ಕಮಲನಗರ ಪಟ್ಟಣದ ಬೀದರ್-ಕಮಲನಗರ ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಲಾದ ಬೀದಿದೀಪಗಳು ಕೆಟ್ಟು ನಿಂತಿದ್ದು, ತಕ್ಷಣವೇ ದುರಸ್ತಿಗೊಳಸಿಬೇಕೆಂದು ಆಗ್ರಹಿಸಿ ಕನ್ನಡ ಸೇನೆ ತಾಲೂಕು ಘಟಕ ಗುರುವಾರ ತಹಸೀಲ್ದಾರ್ ಅಮಿತ್ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಸೇನೆಯ ತಾಲೂಕಾಧ್ಯಕ್ಷ ಜನಾರ್ಧನ ಸಾವರ್ಗೆಕರ್ ಮಾತನಾಡಿ, ʼಪಟ್ಟಣದ ದಾದರಾ ಸೇತುವೆಯಿಂದ ತೆಲಂಗ ಕಲ್ಯಾಣ ಮಂಟಪವರೆಗೆ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ಹಲವು ದೀಪಗಳು ಸುಮಾರು 2 ತಿಂಗಳಿಂದ ಕೆಟ್ಟು ನಿಂತಿವೆ. ಈ ರಸ್ತೆಯಲ್ಲಿ ಜಿಲ್ಲೆ ಅಲ್ಲದೆ ನೆರೆಯ ಮಹಾರಾಷ್ಟ್ರದ ಸಾವಿರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ರಾತ್ರಿ ಹೊತ್ತು ವಾಹನ ದಟ್ಟಣೆ ಹೆಚ್ಚಿರುತ್ತದೆ, ಜನರ ಓಡಾಟವೂ ಅಧಿಕವಾಗುತ್ತದೆʼ ಎಂದರು.
ʼಇದೇ ಮುಖ್ಯರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ನೂರಾರು ಅಂಗಡಿಗಳಿವೆ. ಪಟ್ಟಣದಲ್ಲಿ ರೈಲ್ವೆ ನಿಲ್ದಾಣವೂ ಇರುವುದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಬೀದಿ ದೀಪಗಳು ಉರಿಯದ ಕಾರಣಕ್ಕೆ ಜನರು ರಾತ್ರಿ ಹೊತ್ತು ಭಯದಿಂದ ಕತ್ತಲಲ್ಲಿ ಓಡಾಡುವಂತಹ ಪರಿಸ್ಥಿತಿ ಇದೆʼ ಎಂದು ದೂರಿದರು.
ಈ ಬಗ್ಗೆ ಹಲವು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ಹೆದ್ದಾರಿ ರಸ್ತೆಯ ವಿಭಜಕಗಳಲ್ಲಿ ಕೆಟ್ಟು ನಿಂತ ಬೀದಿದೀಪಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | KKRTC ಬಸ್‌ಗಳಲ್ಲಿ UPI ಕ್ರಾಂತಿ: ಚಿಲ್ಲರೆ ಸಮಸ್ಯೆಗೆ ಸಿಕ್ತು ಮುಕ್ತಿ!
ಈ ಸಂದರ್ಭದಲ್ಲಿ ಪ್ರಮುಖರಾದ ಕಲ್ಯಾಣರಾವ ಬಿರಾದಾರ್ ಸೋನಾಳ, ವಿಜಯಕುಮಾರ್ ಸೂರ್ಯವಂಶಿ ಮತ್ತಿತರರಿದ್ದರು.




