ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಕೇವಲ ಭರವಸೆ ನೀಡದೆ ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಕಾಯ್ದೆಯಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿರುದ್ಯೋಗ ಪದವೀಧರರಿಗಾಗಿ ಸರ್ಕಾರ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಕೊಡಿಸಲು ಶ್ರಮಿಸುತ್ತೇನೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಭರವಸೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯ ಶ್ರೀನಿವಾಸಪುರ, ಮಾಲೂರು, ಕೋಲಾರದಲ್ಲಿ ಪ್ರವಾಸ ಮಾಡಿದ್ದು, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪದವೀಧರ ಶಿಕ್ಷಕರನ್ನು ಭೇಟಿ ಮಾಡಿದ್ದೇನೆ. ಪದವೀಧರರು, ವಕೀಲರು, ಸರ್ಕಾರಿ ನೌಕರರು ಹಾಗೂ ನಿರುದ್ಯೋಗಿ ಯುವಜನತೆಯ ಸಮಸ್ಯೆ ಆಲಿಸುತ್ತಿದ್ದೇನೆ. ಸಮಸ್ಯೆ ಬಹಳಷ್ಟಿದ್ದು, ಪಟ್ಟಿ ಮಾಡಿಕೊಂಡಿದ್ದೇನೆ. ಗೆದ್ದ ತಕ್ಷಣ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿ ಬಗೆಹರಿಸುತ್ತೇನೆ ಎಂದರು.
ಉದ್ಯೋಗ ಸೃಷ್ಟಿಗೆ ಬದ್ಧ: ರಾಜ್ಯ ಕಾಂಗ್ರೆಸ್ ಸರ್ಕಾರ 75 ಸಾವಿರ ಉದ್ಯೋಗ ಕಲ್ಪಿಸಲು ಮುಂದಾಗಿದೆ. ಈಗಾಗಲೇ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಕಲ್ಪಿಸುವುದೇ ನಮ್ಮ ಮುಖ್ಯ ಉದ್ದೇಶ. ಕೋಲಾರ ಜಿಲ್ಲೆಯ ಪದವೀಧರರಿಗೆ ಖಾಸಗಿ ವಲಯದಲ್ಲೂ ಉದ್ಯೋಗ ಸಿಗುವಂತೆ ಹೋರಾಟ ಮಾಡಲು ಬದ್ಧನಾಗಿದ್ದೇನೆ. ಈಗಾಗಲೇ ಇಲ್ಲಿನ ಕೈಗಾರಿಕೆಗಳಲ್ಲಿ ಹೊರ ರಾಜ್ಯಗಳ ಉದ್ಯೋಗಿಗಳು ಹೆಚ್ಚು ಇದ್ದಾರೆ ಎಂಬ ಮಾಹಿತಿ ಇದೆ. ಮುಂದೆ ಆ ರೀತಿ ಆಗಲು ಬಿಡಲ್ಲ ಎಂದು ಹೇಳಿದರು.
ಕೈಗಾರಿಕೆಗಳು, ಖಾಸಗಿ ವಲಯ ಬಯಸುವ ಕೌಶಲದ ಬಗ್ಗೆ ಯುವ ಜನತೆಗೆ ತರಬೇತಿ ನೀಡುವುದಕ್ಕೂ ಯೋಜನೆ ರೂಪಿಸಲಾಗಿದೆ. ಈಗಾಗಲೇ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯೂ ಜಾರಿಯಲ್ಲಿದೆ. ಅದರಿಂದ ಹಲವು ನಿರುದ್ಯೋಗಿ ಪದವೀಧರರಿಗೆ ಸಹಕಾರಿ ಆಗಿದೆ ಎಂದರು.
ಸೌಲಭ್ಯಕ್ಕೆ ಒತ್ತಾಯ: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸರ್ಕಾರದ ಸಹಕಾರದೊಂದಿಗೆ ನೆರವು ನೀಡುವುದು ಹಾಗೂ ಗ್ರಂಥಾಲಯಗಳ ಉನ್ನತೀಕರಣ ಮಾಡಲು ಯೋಜನೆ ಹಾಕಿಕೊಂಡಿದ್ದೇನೆ. ಪ್ರತಿ ಹೋಬಳಿ ಮಟ್ಟದಲ್ಲಿ ಪಿಯು ಕಾಲೇಜು ಹಾಗೂ ಜಿಲ್ಲೆಗೆ ಎಂಜಿನಿಯರಿಂಗ್ ಕಾಲೇಜಿನ ಅಗತ್ಯವಿದ್ದು, ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸುತ್ತೇನೆ. ಕೋಲಾರದಲ್ಲಿ ರೈತಾಪಿ ಹಿನ್ನೆಲೆಯ ಪದವೀಧರರಿದ್ದು, ಅವರಿಗೆ ಕೃಷಿ ಸಂಬಂಧಿತ ತರಬೇತಿ ನೀಡಲಾಗುವುದು ಎಂದು ನುಡಿದರು.
ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಪ್ರಣಾಳಿಕೆಯಲ್ಲೂ ಉಲ್ಲೇಖಿಸಲಾಗಿದ್ದು, ಸರ್ಕಾರಿ ನೌಕರರಿಗೆ ಪ್ರಮಾಣ ಮಾಡಿದ್ದೇವೆ ಎಂದರು.
ಆಗ್ನೇಯ ಪದವೀಧರರ ಈ ಕ್ಷೇತ್ರದಲ್ಲಿ ಹಿಂದೆ ಆಯ್ಕೆಯಾದವರು ಇಲ್ಲಿನ ಮತದಾರರು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಗೆದ್ದ ನಂತರ ಮತದಾರರನ್ನೂ ಭೇಟಿಯಾಗದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ, ಯಾವುದೇ ಕೆಲಸವನ್ನೂ ಮಾಡಿಲ್ಲ. ಆಯ್ಕೆಯಾದ ವ್ಯಕ್ತಿ ಜನರ ಕೈಗೆ ಸಿಗಬೇಕು. ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳತ್ತೇನೆ ಎಂದು ತಿಳಿಸಿದರು.
ಈ ಹಿಂದೆ ಗೆಲ್ಲುವುದು ಕಷ್ಟವಾಗಿದ್ದ ಶಿಕ್ಷಕರ ಕ್ಷೇತ್ರದಲ್ಲಿ ಡಿ.ಟಿ.ಶ್ರೀನಿವಾಸ್ ಗೆದ್ದು ತೋರಿಸಿದ್ದಾರೆ. ಅವರು ಶಿಕ್ಷಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ನನ್ನನ್ನೂ ಪದವೀಧರ ಕ್ಷೇತ್ರದ ಮತದಾರರು ಕೈಹಿಡಿದು ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಮುಖಂಡರ ವಿಶ್ವಾಸ ಹಾಗೂ ಸಹಕಾರ ಪಡೆದೇ ಸ್ಪರ್ಧಿಸುತ್ತಿದ್ದೇನೆ. ಅವರ ಸಹಕಾರದಿಂದ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ನೋಂದಣಿ ಕಾರ್ಯ ನಡೆದಿದೆ. ಮುಂಬರುವ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲ್ಲುವ ಪಣ ತೊಟ್ಟಿದ್ದೇವೆ. ಶೀಘ್ರದಲ್ಲೇ ಮುಖ್ಯಮಂತ್ರಿಯು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಶಿಕ್ಷಕರ ಮೇಲೆ ಕಾರ್ಯಭಾರ ಒತ್ತಡ ಹೆಚ್ಚಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೋಧನೆಯ ಜೊತೆಗೆ ಎಸ್‌ಐಆರ್, ಜನಗಣತಿ, ಸರ್ವೆ ಕೆಲಸಗಳಿಂದ ಶಿಕ್ಷಕರಿಗೆ ಒತ್ತಡ ಹೆಚ್ಚಿದ್ದು, ಅದರಿಂದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ಕೋಲಾರ | ನೂತನ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್‌ಗೆ ವಾಲ್ಮೀಕಿ ಸಮನ್ವಯ ಸಮಿತಿಯಿಂದ ಸನ್ಮಾನ
ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್, ಗ್ರಾಮಾಂತರ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕಾಂಗ್ರೆಸ್ ಎಸ್‌ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರಬಾಬು, ಗೋಪಾಲರೆಡ್ಡಿ, ಗೋಪಿಕೃಷ್ಣ, ಗಂಗಮ್ಮನಪಾಳ್ಳ ರಾಮಯ್ಯ, ಅಮರನಾಥ್, ಬಾಲು, ನಾಗರಾಜ್ ಇದ್ದರು.




