ಅಷ್ಟಕ್ಕೂ ಇಲ್ಲಿ ಮಹಮ್ಮದ್ ಘಜ್ನಿ ಏನಿಲ್ಲ. ಹಾಗಿರುವಾಗ ಹಿಂದೂ ದೇವಾಲಯಗಳನ್ನು ಯಾರು ಲೂಟಿ ಮಾಡುತ್ತಿರುವವರು? ಬಿಜೆಪಿ ಏಕೆ ಬಾಯಿ ಮುಚ್ಚಿಕೊಂಡು ಕುಳಿತಿದೆ? ದೇವಾಲಯದ ಎಲ್ಲ ನೌಕರರು ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಅಲ್ಲವೇ? ಹಾಗಿರುವಾಗ ಈಗ ಕಳ್ಳರು ಯಾರು? ಹಿಂದುತ್ವದ ವ್ಯಾಪಾರ ಮಾಡುವ ಬಿಜೆಪಿಗರಿಗೆ ರಾಮ ಮಂದಿರದಿಂದ ಬರುವ ದೇಣಿಗೆಗಳು ಗಳಿಕೆಯ ಸಾಧನ ಎಂಬುದು ಸ್ಪಷ್ಟ ಎನ್ನುತ್ತದೆ ಶಿವಸೇನೆಯ ಅಧಿಕೃತ ಮುಖವಾಣಿ ಸಾಮ್ನಾ.
ಬಿಜೆಪಿ ಆಳ್ವಿಕೆಯಲ್ಲಿ ದೇಶದ ಪ್ರಮುಖ ದೇವಾಲಯಗಳು ಲೂಟಿಗೆ ಒಳಗಾಗುತ್ತಿವೆ. ಇವುಗಳಲ್ಲಿ ಅಯೋಧ್ಯೆಯ ರಾಮ ಮಂದಿರ ಮತ್ತು ಉಜ್ಜಯಿನಿಯ ಮಹಾಕಾಳ ದೇವಸ್ಥಾನವೂ ಸೇರಿವೆ. ಇದರೊಂದಿಗೆ, ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದಲ್ಲಿ ನಡೆದ ₹550 ಕೋಟಿ ಬೆಳ್ಳಿ ಹಗರಣ, ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನದ ಕಳ್ಳತನ ಹಗರಣ ಮತ್ತು ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ₹250 ಕೋಟಿ ಲಡ್ಡು ಹಗರಣ ಬಿಜೆಪಿಯ ಹಿಂದುತ್ವದ ಮುಖವಾಡ ಬಯಲಾಗಿಸಿದೆ.
ಇತಿಹಾಸ ತಿರುವಿ ನೋಡಿದಾಗ ಮೊಘಲರು ದೇವಾಲಯಗಳನ್ನು ಲೂಟಿ ಮಾಡಿದ್ದರು ಎಂಬ ದಾಖಲೆಗಳು ಸಿಗುತ್ತವೆ. ವಿಪರ್ಯಾಸವೆಂದರೆ ಅಂದು ಮೊಘಲರು ಮಾಡಿದ ಕೃತ್ಯದ ಅಪವಾದವನ್ನು ಇಂದಿನ ಮುಸ್ಲಿಮರ ಮೇಲೆ ಹೊರಿಸಲಾಗುತ್ತಿದೆ. ಆದರೆ, ಇಂದು ಶ್ರೀರಾಮಮಂದಿರ ಉಜ್ಜಯಿನಿಯ ಮಹಾಕಾಳ ದೇವಸ್ಥಾನದವರೆಗಿನ ಪ್ರಕರಣಗಳು ಮೊಘಲರೂ ಆಶ್ಚರ್ಯಪಡುವಂತದ್ದು. ಬಿಜೆಪಿಗರ ಈ ಲೂಟಿಯ ಮುಂದೆ ಮೊಘಲರೇ ‘ಸಂತರು’ ಎಂದೆನಿಸುತ್ತಾರೆ!
ಇದನ್ನೂ ಓದಿ: ಸಾವರ್ಕರ್‌ನ ‘ಅಖಂಡ ಭಾರತ’ ಕನಸು ನನಸಾಗಿಸುವ ಅವಕಾಶ ಕಳೆದುಕೊಂಡ ಮೋದಿ ಸರ್ಕಾರ: ಶಿವಸೇನೆ
ಲಕ್ಷಾಂತರ ಭಕ್ತರು ಪೂಜೆ, ಪ್ರಾರ್ಥನೆ ಸಲ್ಲಿಸಲು ತೆರಳುವ ಹಿಂದೂಗಳ ಪವಿತ್ರ ಸ್ಥಳ ಉಜ್ಜಯಿನಿ. ಇಂದಿನ ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಪ್ರಾಚೀನ ನಗರವಾದ ಉಜ್ಜಯಿನಿಯನ್ನು ‘ಸ್ಮಾರ್ಟ್ ಸಿಟಿ’ಯನ್ನಾಗಿ ಮಾಡಲು ಅಭಿವೃದ್ಧಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಅಭಿವೃದ್ಧಿಯ ನಂತರ, ಇಂದಿನ ಅಗ್ಗದ ಭೂಮಿಯ ಬೆಲೆ ಚಿನ್ನದ ಮೌಲ್ಯದ್ದಾಗುವುದು ಖಚಿತ. ಅದಕ್ಕಾಗಿಯೇ ಈಗಲೇ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕುಟುಂಬವು ಈ ‘ಮಾಸ್ಟರ್ ಪ್ಲಾನ್’ ಪ್ರದೇಶದಲ್ಲಿ 168 ಎಕರೆ ಭೂಮಿಯನ್ನು ಕೋಟಿಗಟ್ಟಲೆ ಬೆಲೆಗೆ ಖರೀದಿಸಿದೆ. ಮುಖ್ಯಮಂತ್ರಿಯ ಪತ್ನಿ, ಸೊಸೆ, ಸಹೋದರ, ಸಹೋದರಿ, ಸೋದರಳಿಯ ಸೇರಿದಂತೆ ಇಡೀ ಕುಟುಂಬವು ಉಜ್ಜಯಿನಿ ನಗರವನ್ನು ಲೂಟಿ ಮಾಡಿದೆ. ದೇವಾಲಯ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಅನ್ನು ಈ ಕುಟುಂಬದ ಆರ್ಥಿಕ ಲಾಭಕ್ಕಾಗಿ ಸಿದ್ಧಪಡಿಸಲಾಗಿದೆ ಎಂಬ ಆರೋಪಗಳೂ ಇವೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಈ ಲೂಟಿ ಘಜ್ನಿ ಮಹಮ್ಮದ್ ನಡೆಸಿದ ಲೂಟಿಗಿಂತ ಕೆಟ್ಟದಾಗಿದೆ. ಬಿಜೆಪಿಯ ಭ್ರಷ್ಟ ಹಿಂದುತ್ವವಾದಿಗಳು ರಾಮಮಂದಿರ ಹೆಸರಲ್ಲಿ ಲೂಟಿಯ ಸರಣಿ ನಡೆಸುತ್ತಿದೆ.
ದೇಣಿಗೆ ಮತ್ತು ದೇಣಿಗೆ ಪಾತ್ರೆಗಳ ಕಳ್ಳತನದ ಪ್ರಕರಣಗಳು
ಕೆಲವು ದಶಕಗಳ ಹಿಂದೆ, ಬಿಜೆಪಿ ‘ಗಂಗಾ ಜಲ’ ಬಾಟಲಿಗಳನ್ನು ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿತ್ತು. ಆದರೆ ಅದರ ಲೆಕ್ಕ ಮಾತ್ರ ಇಂದಿಗೂ ಸಿಕ್ಕಿಲ್ಲ. ಅದಾದ ಬಳಿಕ ‘ಕರಸೇವಾ’ ಯುಗದಿಂದ ರಾಮಮಂದಿರ ದೇಣಿಗೆಗಳ ಕಳ್ಳತನ ಆರಂಭವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗುವ ಮೊದಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಮಯದಲ್ಲಿ, ಬಿಜೆಪಿಗೆ ಸೇರಿದ ಗುಂಪುಗಳು ಅತ್ಯಂತ ಅಗ್ಗದ ಬೆಲೆಗೆ ಭೂಮಿಯನ್ನು ಖರೀದಿಸಿ ಅದೇ ಭೂಮಿಯನ್ನು ರಾಮಮಂದಿರ ಟ್ರಸ್ಟ್‌ಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದವು. ಈ ಮೂಲಕ ಬಿಜೆಪಿಗರು ಕೋಟಿಗಟ್ಟಲೆ ಸಂಪಾದಿಸಿದರು.
ನೂರಾರು ಜನರು ತಮ್ಮ ರಕ್ತ ಸುರಿಸಿ ತಮ್ಮ ಪ್ರಾಣ ಬಲಿ ಕೊಟ್ಟ ಅದೇ ಭೂಮಿಯನ್ನು ಬಿಜೆಪಿಗರು ಬಹಿರಂಗವಾಗಿ ತಮ್ಮ ವ್ಯಾಪಾರಕ್ಕೆ ಬಳಸಿಕೊಂಡರು. ಈಗ, ದೇವಾಲಯ ನಿರ್ಮಾಣದ ನಂತರ, ಈ ಸಂಪೂರ್ಣ ಯೋಜನೆಯು ಕಳ್ಳರು ಮತ್ತು ದರೋಡೆಕೋರರ ಗುಹೆಯಾಗಿ ಮಾರ್ಪಟ್ಟಿದೆ. ಹಿಂದುತ್ವದ ವ್ಯಾಪಾರ ಮಾಡುವ ಬಿಜೆಪಿಗರಿಗೆ ರಾಮಮಂದಿರದಿಂದ ಬರುವ ದೇಣಿಗೆಗಳು ಗಳಿಕೆಯ ಸಾಧನವಾಗಿದೆ. ಈವರೆಗೆ ರಾಮಮಂದಿರದಲ್ಲಿ ₹1400 ಕೋಟಿಯನ್ನು ದೋಚಿದ್ದಾರೆ. ಈ ಹಗರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ, ರಾಮಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಕಳ್ಳತನ ಮತ್ತು ಕಮಿಷನ್ ದಂಧೆ ಆರೋಪಗಳು ಮುಂದುವರೆದಿವೆ. ಯೋಜನೆ ಪ್ರಾರಂಭಿಸಿದವರು ಪ್ರತಿ ಹಂತದಲ್ಲೂ ಶೇಕಡ 25ರಷ್ಟು ಕಮಿಷನ್ ಪಡೆದಿದ್ದಾರೆ ಎಂಬುದರ ಪುರಾವೆಗಳು ಬೆಳಕಿಗೆ ಬಂದಿವೆ. ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನಿತ್ಯಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯಂದಾಸ್ ಹೇಳುವಂತೆ, “ರಾಮ ಮಂದಿರದಲ್ಲಿನ ಕಳ್ಳತನ ಪ್ರಕರಣವನ್ನು ತನಿಖೆ ಮಾಡಬೇಕು, ಆದರೆ ಯಾರು ತನಿಖೆ ಮಾಡಬೇಕು? ಒಂದೇ ಜಾತಿಯಲ್ಲಿರುವ ಎಲ್ಲರೂ ಅಪ್ರಾಮಾಣಿಕರು. ಅಯೋಧ್ಯೆಯಲ್ಲೀಗ ಯಾರೂ ತೊಳೆದ ಅನ್ನದಂತಿಲ್ಲ (ಯಾವುದೇ ಅಪರಾಧ ಮಾಡದೆ ಇರುವ ವ್ಯಕ್ತಿಯೇನಲ್ಲ)” ಇದು ಒಬ್ಬ ಸಂತನ ಮಾತುಗಳು. ಇದು ಸರಳ ವಿಷಯವೇನಲ್ಲ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ವಿವಾದ | ₹1 ಲಕ್ಷಕ್ಕಿಂತಲೂ ಕಡಿಮೆಯಾದ ದಿನದ ಸಂಗ್ರಹ
ರಾಮ ಜನ್ಮಭೂಮಿಗಾಗಿ ಹುತಾತ್ಮ
1992ರಲ್ಲಿ ಬಾಬರಿ ಮಸೀದಿ ಧ್ವಂಸದ ಘಟನೆಯ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದೇ ದಿನ ಅವರ ಸರ್ಕಾರವನ್ನು ಕೇಂದ್ರ ಸರ್ಕಾರವು ವಜಾಗೊಳಿಸಿತು. ರಾಮಜನ್ಮಭೂಮಿ ನೆಪದಲ್ಲಿ ಹಲವಾರು ಸಾವುನೋವುಗಳು ಸಂಭವಿಸಿತು. ಕಾನೂನು ಹೋರಾಟದ ಬಳಿಕ ಕೊನೆಗೂ ರಾಮಮಂದಿರ ನಿರ್ಮಾಣಗೊಂಡಿದೆ. ಆದರೆ ಅದು ಕಳ್ಳರ ಕೈಯಲ್ಲಿದೆ.
ಅಷ್ಟಕ್ಕೂ ಇಲ್ಲಿ ಮಹಮ್ಮದ್ ಘಜ್ನಿ ಏನಿಲ್ಲ. ಹಾಗಿರುವಾಗ ಹಿಂದೂ ದೇವಾಲಯಗಳನ್ನು ಯಾರು ಲೂಟಿ ಮಾಡುತ್ತಿರುವವರು? ಬಿಜೆಪಿ ಏಕೆ ಬಾಯಿ ಮುಚ್ಚಿಕೊಂಡು ಕುಳಿತಿದೆ? ದೇವಾಲಯದ ಎಲ್ಲ ನೌಕರರು ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಅಲ್ಲವೇ? ಹಾಗಿರುವಾಗ ಈಗ ಕಳ್ಳರು ಯಾರು?
ದೇವಾಲಯದ ನಿರ್ಮಾಣದ ಸಮಯದಲ್ಲಿ, 1250 ‘ರಾಮಶಿಲೆ’ಗಳನ್ನು ಕದ್ದೊಯ್ಯಲಾಗಿದೆ. ಈ ದುಬಾರಿ ಕಲ್ಲುಗಳನ್ನು ಮಾರಿಷಸ್‌ನಿಂದ ತರಲಾಗಿತ್ತು ಮತ್ತು ಅವುಗಳಿಗೆ ಚಿನ್ನ ಲೇಪಿಸಲಾಗಿತ್ತು. ಈಗ ಸಾವಿರಕ್ಕೂ ಹೆಚ್ಚು ಚಿನ್ನದ ಕಲ್ಲುಗಳು ಕಣ್ಮರೆಯಾಗಿದೆ. ಹಿಂದುತ್ವದ ವಿಷಯವನ್ನು ಜನರ ಮುಂದಿಟ್ಟು ಸಾರಸಗಟಾಗಿ ಕಳ್ಳತನ ನಡೆದಿದೆ.
ಗಂಗಾ ಶುದ್ಧೀಕರಣ ಯೋಜನೆಯಲ್ಲಿ ಗುತ್ತಿಗೆದಾರರು ಸಾವಿರಾರು ಕೋಟಿ ಹಣ ತಿಂದರು. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಗುಜರಾತ್‌ನ ಗುತ್ತಿಗೆದಾರರು ಲೂಟಿ ಮಾಡಿದರು. ಈಗ ಗುಜರಾತ್‌ನ ಗುತ್ತಿಗೆದಾರರು ನಾಸಿಕ್‌ನಲ್ಲಿ ನಡೆದ ಕುಂಭಮೇಳದಲ್ಲಿ ಹಣ ಲೂಟಿ ಮಾಡಲು ಒಟ್ಟಾಗಿ ಬಂದಿದ್ದಾರೆ. ಬ್ರಿಟಿಷ್ ಮತ್ತು ಮೊಘಲ್ ಆಕ್ರಮಣಕಾರರ ಕಾಲಕ್ಕಿಂತ ಬಿಜೆಪಿ ಯುಗದಲ್ಲಿ ದೇಶದಲ್ಲಿ ಹೆಚ್ಚಿನ ದೇವಾಲಯಗಳನ್ನು ಲೂಟಿ ಮಾಡಲಾಗಿದೆ. ಬಿಜೆಪಿಯವರೇ ದೇವಾಲಯಗಳಲ್ಲಿ ಲೂಟಿ ಮಾಡುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಅಯೋಧ್ಯೆ ಮತ್ತು ಉಜ್ಜಯಿನಿ ಲೂಟಿಯ ಹಿಂದೆ ಪಾಕಿಸ್ತಾನದ ಪಿತೂರಿ ಇದೆ ಎಂಬ ಸುದ್ದಿ ಬರುವುದರಲ್ಲಿ ಸಂಶಯವಿಲ್ಲ!
ರಾಮ ಮಂದಿರದ ‘ಟ್ರಸ್ಟಿ’ ಚಂಪತ್ ರಾಯ್ ಪ್ರತಿದಿನ ಹಾಲಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಪಾಕಿಸ್ತಾನಿಗರು ಅವರ ಹಾಲನ್ನು ಕಲಬೆರಕೆ ಮಾಡಿ ಚಂಪತ್ ರಾಯ್‌ರನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಕತೆ ಬರಬಹುದು. ಬಿಜೆಪಿಯವರು ಮಹಮ್ಮದ್ ಘಜ್ನವಿ ಹಿಂದುತ್ವವನ್ನು ಅಣಕಿಸುತ್ತಾ ದೇವಾಲಯಗಳ ಲೂಟಿ ಮಾಡುತ್ತಿದ್ದಾರೆ. ಶ್ರೀ ರಾಮ, ಇದನ್ನೆಲ್ಲ ಕೂತು ನೋಡುವಂತಾಗಿದೆ!
ಮೂಲ: ಶಿವಸೇನೆಯ ಅಧಿಕೃತ ಮುಖವಾಣಿ ಸಾಮ್ನಾದ ಜೂನ್ 24ರ ಸಂಪಾದಕೀಯ.




