72 ವರ್ಷ ವಯಸ್ಸಿನ ಕಟ್ಟಾ ಕಾಂಗ್ರೆಸಿಗ ಸಾದಿಕ್ ಪೈಲ್ವಾನ್ ಅವರು ತಮ್ಮ ರಾಜಕೀಯ ಗುರು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ 27ವರ್ಷದ ಸಮರ್ಥ್ ವಿರುದ್ಧ ತೊಡೆ ತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯದೇ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದರು. ಆದರೆ ಇಂದು ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಸಂಧಾನಕ್ಕೆ ಪೈಲ್ವಾನ್ ಮಣಿದಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ. ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಮುಸ್ಲಿಮರು ತಮ್ಮ ಹಕ್ಕಿನ ಟಿಕೆಟ್‌ಗಾಗಿ ಧ್ವನಿ ಎತ್ತಿದ್ದರು. ಅದರಲ್ಲೂ ಶಾಮನೂರು ಅವರ ಬಲಗೈ ಬಂಟ ಎನಿಸಿಕೊಂಡಿದ್ದ ಸಾದಿಕ್ ಪೈಲ್ವಾನ್ ಪ್ರಮುಖ ಆಕಾಂಕ್ಷಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಅವರು ಟಿಕೆಟ್‌ಗಾಗಿ ಹರ ಸಾಹಸಪಟ್ಟಿದ್ದರು. ಕಡೆಗೂ 93 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೇ ಕಾಂಗ್ರೆಸ್ ಟಿಕೆಟ್ ಕೊಟ್ಟಿತ್ತು. ಮಗ ಮಲ್ಲಿಕಾರ್ಜುನ ಅವರಿಗೂ ಟಿಕೆಟ್ ನೀಡಲಾಗಿತ್ತು. ಅಪ್ಪ ಮಗ ಇಬ್ಬರೂ ಗೆದ್ದು ಬಂದಿದ್ದರು. ಒಂದೇ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಶಾಮನೂರು ಸೊಸೆ ಡಾ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಟ್ಟು ಮುಸ್ಲಿಮರಿಗೆ ಕಾಂಗ್ರೆಸ್ ಮತ್ತೆ ಅನ್ಯಾಯ ಎಸಗಿತ್ತು.
ಅನಿವಾರ್ಯವಾಗಿ ಬಂದೊದಗಿದ ಉಪ ಚುನಾವಣೆಯಲ್ಲಾದರೂ ಪ್ರಬಲ ಕಾಂಗ್ರೆಸ್ ಆಕಾಂಕ್ಷಿ ಸಾದಿಕ್ ಅವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80ರಿಂದ 85 ಸಾವಿರ ಮುಸ್ಲಿಂ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೂ, ಆ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗದಿರುವುದು ʼಕಾಂಗ್ರೆಸ್‌ಗೆ ಮುಸ್ಲಿಮರು ವೋಟ್ ಬ್ಯಾಂಕ್ ಅಷ್ಟೇʼ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಒಂದು ಕಡೆ ಕುಟುಂಬ ರಾಜಕಾರಣವನ್ನು ಮುಂದುವರಿಸುತ್ತಿರುವುದು, ಮತ್ತೊಂದು ಕಡೆ ಮುಸಲ್ಮಾನರನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ಬಳಕೆ ಮಾಡಿಕೊಳ್ಳುವುದು ಕಾಂಗ್ರೆಸ್‌ನ ಎಡಬಿಡಂಗಿತನದ ಮುಖವಾಡವನ್ನು ಬಯಲು ಮಾಡಿದೆ.
72 ವರ್ಷ ವಯಸ್ಸಿನ ಕಟ್ಟಾ ಕಾಂಗ್ರೆಸಿಗ ಸಾದಿಕ್ ಪೈಲ್ವಾನ್ ಅವರು ತಮ್ಮದ್ದೇ ರಾಜಕೀಯ ಗುರು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ 27ವರ್ಷದ ಸಮರ್ಥ್ ವಿರುದ್ಧ ತೊಡೆ ತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿತ್ತು. ವಾಪಸ್ ಪಡೆಯದೇ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದರು. ಆದರೆ ಇಂದು ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಸಂಧಾನಕ್ಕೆ ಪೈಲ್ವಾನ್ ಮಣಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ. ಅತ್ತ ಎಸ್‌ಡಿಪಿಐ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಈ ಉಪ ಚುನಾವಣೆಯಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಲು ʼಅನುಕಂಪʼದ ಕಾರ್ಡ್ ಪ್ಲೇ ಮಾಡುತ್ತಿರುವ ಕಾಂಗ್ರೆಸ್ 2023ರಲ್ಲಿ ಮುಸ್ಲಿಮರಿಗೆ ಯಾಕೆ ಟಿಕೆಟ್ ನಿರಾಕರಿಸಿತು ಎಂಬುದಕ್ಕೆ ಉತ್ತರಿಸಬೇಕಿದೆ. ಬದುಕಿನ ಸಂಧ್ಯಾಕಾಲದಲ್ಲಿದ್ದ 93 ವರ್ಷದ ಶಾಮನೂರು ಅವರಿಗೆ ಟಿಕೆಟ್ ನೀಡುವ ಬದಲು ಪೈಲ್ವಾನ್ ಅವರಿಗೆ ಟಿಕೆಟ್ ನೀಡಬೇಕಿತ್ತು. ತಮ್ಮ ನಿಷ್ಠಾವಂತ ಬೆಂಬಲಿಗನಿಗೆ ಟಿಕೆಟ್ ನೀಡುವಂತೆ ಶಾಮನೂರು ಕುಟುಂಬವೇ ಉದಾರತೆ ತೋರಬೇಕಿತ್ತು. ಒಂದೇ ಮನೆಯಲ್ಲಿ ಇಬ್ಬರು ಶಾಸಕರು, ಒಬ್ಬರು ಸಂಸದೆ ಇದ್ದಾಗಲೂ ಮುಸ್ಲಿಂ ಸಮುದಾಯ ಸುಮ್ಮನಿತ್ತು. ಈಗ ಶಾಮನೂರು ನಿಧನರಾದ ಮೇಲೂ ಆ ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ಕೊಡಲು ಆ ಕುಟುಂಬ ಬಿಡುತ್ತಿಲ್ಲ ಎಂಬುದು ನಿಜಕ್ಕೂ ವಿಶ್ವಾಸದ್ರೋಹದ ಕೆಲಸ. ಈ ಬಾರಿ ಸಮರ್ಥ್‌ಗೆ ಅನುಕಂಪದ ಟಿಕೆಟ್ ಕೊಟ್ಟಿರುವ ಕಾಂಗ್ರೆಸ್ 2028ರಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಿದೆಯೇ? ಅಂತಹ ಮಾತುಗಳು ಕಾಂಗ್ರೆಸ್‌ನಿಂದ ಬಂದಿಲ್ಲ. ಬಿ ಫಾರಂ ಕೊಟ್ಟ ಮರುದಿನವೇ ಸಿಎಂ, ಡಿಸಿಎಂ ಕ್ಷೇತ್ರದಲ್ಲಿ ಬೃಹತ್ ರ್ಯಾಲಿ ಮಾಡಿ ಮತ ಯಾಚಿಸಿದ್ದಾರೆ. ಕೆಲವು ಅತೃಪ್ತ ಮುಸಲ್ಮಾನರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಇವೆಲ್ಲ ಕ್ಷಣಿಕ ಆವೇಶದ ನಡೆ ಇರಬಹುದು; ಆದರೆ ಪಕ್ಕಾ ಕಾಂಗ್ರೆಸ್ ಕ್ಷೇತ್ರ ಬಿಜೆಪಿ ಕೈವಶವಾಗಲು ಇದು ಕಾರಣವಾದರೆ ಅಚ್ಚರಿಯಿಲ್ಲ.
ಕರ್ನಾಟಕದ 2023ರ ವಿಧಾನಸಭಾ ಚುನಾವಣೆ ಗಮನಿಸಿದರೆ ಇಡೀ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಒಂದಾಗಿ ಕಾಂಗ್ರೆಸ್ ಬೆಂಬಲಿಸಿದೆ. ಪರಂಪರಾಗತವಾಗಿ ಜೆಡಿಎಸ್‌ಗೆ ಹೋಗುತ್ತಿದ್ದ ಮತಗಳೂ ಕಾಂಗ್ರೆಸ್ ಬುಟ್ಟಿಗೆ ಬಿದ್ದಿವೆ. ಕಾಂಗ್ರೆಸ್ ಕೂಡ 130 ಸೀಟುಗಳ ಗಡಿ ದಾಟುವ ವಿಶ್ವಾಸ ಹೊಂದಿರಲಿಲ್ಲ. ʼಈ ದಿನ. ಕಾಮ್ʼ ಸರ್ವೆ ಮಾತ್ರ ಕಾಂಗ್ರೆಸ್ 134ರ ಗಡಿ ದಾಟುವ ಸೂಚನೆ ನೀಡಿತ್ತು. ಈ ದೊಡ್ಡ ಗೆಲುವಿನ ಪಾಲು ಮುಸ್ಲಿಂ ಮತದಾರರಿಗೂ ಸೇರಬೇಕು. ಆದರೆ, ಅಧಿಕಾರ -ಅವಕಾಶ ನೀಡುವ ಸಮಯದಲ್ಲಿ ಮುಸ್ಲಿಂ ಸಮುದಾಯದವರು ಅತ್ತೂ ಕರೆದು ಅವಕಾಶ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣ ಮಾಡಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಪಾಠ ಕಲಿಯಲೇಬೇಕು. ಇಷ್ಟೊಂದು ಬಹುಮತದ ಸರ್ಕಾರ ಇರುವಾಗ ದಾವಣಗೆರೆ ದಕ್ಷಿಣದ ಟಿಕೆಟ್ ನೀಡುವಾಗ ಅನುಕಂಪವೆಂಬ ಹಳಸಲು ನಿಯಮ ಮೀರಿ ಹೆಚ್ಚು ಮತದಾರರಿದ್ದು ಸಲೀಸಾಗಿ ಗೆಲ್ಲಬಹುದಾದ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡಿ ತನ್ನ ಬದ್ಧತೆ ತೋರಬೇಕಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕೂಡ ಶಾಮನೂರು ಕುಟುಂಬದ ಒತ್ತಡಕ್ಕೆ ಮಣಿದು ಮುಸಲ್ಮಾನರ ಸಿಟ್ಟಿಗೆ ಗುರಿಯಾಗಿದೆ. ರಾಹುಲ್ ಗಾಂಧಿಯವರ ಚಿಂತನೆ, ಅವರ ಬದ್ಧತೆ, ಆಲೋಚನೆಯೇ ಬೇರೆ. ತಳಮಟ್ಟದಲ್ಲಿ ಕಾಂಗ್ರೆಸ್ ಧೋರಣೆಯೇ ಬೇರೆ ಎಂಬುದು ಈ ಉಪಚುನಾವಣೆಯಲ್ಲಿ ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತಿದೆ.
ಉಪಚುನಾವಣೆಯ ಕುಸ್ತಿ ಕಣದಿಂದ ಸಾದಿಕ್ ಹಿಂದೆ ಸರಿದಿರಬಹುದು, ಅದಕ್ಕಾಗಿ ಸಿಎಂ ನಡೆಸಿದ ಸಂದಾನ ಯಶಸ್ವಿಯಾಗಿರಬಹುದು. ಆದರೆ, ಮುಸ್ಲಿಮರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಅಸಹನೆ ಹೊಗೆಯಾಡದಿರದು. ಮುಂದಿನ ಚುನಾವಣೆಯ ವೇಳೆಗೆ ಅದೇನಾದರೂ ದಟ್ಟವಾದರೆ ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬ ಎಚ್ಚರ ಕಾಂಗ್ರೆಸ್ ಹೈಕಮಾಂಡ್‌ಗೆ ಇದ್ದರೆ ಒಳಿತು. ಅದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದ ಅಲ್ಪಸಂಖ್ಯಾತರಿಗೆ ಅವರ ಹಕ್ಕಿನ ಅವಕಾಶ ನೀಡುವ ಉದಾರತೆ ಕಾಂಗ್ರೆಸ್ ತೋರಬೇಕಿದೆ.




