ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಅವರ ಕುಟುಂಬಸ್ಥರು ಉಜ್ಜಯಿನಿಯಲ್ಲಿ ಭಾರೀ ಪ್ರಮಾಣದ ಭೂ ಹಗರಣ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಕೊನೆಗೂ ಆಡಳಿತಾರೂಢ ಬಿಜೆಪಿ ಮೌನ ಮುರಿದಿದೆ. ಕಾಂಗ್ರೆಸ್ ಮತ್ತು ಮಾಧ್ಯಮಗಳ ತನಿಖಾ ವರದಿಗಳು ಎತ್ತಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿಕೊಂಡಿದೆ.
ಬಿಜೆಪಿಯ ಐಟಿ ಸೆಲ್ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ಮತ್ತು ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಹೇಮಂತ್ ಖಾಂಡೇಲ್ವಾಲ್ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ರಾಮಮಂದಿರದಿಂದ ಉಜ್ಜಯಿನಿ ಮಾಸ್ಟರ್ ಪ್ಲಾನ್‌ವರೆಗೆ: ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯ ಲೂಟಿ
ಮುಖ್ಯಮಂತ್ರಿ ಮೋಹನ್ ಯಾದವ್ ಅವರು 2023ರ ವಿಧಾನಸಭಾ ಚುನಾವಣೆಯ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದ 17 ಎಕರೆ ಕೃಷಿ ಭೂಮಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಎಂ ಆದ ಬಳಿಕ ಅವರು ಯಾವುದೇ ಹೊಸ ಭೂಮಿ ಖರೀದಿಸಿಲ್ಲ ಎಂದು ಬಿಜೆಪಿ ಹೇಳಿದೆ.
ಇನ್ನು ಸಿಎಂ ಪತ್ನಿ ಸೀಮಾ ಯಾದವ್ ಹೆಸರಿನಲ್ಲಿರುವ 12.29 ಎಕರೆ ಹಾಗೂ ಪುತ್ರ ವೈಭವ್ ಯಾದವ್ ಹೆಸರಿನಲ್ಲಿರುವ 16 ಎಕರೆ ಭೂಮಿಯು ಮಾಸ್ಟರ್ ಪ್ಲಾನ್ ಜಾರಿಗೆ ಬರುವ ಮುನ್ನವೇ ಅವರ ಹೆಸರಿನಲ್ಲಿತ್ತು. ಸಿಎಂ ಆದ ಬಳಿಕ ಇದರಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದೂ ಹೇಳಿದೆ.
ಕಾಂಗ್ರೆಸ್ ಆರೋಪಿಸಿರುವ ಸಿದ್ದಿವಿನಾಯಕ ಕಂಪನಿಯು 2023ರ ಚುನಾವಣೆಯ ವೇಳೆ 68 ಎಕರೆ ಭೂಮಿ ಹೊಂದಿತ್ತು, ಪ್ರಸ್ತುತ ಅದು 65 ಎಕರೆಗೆ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ, ಮೋಹನ್ ಯಾದವ್ ಅವರು 2017ರಲ್ಲೇ ಈ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರಸ್ತುತ ಇದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಮಂತ್ ಖಾಂಡೇಲ್ವಾಲ್ ತಿಳಿಸಿದ್ದಾರೆ.
ಖ್ಯಾತ ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ತನಿಖಾ ವರದಿಯನ್ನು ಆಧರಿಸಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟವಾರಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಮೋಹನ್ ಯಾದವ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ (2021-2023) ಅವರ ಕುಟುಂಬದ ಭೂಮಿ 82 ಎಕರೆ ಇತ್ತು. ಆದರೆ ಅವರು 2023ರ ಡಿಸೆಂಬರ್‌ನಲ್ಲಿ ಸಿಎಂ ಆದ ಬಳಿಕ (2024-2025ರ ಅವಧಿಯಲ್ಲಿ) ಅದು ಬರೋಬ್ಬರಿ 335 ಎಕರೆಗೆ (ಅಂದರೆ ಸುಮಾರು 168 ಎಕರೆ ಹೊಸದಾಗಿ ಸೇರ್ಪಡೆ) ಏರಿಕೆಯಾಗಿದೆ ಎಂದು ತನಿಖಾ ವರದಿ ಬಹಿರಂಗಪಡಿಸಿದೆ.
ಸರ್ಕಾರವು ಹೊಸ ರಸ್ತೆ ಯೋಜನೆಗಳನ್ನು ಹಾಗೂ ‘ಉಜ್ಜಯಿನಿ ಮಾಸ್ಟರ್ ಪ್ಲಾನ್-2035’ ಅನ್ನು ಪ್ರಕಟಿಸುವ ಮುನ್ನವೇ, ಆಯಕಟ್ಟಿನ ಜಾಗಗಳನ್ನು ಸಿಎಂ ಕುಟುಂಬದ ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಸಂಬಂಧಿಕರು ಖರೀದಿಸಿದ್ದಾರೆ. ಇದು ನೇರ ಹಿತಾಸಕ್ತಿ ಸಂಘರ್ಷ ಎಂದು ಆರೋಪಿಸಿರುವ ಕಾಂಗ್ರೆಸ್, ಸಿಎಂ ರಾಜೀನಾಮೆಗೆ ಆಗ್ರಹಿಸಿದೆ ಹಾಗೂ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ. ಆದರೆ ಈ ಸಂಬಂಧ ಬಿಜೆಪಿ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಮೌನ ಮುರಿದು ಸಮರ್ಥನೆಗೆ ಇಳಿದಿದೆ.




