ಒಡಿಶಾ ರಾಜ್ಯದ ಭುವನೇಶ್ವರದಲ್ಲಿ 1996ರಲ್ಲಿ ಪ್ರಾರಂಭವಾದ ಕೃಷಿ ನಿರತ ಮಹಿಳೆಯರ ಕೇಂದ್ರಿಯ ಸಂಸ್ಥೆ (Central Institute for Women in Agriculture : CIWA) ಇದೆ. ಅದರ ಅಡಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳಿವೆ. ಕೃಷಿ ವಲಯ 9ರಲ್ಲಿ ಬರುವ 13 ಜಿಲ್ಲೆಗಳಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತಹ ಜಿಲ್ಲೆಗಳೆಂದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಕೋಲಾರ, ಮೈಸೂರು, ತುಮಕೂರು ಮತ್ತು ರಾಮನಗರ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಪ್ರಾಯೋಜಕತ್ವದ ಯೋಜನೆಯೊಂದಿದೆ. ಅದರ ಹೆಸರು ‘ಕೃಷಿ ನಿರತ ಮಹಿಳೆಯರ ಯೋಜನೆ’. ಅದನ್ನು ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆಯ(All India Coordinated Research Project : AICRP) ಅಡಿಯಲ್ಲಿ ಸಂಘಟಿಸಲಾಗಿದೆ. ದೇಶದಲ್ಲಿರುವ 60 ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆಗಳ ಪೈಕಿ ‘ಕೃಷಿ ನಿರತ ಮಹಿಳೆಯರ ಯೋಜನೆ’ಯೂ ಒಂದು. ಮಹಿಳೆಯರನ್ನು ಹೆಚ್ಚು ಸಶಕ್ತರನ್ನಾಗಿ ರೂಪಿಸಲು ಈ ಯೋಜನೆಯನ್ನು 2022ರಲ್ಲಿ ಆರಂಭಿಸಲಾಗಿದೆ. ಇದೇ ಯೋಜನೆಯು 1980-81ರಿಂದ ಗೃಹ ವಿಜ್ಞಾನ(Home Science)ಕ್ಕೆ ಸಂಬಂಧಿಸಿದ ಮಹಿಳೆಯರ ಸಬಲೀಕರಣದ ಯೋಜನೆಯಾಗಿ ಜಾರಿಯಲ್ಲಿತ್ತು. ಗೃಹ ವಿಜ್ಞಾನ ಯೋಜನೆಯನ್ನು 2022ರಲ್ಲಿ ಮರು ನಾಮಕರಣ ಮಾಡಿ ‘ಕೃಷಿ ನಿರತ ಮಹಿಳೆಯರು’ (Women in Agriculture) ಎನ್ನಲಾಗಿದೆ.
ಒಡಿಶಾ ರಾಜ್ಯದ ಭುವನೇಶ್ವರದಲ್ಲಿ 1996ರಲ್ಲಿ ಪ್ರಾರಂಭವಾದ ಕೃಷಿ ನಿರತ ಮಹಿಳೆಯರ ಕೇಂದ್ರಿಯ ಸಂಸ್ಥೆ (Central Institute for Women in Agriculture : CIWA) ಯಿದೆ. ಅದರ ಅಡಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳಿವೆ. ಕೃಷಿ ವಲಯ 9ರಲ್ಲಿ ಬರುವ 13 ಜಿಲ್ಲೆಗಳಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತಹ ಜಿಲ್ಲೆಗಳೆಂದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಕೋಲಾರ, ಮೈಸೂರು, ತುಮಕೂರು ಮತ್ತು ರಾಮನಗರ.
ಹಳೆಯ ಯೋಜನೆಗೆ ಹೊಸ ರೂಪ
ಮೊದಲಿಗೆ 1980-81ರಲ್ಲಿ ಇದ್ದ ಗೃಹ ವಿಜ್ಞಾನ ಎಂಬ ಪ್ರಾಯೋಜನೆಯಲ್ಲಿ 5 ವಿಭಾಗಗಳಿದ್ದವು. ಅವೆಂದರೆ, 1. ಉಡುಪು ಮತ್ತು ವಸ್ತ್ರ ವಿನ್ಯಾಸ, 2. ಕುಟುಂಬ ಸಂಪನ್ಮೂಲ ನಿರ್ವಹಣೆ, 3. ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ, 4. ಆಹಾರ ಮತ್ತು ಪೋಷಣೆ ಮತ್ತು 5. ಗೃಹ ವಿಜ್ಞಾನ ವಿಸ್ತರಣಾ ಶಿಕ್ಷಣ. ರೈತ ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ ಅವರೂ ಕೂಡ ಸಂಸಾರದ ನೊಗ ಹೊರುವಂತೆ ಮಾಡಿ ಸಬಲೀಕರಣಗೊಳಿಸುವುದು ಯೋಜನೆಯ ಉದ್ದೇಶವಾಗಿತ್ತು. ಅಂತಹ ಯೋಜನೆಯನ್ನು 2022ರಲ್ಲಿ ‘ಕೃಷಿ ನಿರತ ಮಹಿಳೆಯರು’ ಎಂದು ಮರುನಾಮಕರಣ ಮಾಡಿದ ನಂತರ ಅದರಲ್ಲಿಯ ಕಾರ್ಯ ಚಟುವಟಿಕೆಗಳ ಉದ್ದೇಶಗಳನ್ನು ತುಸು ಮಾರ್ಪಡಿಸಲಾಗಿದೆ. ಅವೆಂದರೆ, 1. ಕುಟುಂಬದ ಪೋಷಣೆ, 2. ಉದ್ಯಮಶೀಲತೆಯ ಅಭಿವೃದ್ಧಿ, 3. ಮಹಿಳಾ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ಧಿ, 4. ಪೌಷ್ಟಿಕ ಕೈತೋಟ, 5. ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ಮತ್ತು 6. ವಿಸ್ತರಣಾ ಶಿಕ್ಷಣ.

ಪರಿಷ್ಕೃತ ಯೋಜನೆಯ ಉದ್ದೇಶಗಳನ್ನು ಸಾಕಾರಗೊಳಿಸಲು ಶ್ರಮಿಸಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಕೋಲಾರ ಜಿಲ್ಲೆಯ ಕ್ಯಾಲನೂರು, ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ಶೆಟ್ಟಿಬೀಡು, ತುಮಕೂರು ಜಿಲ್ಲೆಯ ಗುಬ್ಬಿ ಬಳಿಯ ಚೇಳೂರು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಮಾಸ್ತೇನಹಳ್ಳಿಯ ಮಹಿಳೆಯರಿಗೆ ಹಲವು ರೀತಿಯಲ್ಲಿ ತರಬೇತಿ ನೀಡಲಾಗಿದೆ. ಕೆಲವು ಕಡೆ ಮಹಿಳಾ ಗುಂಪುಗಳನ್ನು ರಚಿಸಲಾಗಿದೆ. ಬೇಸಾಯದ ಶ್ರಮ ಕಡಿಮೆ ಮಾಡುವ ಹಾಗೂ ಮಹಿಳೆಯರಿಗೆ ತಕ್ಕುದಾದ ಸುಲಭ ಕೃಷಿ ಸಾಧನಗಳನ್ನು ಜಿಕೆವಿಕೆಯ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ ವಿನ್ಯಾಸಗೊಳಿಸಿ, ತಯಾರಿಸಿ ರೈತ ಮಹಿಳೆಯರಿಗೆ ವಿತರಿಸಲಾಗಿದೆ. ಸುಧಾರಿತ ಕಳೆ ತೆಗೆಯುವ ಸಾಧನ, ಸೈಕಲ್ ವೀಡರ್, ಹಣ್ಣು ಕೀಳುವ ಸಾಧನ, ಮರದ ಕೊಂಬೆ ಕತ್ತರಿಸುವ ಸಾಧನ, ಮಚ್ಚು ಮುಂತಾದ ಸಲಕರಣೆಗಳನ್ನು ಪೂರೈಸಲಾಗಿದೆ.

ಕೃಷಿ ನಿರತ ಮಹಿಳೆಯರಿಗೆ ಹಲವು ಚಟುವಟಿಕೆಗಳು
- ಹಿತ್ತಲಲ್ಲಿ ಪೌಷ್ಟಿಕ ಆಹಾರ ಬೆಳೆದುಕೊಳ್ಳಲು ತರಬೇತಿ ನೀಡಲಾಗಿದೆ.
- ಬಿತ್ತನೆ ಬೀಜಗಳ ಕಿಟ್ಗಳನ್ನು ವಿತರಿಸಲಾಗಿದೆ.
- ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜಿಸಲಾಗಿದೆ. ನವಣೆಯ ಉತ್ತಮ ತಳಿಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ತರಿಸಿ ಹಂಚಲಾಗಿದೆ.
- ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಹಣಕಾಸು ನಿರ್ವಹಣೆ ಮಾಡಿಕೊಳ್ಳಲು ಜಿಕೆವಿಕೆಗೆ ಆಮಂತ್ರಿಸಿ ತರಬೇತಿ ನೀಡಲಾಗಿದೆ. ಪುರುಷ ಪಾರುಪತ್ಯದ ಹಣಕಾಸು ನಿರ್ವಹಣೆಯ ಜೊತೆಗೆ ಮಹಿಳೆಯರನ್ನೂ ಭಾಗೀದಾರರನ್ನಾಗಿ ರೂಪಿಸುವ ಕಾರ್ಯಕ್ರಮವಿದು.
- ಜೇನು ಸಾಕಾಣಿಕೆ ಮತ್ತು ಅಣಬೆ ಕೃಷಿಯನ್ನು ಕಲಿಸಿಕೊಡಲಾಗುತ್ತಿದೆ.
- ಪೌಷ್ಟಿಕಾಂಶ ಸಂಪತ್ಭರಿತ ಆಹಾರಗಳ ಉತ್ಪಾದನೆ ಕುರಿತ ಜಾಗೃತಿ ಮತ್ತು ತರಬೇತಿ ಹಾಗೂ ಕುಟುಂಬದ ಪೋಷಣೆಗಾಗಿ ಪೋಷಕಾಂಶಯುಕ್ತ ಆಹಾರಗಳನ್ನು ಬಳಸಲು ಮಾಹಿತಿಯನ್ನು ಒದಗಿಸಲಾಗುತ್ತಿದೆ.
- ಸಕ್ಕರೆ ಕಾಯಿಲೆಯುಳ್ಳವರಿಗೆ ಹೆಚ್ಚು ನಾರುಯುಕ್ತ ಆಹಾರ ಪದಾರ್ಥಗಳನ್ನು ಬಳಸಿ ಸಕ್ಕರೆ ಅಂಶವನ್ನು ನಿಗ್ರಹಿಸಿಕೊಳ್ಳಲು ಅನುವಾಗುವಂತೆ ಮಾಹಿತಿ ನೀಡಲಾಗುತ್ತಿದೆ.
- ಆಹಾರ ಭದ್ರತೆಯಲ್ಲಿ ಮಹಿಳೆಯರ ಪಾತ್ರ ಕುರಿತಂತೆ ತರಬೇತಿ.
- ಕೃಷಿ ಸಮುದಾಯದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಜಾಗೃತಿ ಮತ್ತು ಸಾಮಥ್ರ್ಯ ಬಲವರ್ಧನೆಯ ಚಟುವಟಿಕೆ.
- ಎರೆಹುಳು ಗೊಬ್ಬರ ತಯಾರಿಕೆಯ ತರಬೇತಿ.
- ಕೃಷಿ ನಿರತ ಮಹಿಳೆಯರು ನವೋದ್ಯಮ ಸ್ಥಾಪಿಸಲು ಉತ್ತೇಜನ.
- ಕೃಷಿ ಉಪಕರಣಗಳು ಬಾಡಿಗೆಗೆ ಲಭ್ಯವಾಗುವಂತಹ ಸೇವೆಯ ಆಯೋಜನೆ.
- ಸುಮಾರು 3,000 ರೈತ ಮಹಿಳೆಯರ ದತ್ತಾಂಶ ಸಂಗ್ರಹಣೆ.
- ಗ್ರಾಮೀಣ ಪ್ರದೇಶದಲ್ಲಿ ಸಂಪನ್ಮೂಲ ಕೇಂದ್ರ ಸ್ಥಾಪಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರ ಸಬಲೀಕರಣ.
- ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಮತ್ತು ಅರಣ್ಯ ಕೃಷಿಯಲ್ಲಿ ಮಹಿಳೆಯರ ಪಾತ್ರ ಕುರಿತು ತರಬೇತಿ ಮತ್ತು ಅಧ್ಯಯನ.
- ನ್ಯೂಟ್ರಿಸ್ಮಾರ್ಟ್ ವಿಲೇಜ್ ಮತ್ತು ನ್ಯೂಟ್ರಿ ಗಾರ್ಡನ್ ಕಲ್ಪನೆಗಳ ಮೂಲಕ ಪೌಷ್ಟಿಕಾಂಶಯುಕ್ತ ಬೆಳೆಗಳ ಕೃಷಿಗೆ ಉತ್ತೇಜನ.
ತರಬೇತಿಯ ನಂತರ ಕೆಲವು ಮಹಿಳೆಯರು ಉತ್ಪಾದಿಸಿದ ಬೆಳೆಗಳ ಉತ್ಪನ್ನಗಳನ್ನು ಜಿಕೆವಿಕೆಯಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ನಡೆಯುವ ಕೃಷಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಉದ್ದಿಮೆದಾರರಾಗುವವರಿಗೊಂದು ಆಮಂತ್ರಣ
ಯೋಜನೆಯ ಉದ್ದೇಶಗಳಲ್ಲಿ ಮಹಿಳೆಯರನ್ನು ಉದ್ದಿಮೆದಾರರನ್ನಾಗಿಸುವುದೂ ಒಂದು. ಅದಕ್ಕಾಗಿ ಕೆಲವು ಆಹಾರ ಪದಾರ್ಥಗಳನ್ನು ತಯಾರು ಮಾಡಿ ಮಾರಾಟ ಮಾಡುವ ಕುರಿತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆಸಕ್ತ ಮಹಿಳಾ ಉದ್ದಿಮೆದಾರರು ರಾಯಧನವನ್ನು ನೀಡಿ, ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ನವೋದ್ಯಮವನ್ನು ಆರಂಭಿಸಿ ಉದ್ದಿಮೆದಾರರಾಗಬಹುದಾಗಿದೆ. ಅದರ ವಿವರಗಳು ಹೀಗಿವೆ.
ಹೆಚ್ಚು ನಾರುಯುಕ್ತ ಆಹಾರ ಪದಾರ್ಥಗಳ ತಯಾರಿಕೆಯ ಉದ್ಯಮ: ಶೇ. 24ರಷ್ಟು ನಾರಿನಾಂಶವಿರುವ ಆಹಾರ ಪದಾರ್ಥವನ್ನು ವಿನ್ಯಾಸಗೊಳಿಸಲಾಗಿದೆ. ಬೇರೆ ಆಹಾರ ಪದಾರ್ಥಗಳಲ್ಲಿ ಹೆಚ್ಚೆಂದರೆ ಶೇ. 12ರಷ್ಟು ನಾರಿನಾಂಶವಿರುತ್ತದೆ. ನುಗ್ಗೆ ಸೊಪ್ಪು, ಕರಿಬೇವಿನ ಸೊಪ್ಪು, ಗೋರಿಕಾಯಿ, ಮೆಂತ್ಯ ಬೀಜ, ಸಿರಿಧಾನ್ಯಗಳನ್ನು ಒಣಗಿಸಿ, ಪುಡಿ ಮಾಡಿ ತಯಾರಿಸಿರುವ ಆಹಾರ ಪದಾರ್ಥವದು. ಅದಕ್ಕಾಗಿ ಚಿಯಾ ಬೀಜಗಳನ್ನು ಬಳಸಲಾಗಿದೆ. ಮುದ್ದೆ, ರೊಟ್ಟಿ ಮತ್ತು ದೋಸೆ ಮಾಡಿ ಸೇವಿಸಬಹುದು. ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಉಪಯುಕ್ತ. ಈ ಆಹಾರದಲ್ಲಿ ಸೆಲ್ಲುಲೋಸ್ (Cellulose) ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದರಿಂದ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆ ನಾರಿನಂಶವು ಜಠರ ಮತ್ತು ಸಣ್ಣ ಕರುಳಿನಲ್ಲಿ ಜೀರ್ಣವಾಗದೆ ದೊಡ್ಡ ಕರುಳನ್ನು ಸೇರಿಕೊಳ್ಳುತ್ತದೆ. ಅಲ್ಲಿ ಸೂಕ್ಷ್ಮಜೀವಿಗಳಿಂದ ಹುದುಗುವಿಕೆ ಒಳಗಾಗುತ್ತದೆ. ಅದರಿಂದ ಸಕ್ಕರೆಯಂತೂ ಬಿಡುಗಡೆಯಾಗುವುದಿಲ್ಲ. ಮಲಬದ್ದತೆಯ ನಿವಾರಣೆಗೆ ಸೂಕ್ತ ಆಹಾರ. ರಾಯಧನವಾಗಿ ವಿಶ್ವವಿದ್ಯಾಲಯಕ್ಕೆ ರೂ. 20,000 ಅನ್ನು ಪಾವತಿಸಿ, ಒಪ್ಪಂದ ಮಾಡಿಕೊಂಡು ಉದ್ದಿಮೆಯನ್ನು ಆರಂಭಿಸಬಹುದು.
ಪೌಷ್ಟಿಕ್ ಲಡ್ಡು: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಸಂಯೋಜಿಸಲಾಗಿರುವ ಸಸಾರಜನಕ, ಜೀವಸತ್ವಗಳು ಮತ್ತು ಲವಣಗಳು ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ಪದಾರ್ಥವಿದು. ಸಿರಿಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಬಳಸಲಾಗಿದೆ. ರೂ. 50,000 ಪಾವತಿಸಿ, ವಿವಿಯೊಂದಿಗೆ ಒಪ್ಪಂದ ಮಾಡಿಕೊಂಡು ಉದ್ದಿಮೆದಾರರಾಗಬಹುದಾಗಿದೆ.
ರಾಗಿ ಮಾಲ್ಟ್ : ರಾಗಿಯನ್ನು ಮೊಳಕೆ ಕಟ್ಟಿ ಒಣಗಿಸಿ, ಪುಡಿ ಮಾಡಲಾಗಿದೆ. ಹೆಚ್ಚು ಬೇಡಿಕೆಯಿರುವ ಆಹಾರ ಪದಾರ್ಥವಿದು. ರಾಯಧನವಾಗಿ ವಿಶ್ವವಿದ್ಯಾಲಯಕ್ಕೆ ರೂ. 20,000 ಅನ್ನು ಪಾವತಿಸಿ, ಒಪ್ಪಂದ ಮಾಡಿಕೊಂಡು ಉದ್ದಿಮೆಯನ್ನು ಆರಂಭಿಸಬಹುದು.
ರಾಗಿ ಹುರಿ ಹಿಟ್ಟು : ರಾಗಿಯನ್ನು ಹದವಾಗಿ ಹುರಿದು ಪುಡಿ ಮಾಡಿದ ಹಿಟ್ಟು. ಇದೂ ಕೂಡ ಉತ್ತಮ ಬೇಡಿಕೆಯ ಪದಾರ್ಥ. ಇದಕ್ಕೆ ರೂ. 20,000 ರಾಯಧನ ಪಾವತಿಸಿ ಒಪ್ಪಂದ ಮಾಡಿಕೊಳ್ಳಬಹುದು.
ದಂಟು ಸೊಪ್ಪಿನ (ಅಮರಾಂತಸ್) ತಳಿಗಳ ಉತ್ಪಾದನೆ
ಹಲವು ದಶಕಗಳಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ದಂಟು ಸೊಪ್ಪಿನ ಬೀಜಗಳನ್ನು ಬಳಸಿ ಸಸಾರಜನಕಯುಕ್ತ ಆಹಾರ ತಯಾರಿಸುವುದರಲ್ಲಿ ಪ್ರಸಿದ್ಧಿ ಪಡೆದಿದೆ. ಅದಕ್ಕಾಗಿಯೇ, ಮಜೆಂಟಾ ಬಣ್ಣ ಮತ್ತು ಬಿಳಿ ಬಣ್ಣದ ಹೂಗಳನ್ನು ಬಿಟ್ಟು ಬೀಜಗಳನ್ನು ಕೊಡುವ ದಂಟು ಸೊಪ್ಪಿನ (ಅಮರಾಂತಸ್) ತಳಿಗಳ ಉತ್ಪಾದನೆ ನಡೆದಿದೆ. ಆ ಬೀಜಗಳಲ್ಲಿ ಶೇ. 13ರಿಂದ 16ರಷ್ಟು ಸಸಾರಜನಕವಿರುತ್ತದೆ. ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ 10 ಅಮೈನೋ ಆಮ್ಲಗಳಲ್ಲೊಂದಾದ ಲೈಸಿನ್ ಅಮೈನೋ ಆಮ್ಲವು ಈ ದಂಟು ಸೊಪ್ಪಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇಂತಹ ಪೌಷ್ಟಿಕಾಂಶಗಳ ಸಂಪದ್ಭರಿತ ಬೆಳೆಗಳನ್ನು ಬೆಳೆಯಲು ರೈತ ಮಹಿಳೆಯರಿಗೆ ಉತ್ತೇಜನ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ವಿಜ್ಞಾನಿಗಳು: ಡಾ. ಕಲ್ಪನ ಬಿ (9448088958) ಮತ್ತು ಡಾ. ಗೀತಾ ಎಂ. ಯಂಕಂಚಿ (9448335077). ಮಿಂಚಂಚೆ : [email protected]
ಕೊನೆಯ ಮಾತು
ಕೃಷಿ ನಿರತ ಮಹಿಳೆಯರು ಈ ಯೋಜನೆಯಲ್ಲಿ ಹಲವು ಚಟುವಟಿಕೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ಬಹು ವಿಷಯಗಳ ತಜ್ಞರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ಒಂದೆಜ್ಜೆ ಮುಂದೆ ಇಟ್ಟು ಉಡುಪು ಮತ್ತು ವಸ್ತ್ರ ವಿನ್ಯಾಸವನ್ನೂ ರೈತ ಮಹಿಳೆಯರಿಗೆ ಕಲಿಸಿಕೊಡುತ್ತಿದೆ. ಅದೇ ವಿವಿಯು ಬಾಲಕಿಯರಿಗಾಗಿ ಗೃಹ ವಿಜ್ಞಾನದಲ್ಲಿ ಪದವಿ ವ್ಯಾಸಂಗ ಕಾರ್ಯಕ್ರಮ ನಡೆಸುತ್ತಿತ್ತು. ಇದೀಗ ಅಲ್ಲಿ ಬಿಎಸ್ಸಿ (ಆನರ್ಸ್) ಸಮುದಾಯ ವಿಜ್ಞಾನ ಎಂಬ ಪದವಿ ವ್ಯಾಸಂಗ ಕಾರ್ಯಕ್ರಮವಿದೆ. ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್ಸಿ (ಆನರ್ಸ್) ಆಹಾರ, ಪೋಷಣೆ ಮತ್ತು ಪಥ್ಯಾಹಾರ ಪದವಿಯ ವ್ಯಾಸಂಗವಿದೆ. ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಅಡಿಯಲ್ಲಿ ಗೃಹ ವಿಜ್ಞಾನ ಕಾಲೇಜಿದೆ. ಈ ಎಲ್ಲಾ ಪದವಿ ಅಭ್ಯರ್ಥಿಗಳಿಗೆ ಇಂತಹ ಕೃಷಿ ನಿರತ ಮಹಿಳೆಯರ ಯೋಜನೆಯ ಚಟುವಟಿಕೆಗಳ ಮಾಹಿತಿಯ ಅವಶ್ಯಕತೆಯಿದೆ. ಸಾರ್ವಜನಿಕರಿಗೂ ಅವಶ್ಯಕತೆಯಿದೆ.

ಅತಿ ಮುಖ್ಯವಾಗಿ ರೈತ ಮಹಿಳೆಯರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಸಮಗ್ರ ಶಿಕ್ಷಣಕ್ಕೆ, ನಾಡಿನ ಪ್ರಗತಿಗೆ ಒಂದೇ ಸೂರಿನಡಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಮತ್ತು ಅರಣ್ಯ ಕೃಷಿಯಂತಹ ತಜ್ಞ ಮಾಹಿತಿಯನ್ನು ಒದಗಿಸಲು ತಜ್ಞರ ಸೇವೆಯನ್ನು ಬಳಸಿಕೊಳ್ಳಲು ಈ ಎಲ್ಲಾ ಬಹು ಶಿಸ್ತುಗಳನ್ನೊಳಗೊಂಡ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಮರುರಚನೆಯಾಗಬೇಕು. ಅದು ಈ ಕಾಲದ ತುರ್ತು. ನಿವೃತ್ತ ಮುಖ್ಯ ಕಾರ್ಯದರ್ಶಿಯವರಾದ ಟಿ. ಎಂ. ವಿಜಯಭಾಸ್ಕರ್ರವರ ಸಮಿತಿಯು 2025ರಲ್ಲಿ ಸಲ್ಲಿಸಿರುವ ವರದಿಯ ಶಿಫಾರಸ್ಸಿಗೆ ಜೀವ ಕೊಟ್ಟು ‘ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆ’ಯನ್ನು ಆಧ್ಯತೆಯ ಮೇರೆಗೆ ಮಾಡಬೇಕು. ಇಲ್ಲವಾದರೆ, ‘ರನ್ನಿಂಗ್ ಫ್ರಮ್ ಪಿಲ್ಲರ್ ಟು ಪೋಸ್ಟ್’ ಎಂಬ ಆಂಗ್ಲ ನಾಣ್ಣುಡಿಯಂತಾಗುತ್ತದೆ. ಹಾಗೆ, ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಓಡಾಡುತ್ತಿದ್ದರೆ ಅದು ಅಂತಹ ಉತ್ತಮ ಫಲವನ್ನೇನೂ ನೀಡುವುದಿಲ್ಲ. ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆಯಿಂದ ಸಮಾಜಕ್ಕೆ ಒಳಿತಾಗಲಿದೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



