ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಸಭಾ ಸದಸ್ಯ ಅನಂತ ಮಹಾರಾಜ್ ಅವರಿಗೆ ನೀಡಲಾಗಿದ್ದ ‘ಬಂಗ ವಿಭೂಷಣ’ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಹಿಂಪಡೆದಿದೆ.
’ಬಂಗ ವಿಭೂಷಣ’ವು ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ. ಕಲೆ, ಸಂಸ್ಕೃತಿ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ಗಣ್ಯರಿಗೆ ರಾಜ್ಯ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇದೇ ವರ್ಷ ಫೆಬ್ರವರಿ 21ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನಂತ ಮಹಾರಾಜ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಇದೀಗ ಆ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ.
ಜುಲೈ 19ರಂದು ದಿನ್ಹಾಟಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ್ದ ನಾಗೇಂದ್ರ ರಾಯ್ ಅಲಿಯಾಸ್ ಅನಂತ ಮಹಾರಾಜ್, ಆಜಾದ್ ಹಿಂದ್ ಫೌಜ್ (ಐಎನ್‌ಎ) ರಚನೆ ಮತ್ತು ಮುನ್ನಡೆಸುವಲ್ಲಿ ನೇತಾಜಿ ಅವರ ಪಾತ್ರವನ್ನು ಪ್ರಶ್ನಿಸಿದ್ದರು. “ಆಜಾದ್ ಹಿಂದ್ ಫೌಜ್ ಅನ್ನು ಸಂಘಟಿಸುವ ಮತ್ತು ರಚಿಸುವ ಸಾಮರ್ಥ್ಯ ನೇತಾಜಿಗೆ ಇತ್ತೇ?” ಎಂದು ಪ್ರಶ್ನಿಸಿದ್ದ ಅವರು, “ಅವರೆಲ್ಲರೂ ಬ್ರಿಟಿಷ್ ಸೈನಿಕರಾಗಿದ್ದರು ಹಾಗೂ ಐಎನ್‌ಎಯನ್ನು (ಭಾರತೀಯ ರಾಷ್ಟ್ರೀಯ ಸೇನೆ) ದುರ್ಬಳಕೆ ಮಾಡಿಕೊಳ್ಳಲಾಗಿತ್ತು” ಎಂದು ಆರೋಪಿಸಿದ್ದರು. ಅಲ್ಲದೆ, ಜರ್ಮನಿಯು ಹಸ್ತಾಂತರಿಸಿದ್ದ ಬ್ರಿಟಿಷ್-ಭಾರತೀಯ ತುಕಡಿಗಳಿಂದಲೇ ಆಜಾದ್ ಹಿಂದ್ ಫೌಜ್ ಹುಟ್ಟಿಕೊಂಡಿತು ಎಂದೂ ಅವರು ಹೇಳಿಕೆ ನೀಡಿದ್ದರು.
ಸಂಸದರ ಈ ಹೇಳಿಕೆಗಳು ಪಶ್ಚಿಮ ಬಂಗಾಳದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದವು. ರಾಜಕೀಯ ನಾಯಕರು ಮತ್ತು ರಾಜಬಂಶಿ ಸಂಘಟನೆಗಳು ಈ ಹೇಳಿಕೆಯನ್ನು ಖಂಡಿಸಿ, ಬಿಜೆಪಿ ನಾಯಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದವು. ಇದೊಂದು ಸುಳ್ಳು ಹಾಗೂ ಅವಮಾನಕಾರಿ ಹೇಳಿಕೆಯಾಗಿದ್ದು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತದೆ ಎಂದು ಪ್ರಮುಖ ರಾಜಬಂಶಿ ಮುಖಂಡರು ಜಂಟಿ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ನೇತಾಜಿ ಸ್ಥಾಪಿಸಿದ್ದ ‘ಫಾರ್ವರ್ಡ್ ಬ್ಲಾಕ್’ ಪಕ್ಷವು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ, ಅನಂತ ಮಹಾರಾಜ್ ಅವರ ರಾಜ್ಯಸಭಾ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿತ್ತು.
ಈ ವಿವಾದವು ಬಿಜೆಪಿಯೊಳಗೂ ಟೀಕೆಗೆ ಗುರಿಯಾಗಿದ್ದು, ಹಿರಿಯ ನಾಯಕ ತಥಾಗತ ರಾಯ್ ಅವರು ಈ ವಿಚಾರದಲ್ಲಿ ಕೇಂದ್ರ ನಾಯಕತ್ವ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು. ಸದ್ಯ ಈ ವಿಚಾರವು ಬೃಹತ್ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಬಿಜೆಪಿ ನೇತಾಜಿಗೆ ಅವಮಾನ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.




