ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಟಿಎಂಸಿ ನಾಯಕರ ನಿಯೋಗವು ಭೇಟಿ ಮಾಡಿದೆ. ಈ ವೇಳೆ, ಟಿಎಂಸಿ ನಾಯಕರಿಗೆ ಜ್ಞಾನೇಶ್ ಕುಮಾರ್ ‘ಗೆಟ್ ಲಾಸ್ಟ್’ (ತೊಲಗಿ ಇಲ್ಲಿಂದ) ಎಂದು ನಿಂದಿಸಿದ್ದಾರೆ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ಕಚೇರಿಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಒಬ್ರಿಯಾನ್, “ಸಭೆ ಆರಂಭವಾದ ಕೇವಲ 7 ನಿಮಿಷಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ನಮಗೆ ಏನು ಹೇಳಿದರು ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಅವರು ನಮಗೆ ‘ಗೆಟ್ ಲಾಸ್ಟ್’ ಎಂದು ಹೇಳಿದರು. ಹಾಗಾಗಿ ನಾವು ಹೊರಬಂದೆವು” ಎಂದು ವಿವರಿಸಿದ್ದಾರೆ.
“ಭೇಟಿ ವೇಳೆ, ನಮ್ಮ ನಿಯೋಗವು ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳಿಗೆ ಈವರೆಗೆ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆ ಬಗ್ಗೆ ಚರ್ಚಿಸಲು ನಿಯೋಗವು ಆಯುಕ್ತರನ್ನು ಭೇಟಿ ಮಾಡಿತ್ತು. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಉನ್ನತ ಅಧಿಕಾರಿಗಳು ಮತ್ತು ಪೊಲೀಸರ ವರ್ಗಾವಣೆಯ ವಿಷಯವನ್ನೂ ನಿಯೋಗವು ಪ್ರಸ್ತಾಪಿಸಿತ್ತು” ಎಂದು ಅವರು ತಿಳಿಸಿದ್ದಾರೆ.
“ಚುನಾವಣಾ ಆಯುಕ್ತರನ್ನು ‘ನೀವು ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದೀರಿ, ಹೀಗಿರುವಾಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಹೇಗೆ ನಡೆಸಲು ಬಯಸುತ್ತೀರಿ’ ಎಂದು ನಾವು ಕೇಳಿದೆವು. ಅದಕ್ಕೆ ಅವರು ‘ಗೆಟ್ ಲಾಸ್ಟ್’ ಎಂದರು. ಇಂದು ನಾನು ಕಂಡಿದ್ದು ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ. ತಮ್ಮೊಂದಿಗೆ ಆಯುಕ್ತರು ನಡೆಸಿದ ಸಭೆಯ ಆಡಿಯೋ ಅಥವಾ ವಿಡಿಯೋವನ್ನು ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ.
ಇನ್ನು, ಟಿಎಂಸಿ ವಿರುದ್ಧ ಚುನಾವಣಾ ಆಯೋಗ ಪ್ರತ್ಯಾರೋಪ ಮಾಡಿದೆ. “ಒಬ್ರಿಯಾನ್ ಅವರು ಮುಖ್ಯ ಚುನಾವಣಾ ಆಯುಕ್ತರ ಮೇಲೆ ಕಿರುಚಾಡಿದರು ಮತ್ತು ‘ಬಾಯಿ ಮುಚ್ಚಿ’ ಎಂದು ಗದರಿದರು. ಸಭಾಂಗಣದ ಘನತೆಯನ್ನು ಕಾಪಾಡುವಂತೆ ಜ್ಞಾನೇಶ್ ಕುಮಾರ್ ಅವರು ಒಬ್ರಿಯಾನ್ ಅವರಿಗೆ ವಿನಂತಿಸಿದರು. ಕಿರುಚಾಟ ಮತ್ತು ಅಸಭ್ಯ ವರ್ತನೆ ಸೂಕ್ತವಲ್ಲ” ಎಂದು ಹೇಳಿದೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಆಯೋಗವು, “ಬಂಗಾಳದ ಆಡಳಿತಾರೂಢ ಟಿಎಂಸಿಗೆ ‘ಅಂತಿಮ ಎಚ್ಚರಿಕೆ’. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಗಳು ಖಂಡಿತವಾಗಿಯೂ: ಭಯಮುಕ್ತ, ಹಿಂಸಾಚಾರ ಮುಕ್ತ, ಬೆದರಿಕೆ ಮುಕ್ತ ಹಾಗೂ ಯಾವುದೇ ಅಕ್ರಮಗಳಿಲ್ಲದೆ ನಡೆಯಲಿವೆ” ಎಂದು ಹೇಳಿದೆ.
FALSE. A BLATANT LIE. None of this was said to the four member @AITCofficial delegation – @derekobrienmp @MenakaGuruswamy @SaketGokhale and myself this morning when we met the @CEC and @ECISVEEP . Two lines were said to us by the Chief Election Commissioner Vanish Kumar . The… https://t.co/KQDn5DQlpq
— Sagarika Ghose (@sagarikaghose) April 8, 2026
ಆಯೋಗದ ಆರೋಪ ಮತ್ತು ಪೋಸ್ಟ್‌ಅನ್ನು ಒಬ್ರಿಯಾನ್ ಅಲ್ಲಗಳೆದಿದ್ದಾರೆ. “ಆಯೋಗ ಹೇಳುತ್ತಿರುವ ರೀತಿಯ ಯಾವುದೇ ಸಂಭಾಷಣೆ ನಡೆದಿಲ್ಲ. ಜ್ಞಾನೇಶ್ ಕುಮಾರ್ ಅವರೇ ಅಪರಾಧಿ. ಅವರು ವ್ಯಾನಿಶ್ ಕುಮಾರ್” ಎಂದು ಲೇವಡಿ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಸಿಇಸಿ ವಿರುದ್ಧದ ಅವಿಶ್ವಾಸ; ಕಾರಣವಿಲ್ಲದೇ ನೋಟಿಸ್ ತಿರಸ್ಕಾರ ಕೂಡ ಪ್ರಜಾತಂತ್ರಕ್ಕೆ ಮಾರಕ!
ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಮಾತನಾಡಿ, “ಆಯೋಗದ ಸೋಷಿಯಲ್ ಮೀಡಿಯಾ ಪೋಸ್ಟ್ ಸಂಪೂರ್ಣ ಸುಳ್ಳು. ನಮ್ಮ ನಾಲ್ಕು ಸದಸ್ಯರ ನಿಯೋಗಕ್ಕೆ ಆಯುಕ್ತರು ಹೇಳಿದ್ದು ಕೇವಲ ಎರಡು ಸಾಲುಗಳನ್ನು ಮಾತ್ರ. ಮೊದಲನೆಯದು: ‘ನಿಮ್ಮ ಅಧಿಕೃತ ಸಹಿದಾರ ಎಲ್ಲಿದ್ದಾರೆ?’ ಮತ್ತು ಎರಡನೆಯದು ಅತ್ಯಂತ ನಾಚಿಕೆಗೇಡಿನ ಪದಗಳು: ‘ಗೆಟ್ ಲಾಸ್ಟ್’ ಎಂದಿರುವುದು” ಎಂದು ಆರೋಪಿಸಿದ್ದಾರೆ.
ಸಂಸದರಾದ ಸಾಕೇತ್ ಗೋಖಲೆ ಮತ್ತು ಮೇನಕಾ ಗುರುಸ್ವಾಮಿ ಕೂಡ ನಿಯೋಗದ ಭಾಗವಾಗಿದ್ದರು. ಅವರಿಬ್ಬರೂ ಕೂಡ ಆಯೋಗದ ಆರೋಪವನ್ನು ತಳ್ಳಿಹಾಕಿದ್ದಾರೆ. “ಆಯೋಗದ ಆರೋಪ ಸಂಪೂರ್ಣ ಸುಳ್ಳು. ನಾನು ವೈಯಕ್ತಿಕವಾಗಿ ಸಭೆಯಲ್ಲಿ ಹಾಜರಿದ್ದೆ. ಜ್ಞಾನೇಶ್ ಕುಮಾರ್ ಹೇಳಿದ್ದು ಕೇವಲ ‘ಗೆಟ್ ಲಾಸ್ಟ್’ ಎಂಬ ಪದ ಮಾತ್ರ. ಸಭೆಯ ಸಂಭಾಷಣೆಯ ವಿವರಗಳನ್ನು ಅವರು ಬಿಡುಗಡೆ ಮಾಡಬೇಕು. ಸತ್ಯದ ಅನಾವರಣವಾಗಬೇಕು” ಎಂದು ಗೋಖಲೆ ಒತ್ತಾಯಿಸಿದ್ದಾರೆ.



