ಮಧ್ಯಪ್ರದೇಶದ ಧಾರಣದಲ್ಲಿರುವ (Dhar) ಭೋಜಶಾಲಾ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ಹಿಂದೂ ದೇವಾಲಯವೆಂದು ಘೋಷಿಸಿದ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳದ ಸಮೀಪ ಶುಕ್ರವಾರದ ನಮಾಜ್ ಸಲ್ಲಿಸಲು ಮುಸ್ಲಿಮರಿಗೆ ಮಧ್ಯಂತರ ಪರಿಹಾರ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. “ಉಭಯ ಪಕ್ಷಕಾರರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಮಧ್ಯಂತರ ಕ್ರಮವಾಗಿ, ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ನಮಾಜ್ ಮಾಡಲು ಅರ್ಜಿದಾರರಿಗೆ (ಮುಸ್ಲಿಮರಿಗೆ) ವಿವಾದಿತ ಸ್ಥಳದ ಪಕ್ಕದಲ್ಲಿ ಅಥವಾ ಸಮೀಪದಲ್ಲಿರುವ ಪ್ರತ್ಯೇಕ ಬಯಲು ಜಾಗವನ್ನು (Open space) ಒದಗಿಸಬೇಕು” ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.
ಹೈಕೋರ್ಟ್ನ ಮೇ 15ರ ಆದೇಶದ ಅನ್ವಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸಂಕೀರ್ಣದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದ್ದರೂ, ಸುಪ್ರೀಂ ಕೋರ್ಟ್ನ ಪೂರ್ವಾನುಮತಿ ಇಲ್ಲದೆ ಆ ಬದಲಾವಣೆಗಳನ್ನು ಜಾರಿಗೊಳಿಸುವಂತಿಲ್ಲ ಎಂದು ಪೀಠವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಭೋಜಶಾಲಾ ಸಂಕೀರ್ಣವನ್ನು ಹಿಂದೂಗಳಿಗೆ ಮರಳಿ ನೀಡುವಂತೆ ಹಾಗೂ ಅಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮಧ್ಯಪ್ರದೇಶ ಹೈಕೋರ್ಟ್, ಮೇ 15ರಂದು ತೀರ್ಪು ನೀಡಿತ್ತು. ಐತಿಹಾಸಿಕ ಮತ್ತು ಪುರಾತತ್ವ ಆಧಾರಗಳನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಕಮಲ್ ಮೌಲಾ ಮಸೀದಿ ಇರುವ ವಿವಾದಿತ ಸ್ಥಳವು ವಾಸ್ತವದಲ್ಲಿ ಸರಸ್ವತಿ ದೇವಾಲಯವಿರುವ ಮತ್ತು ಸಂಸ್ಕೃತ ಕಲಿಕಾ ಕೇಂದ್ರವಾಗಿದ್ದ ‘ಭೋಜಶಾಲಾ’ ಎಂದು ಘೋಷಿಸಿತ್ತು. ಇದರ ಆಧಾರದ ಮೇಲೆ, 2003ರಲ್ಲಿ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದ ಎಎಸ್ಐ ಆದೇಶವನ್ನು ರದ್ದುಗೊಳಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖಾಜಿ ಮೊಯಿನುದ್ದೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಹುಝೆಫಾ ಅಹ್ಮದಿ, ಎ.ಎಂ. ಸಿಂಘ್ವಿ ಮತ್ತು ಮೀನಾಕ್ಷಿ ಅರೋರಾ ಅವರು, ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಪ್ರಾರ್ಥನಾ ಹಕ್ಕನ್ನು ಹೈಕೋರ್ಟ್ ದಿಢೀರನೆ ರದ್ದುಗೊಳಿಸಿರುವುದನ್ನು ಪ್ರಶ್ನಿಸಿದರು. 1935ರಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದ್ದು, 1995ರ ಸಹಮತಿ ಒಪ್ಪಂದದಂತೆ ಎರಡೂ ಸಮುದಾಯಗಳು ನಡೆದುಕೊಳ್ಳುತ್ತಿವೆ. ಸಿವಿಲ್ ದಾವೆ ಬಾಕಿ ಇರುವಾಗ ಹೈಕೋರ್ಟ್ ರಿಟ್ ಅರ್ಜಿಯನ್ನು ಹೇಗೆ ಪುರಸ್ಕರಿಸಿತು ಎಂದು ಅವರು ವಾದಿಸಿದರು. 1991ರ ಪೂಜಾ ಸ್ಥಳಗಳ ಕಾಯ್ದೆಯ ಉಲ್ಲೇಖವನ್ನೂ ಸಿಂಘ್ವಿ ಮಾಡಿದರು.
ತುಷಾರ್ ಮೆಹ್ತಾ ಅವರು, ಹೈಕೋರ್ಟ್ ಆದೇಶದ ನಂತರ ಹಲವು ಬೆಳವಣಿಗೆಗಳಾಗಿರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿದರು. ಆದರೆ, ವಿವಾದಿತ ಸ್ಥಳದ ಸಮೀಪ ಸಾರ್ವಜನಿಕ ಸ್ಥಳವಿದ್ದು, ಅಲ್ಲಿ ಶುಕ್ರವಾರದ ನಮಾಜ್ಗೆ ಅವಕಾಶ ನೀಡಬಹುದು ಎಂದು ಅವರು ಒಪ್ಪಿಕೊಂಡರು.
ಬ್ರಿಟಿಷರು ಕೊಂಡೊಯ್ದಿದ್ದಾರೆ ಎನ್ನಲಾದ ಲಂಡನ್ ವಸ್ತುಸಂಗ್ರಹಾಲಯದಲ್ಲಿರುವ ವಾಗ್ದೇವಿ (ಸರಸ್ವತಿ) ಮೂರ್ತಿಯನ್ನು ಮರಳಿ ತರುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ಮಾಡಿದ್ದ ಉಲ್ಲೇಖದ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನಹರಿಸಿತು. “ವಿದೇಶಿ ಮ್ಯೂಸಿಯಂಗಳಲ್ಲಿರುವ ವಸಾಹತುಶಾಹಿ ಕಾಲದ ಎಲ್ಲಾ ಕಲಾಕೃತಿಗಳನ್ನು ಮರಳಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಂವಿಧಾನಿಕ ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಅಂತಹ ಯಾವುದೇ ಆದೇಶವನ್ನು ನಾವು ನೀಡುತ್ತಿಲ್ಲ” ಎಂದು ನ್ಯಾಯಮೂರ್ತಿ ಬಾಗ್ಚಿ ಸ್ಪಷ್ಟಪಡಿಸಿದರು.




