ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ 23 ದಿನಗಳು ಬಾಕಿ ಇರುವಾಗ, ಒಂದೇ ದಿನದಲ್ಲಿ 250ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ಆಯೋಗ ದಿಢೀರ್ ವರ್ಗಾವಣೆ ಮಾಢಿದೆ. ಚುನಾವಣಾ ಆಯೋಗದ (ECI) ನಿರ್ಧಾರವನ್ನು ಆಡಳಿತಾರೂಢ ಟಿಎಂಸಿ ಖಂಡಿಸಿದ್ದು, ಕಾನೂನು ಸಮರಕ್ಕೆ ಮುಂದಾಗಿದೆ. ಅಧಿಕಾರಿಗಳ ವರ್ಗಾವಣೆ ಪ್ರಶ್ನಿಸಿ ಆಯೋಗದ ವಿರುದ್ಧ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಚುನಾವಣಾ ಆಯೋಗವು ಭಾನುವಾರ ರಾಜ್ಯಾದ್ಯಂತ ಭಾರೀ ಪ್ರಮಾಣದ ಆಡಳಿತಾತ್ಮಕ ಬದಲಾವಣೆ ಮಾಡಿದೆ. ಇದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಭಬಾನಿಪುರ ಕ್ಷೇತ್ರವೂ ಸೇರಿದಂತೆ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ, 174 ಪೊಲೀಸ್ ಠಾಣಾ ಉಸ್ತುವಾರಿ ಅಧಿಕಾರಿಗಳು (OC), 83 ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (BDO) ಹಾಗೂ ಹಲವು ಸಹಾಯಕ ಚುನಾವಣಾಧಿಕಾರಿಗಳನ್ನು (ARO) ವರ್ಗಾವಣೆ ಮಾಡಲಾಗಿದೆ.
ಆಯೋಗದ ಈ ಕ್ರಮವನ್ನು ಪ್ರಶ್ನಿಸಿ ಟಿಎಂಸಿ ಸಂಸದ, ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಅವರು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸುಜಾಯ್ ಪೌಲ್ ಅವರ ಪೀಠದ ಮುಂದೆ ಈ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದ್ದು, ಅರ್ಜಿ ವಿಚಾರಣೆ ಇಂದು (ಮಂಗಳವಾರ) ನಡೆಯುವ ಸಾಧ್ಯತೆಯಿದೆ.
ಈ ಲೇಖನ ಓದಿದ್ದೀರಾ?: ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು, ಬಹಳ ದೊಡ್ಡದು ಏಕೆಂದರೆ…
ಚುನಾವಣಾ ಆಯೋಗದ ಕ್ರಮದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದು, “ಆಯೋಗವು ಕೇಂದ್ರದ ಆಡಳಿತಾರೂಢ ಬಿಜೆಪಿಯ ಆಣತಿಯಂತೆ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳ ಸರಣಿ ವರ್ಗಾವಣೆಯ ಮೂಲಕ ರಾಜ್ಯ ಸರ್ಕಾರದ ಆಡಳಿತಾತ್ಮಕ ಅಧಿಕಾರವನ್ನು ಆಯೋಗವು ಕಸಿದುಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 23ರಂದು ಮೊದಲ ಹಂತ ಮತ್ತು ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.



