್ವರಿತ ಕ್ರಮಗಳಿಗೆ ಸೂಚನೆ
ಪ್ರತಿ ಪೊಲೀಸ್ ಜಿಲ್ಲೆಗೆ ಪ್ರತ್ಯೇಕ ತಂಡಗಳನ್ನು ರಚಿಸಿ, ಅಪಾಯಕಾರಿ ಪ್ರದೇಶಗಳನ್ನು (ನಿರ್ಜನ ಪ್ರದೇಶಗಳು, ಉದ್ಯಾನವನಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳು) ತಕ್ಷಣವೇ ಸಮೀಕ್ಷೆ ಮತ್ತು ಪರಿಶೀಲನೆ ನಡೆಸುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಅಪರಾಧಗಳ ಮರುಕಳಿಸುವ ಮಾದರಿ ಮತ್ತು ಖಾಯಂ ಅಪರಾಧಿಗಳ ಬಗ್ಗೆ ಮಾಹಿತಿಯನ್ನು ಕೇವಲ ಒಂದು ಠಾಣೆಗೆ ಸೀಮಿತಗೊಳಿಸದೆ, ಅಕ್ಕಪಕ್ಕದ ಪೊಲೀಸ್ ಠಾಣೆಗಳೊಂದಿಗೂ ಹಂಚಿಕೊಳ್ಳಲು ಅನುವಾಗುವಂತೆ ಜಿಲ್ಲಾವಾರು ಅಪಾಯಕಾರಿ ವಲಯಗಳ ನಕ್ಷೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿದೆ.
ಗುರುತಿಸಲಾದ ಅಪಾಯಕಾರಿ ಪ್ರದೇಶಗಳಲ್ಲಿ ವಿಶೇಷವಾಗಿ ಸಂಜೆ ಮತ್ತು ಮುಂಜಾನೆ ಗಸ್ತು ಹೆಚ್ಚಿಸಬೇಕು ಎಂದು ಪೀಠ ಸೂಚಿಸಿದೆ. ಕೆಟ್ಟುಹೋಗಿರುವ ಸಿಸಿಟಿವಿ ಕ್ಯಾಮೆರಾಗಳು ಮತ್ತು ದೀಪದ ವ್ಯವಸ್ಥೆಯನ್ನು ತ್ವರಿತವಾಗಿ ದುರಸ್ತಿಪಡಿಸಬೇಕು ಅಥವಾ ಮರುಸ್ಥಾಪಿಸಬೇಕು, ಹಾಗೂ ನಾಗರಿಕರು ವರದಿ ಮಾಡಿದ ಕಡೆಗಳಲ್ಲಿ ಹೆಚ್ಚುವರಿ ಸಿಸಿಟಿವಿಗಳನ್ನು ಮತ್ತು ದೀಪಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿದೆ.
’ರಾಷ್ಟ್ರೀಯ ಲೈಂಗಿಕ ಅಪರಾಧಿಗಳ ದತ್ತಾಂಶ’ವನ್ನು (NDSO) ದೆಹಲಿ ಪೊಲೀಸರು ಹೇಗೆ ಬಳಸುತ್ತಿದ್ದಾರೆ ಮತ್ತು ಖಾಯಂ ಅಪರಾಧಿಗಳನ್ನು ಗುರುತಿಸಲು ಇದನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆಯೇ ಎಂಬ ಬಗ್ಗೆ ನ್ಯಾಯಾಲಯವು ವಿವರ ಕೇಳಿದೆ. ಲೈಂಗಿಕ ಅಪರಾಧಗಳ ತನಿಖೆಯ ಮೇಲೆ ನಿಗಾ ಇಡುವ ಆನ್‌ಲೈನ್ ವಿಶ್ಲೇಷಣಾ ಸಾಧನವಾದ ‘ಇನ್ವೆಸ್ಟಿಗೇಟಿವ್ ಟ್ರ್ಯಾಕಿಂಗ್ ಸಿಸ್ಟಮ್ ಫಾರ್ ಸೆಕ್ಷುವಲ್ ಅಫೆನ್ಸಸ್’ (ITSSO) ನ ಕಾರ್ಯನಿರ್ವಹಣೆ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ, ತನ್ನ ನಿರ್ದೇಶನಗಳ ಪಾಲನೆಯನ್ನು ಪರಿಶೀಲಿಸಲು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ನಿಗದಿಪಡಿಸಿದೆ.




