ಕೆಲವರಿಗೆ, 'ಆರ್ಥಿಕ ಕುಸಿತ' ಎಂಬುದು ಉತ್ಪ್ರೇಕ್ಷೆಯಾಗಿರಬಹುದು. ಆದರೆ ಅದು ವಾಸ್ತವ. ನಾವು ದತ್ತಾಂಶ, ದಾಖಲೆಗಳನ್ನು ಎಷ್ಟು ತಡಕಾಡಿದರೂ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಪಟ್ಟವನ್ನು ತ್ಯಜಿಸುವ ಸಮಯ ಇದು ಎನ್ನುತ್ತಾರೆ ಸುರಜಿತ್ ಭಲ್ಲಾ!
ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳನ್ನು ದೀರ್ಘಕಾಲದಿಂದ ಬೆಂಬಲಿಸುತ್ತಾ ಬಂದಿರುವ ಖ್ಯಾತ ಆರ್ಥಿಕ ತಜ್ಞ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮಾಜಿ ಕಾರ್ಯಕಾರಿ ನಿರ್ದೇಶಕ ಸುರಜಿತ್ ಭಲ್ಲಾ ಇದೀಗ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಚುನಾವಣೆ ಗೆಲುವಿನ ಶಿಖರವನ್ನೇನೋ ಮುಟ್ಟಿದೆ. ಆದರೆ ಅದೇ ಬಿಜೆಪಿ ದೇಶದ ಅರ್ಥಸ್ಥಿತಿಯನ್ನು ಪಾತಾಳಕ್ಕೆ ಕೆಡವಿದೆ” ಎಂದು ಆರ್ಥಿಕ ಪರಿಣಿತ ಸುರಜಿತ್ ಭಲ್ಲಾ ಹೇಳಿದ್ದಾರೆ.
ಈ ಸಂಬಂಧ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಸುರಜಿತ್ ಭಲ್ಲಾ ಅವರ ಲೇಖನವೊಂದು ಪ್ರಕಟವಾಗಿದೆ. ಈವರೆಗೂ ಹಲವು ಬಾರಿ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಹೊಗಳುತ್ತಾ ಬಂದಿರುವ ಸುರಜಿತ್ ಅವರು ಈ ಲೇಖನದಲ್ಲಿ ದೇಶದ ಆರ್ಥಿಕ ಸ್ಥಿತಿ ಅಪಾಯದಲ್ಲಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಗೆಲುವು ಕಂಡಿದೆ. 2029ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದರೆ ಚುನಾವಣೆ ಗೆಲುವಿನ ಶಿಖರವನ್ನು ಬಿಜೆಪಿ ಏರಿಕೂತಂತೆ. ಅದೇ ಸಮಯದಲ್ಲಿ ಬಿಜೆಪಿ ಸರ್ಕಾರದ ಆರ್ಥಿಕತೆಯ ನಿರ್ವಹಣೆಯು ಕೆಳಮಟ್ಟಕ್ಕೆ ತಲುಪಿದೆ. ದೇಶದ ಅರ್ಥಸ್ಥಿತಿ ಇನ್ನಷ್ಟೂ ಕೆಳಕ್ಕಿಳಿಯದು ಎಂದು ಹೇಳುವ ಭರವಸೆಯಿಲ್ಲ. ಆದರೆ ಈ ಎರಡೂ ಘಟನೆಗಳು ಕಾಕತಾಳೀಯವೇ ಅಥವಾ ಏಕಕಾಲದಲ್ಲಿ ನಿರ್ಧಾರವಾಗಿರುವುದೇ ಎಂಬ ಪ್ರಶ್ನೆಯನ್ನು ಸುರಜಿತ್ ಎತ್ತಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!
ಆರ್ಥಿಕ ಪರಿಣಿತ ಸುರಜಿತ್ ಭಲ್ಲಾ ಹೇಳುವುದೇನು ಈ ಕೆಳಗಿದೆ:
“ಆರ್ಥಿಕ ಹಳಿತಪ್ಪುವಿಕೆಗೆ ನಾಲ್ಕು ಏಜೆಂಟರು ಕಾರಣ. ಮೊದಲ ಮತ್ತು ಅತ್ಯಂತ ಮುಖ್ಯವಾದದ್ದು ಸರ್ಕಾರವೇ. ಸರ್ಕಾರ ಸಮಸ್ಯೆಯನ್ನು ಗುರುತಿಸುತ್ತದೆ. ಆದರೆ ಬಿಕ್ಕಟ್ಟಿಗೆ ಇತರರನ್ನು ದೂಷಿಸಿ ತೃಪ್ತಿ ಪಡುತ್ತದೆ. ಎರಡನೇ ಏಜೆಂಟ್ ಪ್ರಮುಖ ಉದ್ಯಮ. ಮೂರನೇ ಏಜೆಂಟ್ ಕಾಂಗ್ರೆಸ್ ಪಕ್ಷ. ಇದು ಗಾಂಧಿಯವರ ನೇತೃತ್ವದಲ್ಲಿ ಎಷ್ಟು ಆರಾಮದಾಯಕವಾಗಿದೆಯೆಂದರೆ ಬಿಜೆಪಿಯ ಏಕಪಕ್ಷೀಯ ಪ್ರಜಾಪ್ರಭುತ್ವ ಆಡಳಿತವು ಬಹುತೇಕ ಖಚಿತವಾಗಿದೆ. ನಾಲ್ಕನೇ ಏಜೆಂಟರು ಈ ಅಗ್ರ ಮೂರನ್ನೂ ನಿಯಂತ್ರಿಸುವ ಡೀಪ್ ಸ್ಟೇಟ್”
(‘ಡೀಪ್ ಸ್ಟೇಟ್’ -Deep State ಎಂದರೆ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ನಿಯಂತ್ರಣಕ್ಕೆ ಸಿಗದೆ, ತೆರೆಮರೆಯಲ್ಲಿ ಸರ್ಕಾರಿ ವ್ಯವಸ್ಥೆ, ಮಿಲಿಟರಿ, ಗುಪ್ತಚರ ಸಂಸ್ಥೆಗಳು ಮತ್ತು ಬೃಹತ್ ಕಾರ್ಪೊರೇಟ್ ಶಕ್ತಿಗಳ ಮೂಲಕ ದೇಶದ ನೀತಿ-ನಿಯಮಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಒಂದು ರಹಸ್ಯ ಜಾಲ.)
“ರಾಜಕೀಯವಾಗಿ ಬಿಜೆಪಿ ಎತ್ತರಕ್ಕೆ ಏರುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಗೆಲುವು ಮತ್ತು ಭಾರತದಲ್ಲಿ ಬಹುತೇಕ ಏಕಪಕ್ಷೀಯ ಪ್ರಜಾಪ್ರಭುತ್ವ ಆಡಳಿತ ಅದನ್ನು ಸ್ಪಷ್ಟಗೊಳಿಸುತ್ತದೆ. ಕೆಲವರಿಗೆ, ‘ಆರ್ಥಿಕ ಕುಸಿತ’ ಎಂಬುದು ಉತ್ಪ್ರೇಕ್ಷೆಯಾಗಿರಬಹುದು. ಆದರೆ ಅದು ವಾಸ್ತವ. 2014ರಿಂದ ಬಿಜೆಪಿ ಆಡಳಿತದ ಅವಧಿಯಲ್ಲಿ, GDP ಬೆಳವಣಿಗೆಯ ವಿಷಯದಲ್ಲಿ ಭಾರತದ ಸ್ಥಾನ ಒಂಬತ್ತನೇ ಸ್ಥಾನದಲ್ಲಿದೆ. ತಲಾ GDP ಬೆಳವಣಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಯುಎಸ್ ಡಾಲರ್ ಎದುರು ಬಲಗೊಳ್ಳುತ್ತಿರುವ ಕರೆನ್ಸಿಗಳಲ್ಲಿ ಬಾಂಗ್ಲಾದೇಶದ ಕರೆನ್ಸಿ ಮೊದಲ ಸ್ಥಾನದಲ್ಲಿದೆ. ಬಾಂಗ್ಲಾದ ವಾರ್ಷಿಕ ಸರಾಸರಿ ತಲಾ ಬೆಳವಣಿಗೆ ಶೇ. 8.3. ಇಥಿಯೋಪಿಯಾ 7.2 ರೊಂದಿಗೆ 2 ನೇ ಸ್ಥಾನದಲ್ಲಿದೆ, ಭಾರತ ಕೇವಲ 4.7 ರೊಂದಿಗೆ 16ನೇ ಸ್ಥಾನದಲ್ಲಿದೆ. ನಾವು ದತ್ತಾಂಶ, ದಾಖಲೆಗಳನ್ನು ಎಷ್ಟು ತಡಕಾಡಿದರೂ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಪಟ್ಟವನ್ನು ತ್ಯಜಿಸುವ ಸಮಯ ಇದು!”
“ಕಳೆದ ವರ್ಷ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಸುಮಾರು ಶೇ. 12 ರಷ್ಟು ಅಪಮೌಲ್ಯಗೊಂಡಿದೆ. ಸತತ ಏಳನೇ ವರ್ಷ ಕುಸಿತ ಕಂಡಿದೆ. 2025ರಲ್ಲಿ ಏಷ್ಯಾದ ಅತ್ಯಂತ ಕಳಪೆ ಪ್ರದರ್ಶನ ನೀಡುವ ಕರೆನ್ಸಿಗಳಲ್ಲಿ ಸ್ಥಾನ ಪಡೆದಿದೆ. ಇಂದು ಭಾರತವು ‘ಸಮಗ್ರ ಅರ್ಥಶಾಸ್ತ್ರದ ವಿರೋಧಾಭಾಸ’ (Macroeconomic Paradox) ಹೊಂದಿದೆ.”
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಪಕ್ಷ ಸಭೆ ಎಂದಾಕ್ಷಣ ಹೆದರಿ ಓಡುವುದೇಕೆ ಪ್ರಧಾನಿ ಮೋದಿ?
(ಆರ್ಥಿಕತೆಯಲ್ಲಿ ಒಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಗೆ ಅನುಕೂಲಕರವಾಗಿರುವ ನಿರ್ಧಾರಗಳು, ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ (ಒಟ್ಟಾರೆಯಾಗಿ) ಹಾನಿಕಾರಕವಾಗುವುದನ್ನೇ ‘ಸಮಗ್ರ ಅರ್ಥಶಾಸ್ತ್ರದ ವಿರೋಧಾಭಾಸ’ ಎಂದು ಕರೆಯಲಾಗುತ್ತದೆ)
“ಭಾರತೀಯರು ಮತ್ತು ವಿದೇಶಿಯರು ಭಾರತದಲ್ಲಿ ಹೂಡಿಕೆ ಮಾಡುವಲ್ಲಿ ಹೆಚ್ಚು ಆಕರ್ಷಕವಾಗಿಸಲು ಅಗತ್ಯವಿರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಬದಲು ಶಸ್ತ್ರಚಿಕಿತ್ಸೆ ಅಗತ್ಯವಿರುವೆಡೆ ಬ್ಯಾಂಡ್-ಏಡ್‌ಗಳನ್ನು ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ”
“ಭಾರತದಲ್ಲಿ ಹೂಡಿಕೆ ಮಾಡುವ ವಾತಾವರಣವು ತೀರಾ ಹದಗೆಟ್ಟಿದೆ. ವಿದೇಶಿ ನೇರ ಹೂಡಿಕೆ (FDI) ಋಣಾತ್ಮಕ (Negative) ಮಟ್ಟಕ್ಕೆ ತಲುಪಿದೆ. ಅಂದರೆ, ದೇಶಕ್ಕೆ ಹರಿದು ಬರುತ್ತಿರುವ ವಿದೇಶಿ ಬಂಡವಾಳಕ್ಕಿಂತ ಹೆಚ್ಚಾಗಿ ದೇಶದಿಂದ ಹೊರಹೋಗುತ್ತಿರುವ ಬಂಡವಾಳದ ಪ್ರಮಾಣ ಹೆಚ್ಚಾಗಿದೆ. ವಿದೇಶಿ ಹೂಡಿಕೆದಾರರು ಮಾತ್ರವಲ್ಲದೆ, ಸ್ವತಃ ಭಾರತೀಯ ಉದ್ಯಮಿಗಳೂ ಸಹ ದೇಶದಲ್ಲಿ ಹೊಸದಾಗಿ ಬಂಡವಾಳ ಹೂಡಲು ಆಸಕ್ತಿ ತೋರುತ್ತಿಲ್ಲ”
2017ರಿಂದ ಜಾರಿಗೆ ತರಲಾದ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ (BITs) ರದ್ದತಿ ಮತ್ತು ಕಠಿಣ ಎಫ್‌ಡಿಐ ನಿಯಮಗಳೇ ಈ ಹಿನ್ನಡೆಗೆ ಮುಖ್ಯ ಕಾರಣ. ಹೂಡಿಕೆ ವಿವಾದಗಳನ್ನು ಮೂರನೇ ದೇಶಗಳಲ್ಲಿ ಬಗೆಹರಿಸುವ ಬದಲು ಭಾರತೀಯ ನ್ಯಾಯಾಲಯಗಳಲ್ಲೇ ಇತ್ಯರ್ಥಪಡಿಸಬೇಕು ಎಂಬ ನಿಯಮ ಹೂಡಿಕೆದಾರರನ್ನು ಹಿಂಜರಿಯುವಂತೆ ಮಾಡಿದೆ.
ಯಾವುದೇ ಪಕ್ಷ ರಾಜಕೀಯ ಯಶಸ್ಸು ಕಂಡಿದೆ ಎಂದರೆ ಆ ಪಕ್ಷದ ಸರ್ಕಾರದ ನೀತಿ ಈಗಾಗಲೇ ಸಾಕಷ್ಟು ಉತ್ತಮವಾಗಿದೆ ಎಂಬ ನಂಬಿಕೆ ಹುಟ್ಟುವುದೇ ಒಂದು ಆಳವಾದ ಅಪಾಯ. ವಾಸ್ತವ ಹಾಗಿರುವುದಿಲ್ಲ. ಪ್ರಸ್ತುತ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಆರ್ಥಿಕ ಸುಧಾರಣೆಗಳಿಗೆ ಪರಿಪೂರ್ಣ ಬಿರುಗಾಳಿಯಾಗಿದೆ. ಹೂಡಿಕೆ ವಾತಾವರಣವನ್ನು ಸುಧಾರಿಸಲು, ಒಪ್ಪಂದದ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು ಮತ್ತು ಸುಧಾರಣೆಯ ಬಗ್ಗೆ ಗಂಭೀರತೆಯನ್ನು ಸೂಚಿಸಲು ಸರ್ಕಾರ ಈ ಕ್ಷಣವನ್ನು ಬಳಸದಿದ್ದರೆ ರಾಜಕೀಯ ಪ್ರಾಬಲ್ಯವಷ್ಟೇ ಕಾಣುತ್ತದೆ. ಚುನಾವಣೆಗಳು ಅಧಿಕಾರವನ್ನು ನೀಡಬಲ್ಲವು. ನೀತಿ ಮಾತ್ರ ಸಮೃದ್ಧಿಯನ್ನು ನೀಡಬಲ್ಲದು. ಜಗತ್ತು ನೋಡುತ್ತಿದೆ ಎಂಬುದು ನೆನಪಿರಬೇಕು”
ಮೂಲ: Surjit Bhalla writes: BJP is winning the elections but losing the economy




