2024–25ರ ಆರ್ಥಿಕ ವರ್ಷದಲ್ಲಿ ಭಾರತದ ರಾಜಕೀಯ ಪಕ್ಷಗಳು ಪಡೆದ ದೇಣಿಗೆಯ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನೀಡಿರುವ ವರದಿಯ ಪ್ರಕಾರ, ಆಡಳಿತಾರೂಢ ಬಿಜೆಪಿ ಇತರ ಎಲ್ಲ ರಾಷ್ಟ್ರೀಯ ಪಕ್ಷಗಳ ಒಟ್ಟು ದೇಣಿಗೆಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ಹಣವನ್ನು ಸಂಗ್ರಹಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿರುವ 20,000 ರೂ.ಗಿಂತ ಹೆಚ್ಚಿನ ಮೊತ್ತದ ದೇಣಿಗೆಗಳನ್ನು ಎಡಿಆರ್ ವಿಶ್ಲೇಷಿಸಿದೆ. ಈ ಪೈಕಿ, ಬಿಜೆಪಿ ಒಟ್ಟು 5,522 ದಾನಿಗಳಿಂದ 6,074.01 ಕೋಟಿ ರೂ. ದೇಣಿಗೆ ಪಡೆದಿದೆ. ಕಳೆದ ವರ್ಷಕ್ಕೆ (2,243.94 ಕೋಟಿ ರೂ.) ಹೋಲಿಸಿದರೆ ಇದು 171%ರಷ್ಟು ಭಾರಿ ಏರಿಕೆಯಾಗಿದೆ.
ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ಪಕ್ಷವು 2,501 ದಾನಿಗಳಿಂದ 517.39 ಕೋಟಿ ರೂ. ದೇಣಿಗೆ ಸಂಗ್ರಹಿಸಿದೆ. ಕಳೆದ ವರ್ಷದ 281.48 ಕೋಟಿ ರೂ.ಗೆ ಹೋಲಿಸಿದರೆ 84%ರಷ್ಟು ಏರಿಕೆ ಕಂಡಿದೆ.
ಆಮ್ ಆದ್ಮಿ ಪಕ್ಷವು 38.1 ಕೋಟಿ ರೂ., ಸಿಪಿಐ(ಎಂ) 16.9 ಕೋಟಿ ರೂ. ಹಾಗೂ ಎನ್‌ಸಿಪಿ 2 ಕೋಟಿ ರೂ.ಗಳನ್ನು ದೇಣಿಗೆಯಾಗಿ ಪಡೆದಿವೆ.
ಮತ್ತೊಂದು ರಾಷ್ಟ್ರೀಯ ಪಕ್ಷವಾದ ಬಿಎಸ್‌ಪಿ, ಕಳೆದ 19 ವರ್ಷಗಳಂತೆಯೇ ಕಳೆದ ವರ್ಷವೂ ತನಗೆ 20,000 ರೂ.ಗಿಂತ ಹೆಚ್ಚಿನ ಮೊತ್ತದ ಯಾವುದೇ ದೇಣಿಗೆ ಬಂದಿಲ್ಲ ಎಂದು ಘೋಷಿಸಿಕೊಂಡಿದೆ.
ರಾಜಕೀಯ ಪಕ್ಷಗಳಿಗೆ ಹರಿದು ಬಂದ ಒಟ್ಟು ನಿಧಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಪಾಲು ಸಿಂಹಪಾಲಿದೆ. ಒಟ್ಟು ದೇಣಿಗೆಯ 92.18% (6,128.7 ಕೋಟಿ ರೂ.) ಹಣವು ಕಾರ್ಪೊರೇಟ್ ಕಂಪನಿಗಳಿಂದ ಬಂದಿದೆ. ವೈಯಕ್ತಿಕ ದಾನಿಗಳಿಂದ 7.61% (₹505.6 ಕೋಟಿ) ದೇಣಿಗೆ ಸಂದಾಯವಾಗಿದೆ.
ದಾನಿಗಳಲ್ಲಿ ‘ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್’ ಅತಿ ಹೆಚ್ಚು ಹಣವನ್ನು ದೇಣಿಗೆಯಾಗಿ ನೀಡಿದೆ. ಈ ಟ್ರಸ್ಟ್ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿಗೆ ಒಟ್ಟಾರೆಯಾಗಿ 2,413.4 ಕೋಟಿ ರೂ. ನೀಡಿದೆ. ಇದರಲ್ಲಿ ಗರಿಷ್ಠ ಮೊತ್ತ ಅಂದರೆ 2,180.7 ಕೋಟಿ ರೂ. ಬಿಜೆಪಿಯ ಪಾಲಾಗಿದೆ.
ಈ ಲೇಖನ ಓದಿದ್ದೀರಾ?: ದೆಹಲಿ ಗಲಭೆ | ಕೋಮುದ್ವೇಷಿ ಕಪಿಲ್ ಮಿಶ್ರಾಗೆ ಮಂತ್ರಿಗಿರಿ; ಸೌಹಾರ್ದತೆ ಸಾರಿದ ಉಮರ್‌ಗೆ ಸೆರೆವಾಸ
ಇನ್ನು, ದೇಣಿಗೆ ನೀಡುವಲ್ಲಿ ಪಾರದರ್ಶಕತೆಯ ಕೊರತೆ ಇರುವುದನ್ನು ಎಡಿಆರ್ ಗಮನಿಸಿದ್ದು, ಗಂಭೀರ ಪ್ರಶ್ನೆಗಳನ್ನು ಎತ್ತಿದೆ. “ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳು ದೇಣಿಗೆ ವರದಿ ಸಲ್ಲಿಸುವಲ್ಲಿ ವಿಳಂಬ ಮಾಡಿವೆ. ಸುಮಾರು 205 ದೇಣಿಗೆಗಳಿಗೆ ಸಂಬಂಧಿಸಿದಂತೆ ಪ್ಯಾನ್ (PAN) ವಿವರಗಳನ್ನು ಸರಿಯಾಗಿ ನೀಡಲಾಗಿಲ್ಲ. ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ವಿವರಗಳಿಲ್ಲದ ಕಾರಣ ಹಣದ ಮೂಲ ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ವರದಿ ಮಾಡುವಿಕೆಯಿಂದ ತಪ್ಪಿಸಿಕೊಳ್ಳಲು ದೇಣಿಗೆಗಳನ್ನು ಸಣ್ಣ ಮೊತ್ತಗಳಾಗಿ ವಿಭಜಿಸುವ ಸಾಧ್ಯತೆಯೂ ಇದೆ” ಎಂದು ಎಡಿಆರ್ ಆತಂಕ ವ್ಯಕ್ತಪಡಿಸಿದೆ.
“ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು, ದಾನಿಗಳು ಕಡ್ಡಾಯವಾಗಿ ಪ್ಯಾನ್ ವಿವರಗಳನ್ನು ನೀಡುವುದನ್ನು ಕಡ್ಡಾಯಗೊಳಿಸಬೇಕು. ದೇಣಿಗೆ ವಿಭಜನೆಯನ್ನು ತಡೆಯಲು ಕಠಿಣ ಕಾನೂನು ತರಬೇಕು. ಚುನಾವಣಾ ಆಯೋಗವು ಅಪೂರ್ಣ ವರದಿಗಳನ್ನು ಸ್ವೀಕರಿಸದೆ ತಿದ್ದುಪಡಿಗಾಗಿ ಹಿಂತಿರುಗಿಸಬೇಕು. ರಾಜಕೀಯ ಪಕ್ಷಗಳ ಲೆಕ್ಕಪರಿಶೋಧನೆಯನ್ನು ಸ್ವತಂತ್ರ ಸಂಸ್ಥೆಗಳಿಂದ ನಡೆಸಬೇಕು. ರಾಜಕೀಯ ಪಕ್ಷಗಳನ್ನು ‘ಮಾಹಿತಿ ಹಕ್ಕು ಕಾಯ್ದೆ’ಯ (RTI) ಅಡಿ ತರುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಉತ್ತರದಾಯಿತ್ವ ತೋರುವಂತಾಗಬೇಕು” ಎಂದು ಎಡಿಆರ್ ಶಿಫಾರಸು ಮಾಡಿದೆ.



