ತಮಿಳುನಾಡು ವಿಧಾನಸಭಾ ಚುನಾವಣೆಗೆ ರಾಜಕೀಯ ತಂತ್ರಗಾರಿಕೆ ಚುರುಕುಗೊಂಡಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಈ ಬಾರಿ ವಿಲ್ಲುಪುರಂ ಜಿಲ್ಲೆಯ ಸಾತ್ತೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ನಾಗೇಂದ್ರನ್ 2021ರ ವಿಧಾನಸಭಾ ಚುನಾವಣೆಯಲ್ಲಿ ತಿರುನೆಲ್ವೇಲಿ ಕ್ಷೇತ್ರದಿಂದ ಜಯಗಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಬದಲಾವಣೆ ಮಾಡಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.
ಕನ್ಯಾಕುಮಾರಿಯಲ್ಲಿ ಇಂದು(ಮಾ.27) ವರದಿಗಾರರೊಂದಿಗೆ ಮಾತನಾಡಿದ ನಾಗೇಂದ್ರನ್, “ನಾನು ಸಾತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಲಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಾಜಿ ಅಧ್ಯಕ್ಷರಿಗೆ ಟಿಕೆಟ್ ಇನ್ನೂ ನೀಡದೆ ಇರುವುದರ ಬಗ್ಗೆ ತಮಿಳುನಾಡಿನಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರು ಕ್ಷೇತ್ರ ಬದಲಾವಣೆ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ನೈನಾರ್ ನಾಗೇಂದ್ರನ್ ಅವರ ಬೆನ್ನಲ್ಲೇ, ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಾನತಿ ಶ್ರೀನಿವಾಸ್ ಕೂಡ ಕ್ಷೇತ್ರ ಬದಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಗುರುವಾರ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ವಾನತಿ ಭಾಗಿಯಾಗಿದ್ದರು. 2021ರಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ನಟ ಕಮಲ್ ಹಾಸನ್ ಅವರನ್ನು ಸೋಲಿಸಿ ಸಂಚಲನ ಮೂಡಿಸಿದ್ದರು.
ಇದನ್ನೂ ಓದಿ : ಕೇರಳ ಚುನಾವಣೆ | ಪ್ರಗತಿಪರ ರಾಜ್ಯದಲ್ಲಿ ಮಹಿಳೆಯರಿಗಿಲ್ಲ ಟಿಕೆಟ್: ಪರಂಪರಾಗತ ಅನ್ಯಾಯ ಮುಂದುವರಿಕೆ
ಸೀಟು ಹಂಚಿಕೆಯ ಒಪ್ಪಂದದಲ್ಲಿ ಎಐಎಡಿಎಂಕೆ, ಬಿಜೆಪಿಗೆ ತಿರುನೆಲ್ವೇಲಿ ಮತ್ತು ಕೊಯಮತ್ತೂರು ದಕ್ಷಿಣ ಕ್ಷೇತ್ರಗಳನ್ನು ಬಿಟ್ಟುಕೊಡದ ಕಾರಣ, ಇಬ್ಬರೂ ಪ್ರಮುಖ ನಾಯಕರು ಹೊಸ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು, ಬಿಜೆಪಿ ತಾನು ಗೆಲ್ಲುವ ಕ್ಷೇತ್ರಗಳ ಬಗ್ಗೆ ಎಐಎಡಿಎಂಕೆ ಜೊತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತಿದೆ ಎಂಬ ವರದಿಗಳಿವೆ. ಪಕ್ಷ ಮತ್ತು ಮೈತ್ರಿಯನ್ನು ಗೆಲ್ಲಿಸುವುದಕ್ಕೆ ಡಿಎಂಕೆ ನೇತೃತ್ವದ ಒಕ್ಕೂಟದ ಪಕ್ಷಗಳ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಕ್ಕೆ ಬಿಜೆಪಿ ಮತ್ತು ಎಐಎಡಿಎಂಕೆ ಮುಂದಾಗಿದೆ. ಹಾಗಾಗಿ ಈ ಬದಲಾವಣೆ ನಡೆಯುತ್ತಿದೆ ಎಂಬ ಚರ್ಚೆಗಳೂ ಇವೆ.




