ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ನಾಗರಿಕರು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ. ಆದರೆ, ಇದೇ ವೇಳೆ ದೇಶದ ಕೆಲವೆಡೆ ಬಿಜೆಪಿಗರು ರಾಷ್ಟ್ರ ಧ್ವಜದ ಬದಲು ತಮ್ಮ ಪಕ್ಷದ ಧ್ವಜವನ್ನು ಹಾರಿಸಿರುವ ಘಟನೆಗಳು ವರದಿಯಾಗಿವೆ. ಬಿಜೆಪಿಗರ ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢ ರಾಜ್ಯಗಳ ಕೆಲ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಧ್ವಜಾರೋಹಣದ ಸಮಯದಲ್ಲಿ ತ್ರಿವರ್ಣ ಧ್ವಜದ ಬದಲಾಗಿ ತಮ್ಮ ಪಕ್ಷದ ಬಾವುಟವನ್ನೇ ಹಾರಿಸಿದ್ದಾರೆ. ಘಟನೆಯ ವಿಡಿಯೋಗಳು ವೈರಲ್ ಆಗಿವೆ. ವಿಡಿಯೋಗಳಲ್ಲಿ; ಬಿಜೆಪಿ ಕಾರ್ಯಕರ್ತರು ‘ವಂದೇ ಮಾತರಂ’ ಗೀತೆ ಹಾಡುತ್ತಾ, ಹೂವಿನ ಎಸಳುಗಳನ್ನು ಎರಚುತ್ತಾ ಬಿಜೆಪಿ ಧ್ವಜವನ್ನು ಹಾರಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಈ ಘಟನೆಯ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಉತ್ತರ ಪ್ರದೇಶದ ಪ್ರಸಿದ್ಧ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್, “ಬಿಜೆಪಿ ನಾಯಕರು ತ್ರಿವರ್ಣ ಧ್ವಜದ ಬದಲಿಗೆ ತಮ್ಮ ಪಕ್ಷದ ಧ್ವಜವನ್ನೇ ಹಾರಿಸಿದರೆ, ಅವರನ್ನು ಪ್ರಶ್ನಿಸುವವರು ಅಥವಾ ಕ್ರಮ ಕೈಗೊಳ್ಳುವವರು ಯಾರಾದರೂ ಇದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಕುರುದ್‌ನಲ್ಲೂ ಇದೇ ರೀತಿಯ ಘಟನೆ ನಡೆದಿದರ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ.
ಭಾರತೀಯ ಧ್ವಜ ಸಂಹಿತೆ ಹಾಗೂ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯಿದೆ-1971’ರ ಪ್ರಕಾರ, ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ದಿನಗಳಲ್ಲಿ ರಾಷ್ಟ್ರ ಧ್ವಜವನ್ನು ಹೊರತುಪಡಿಸಿ ಬೇರೆ ಯಾವುದೇ ಧ್ವಜವನ್ನು ಹಾರಿಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ.



