ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಿರುವ ಅಲ್ಲಿನ ಬಿಜೆಪಿ ಸರ್ಕಾರ, ದೇಶದಲ್ಲೇ ಮೊದಲ ಬಾರಿಗೆ ಯುಸಿಸಿಯನ್ನು ಜಾರಿಗೊಳಿಸಿದ್ದು ನಾವೇ ಎಂದು ಬೀಗುತ್ತಿದೆ. ಇದರ ಬೆನ್ನಲ್ಲೇ, ಅಸ್ಸಾಂನ ಬಿಜೆಪಿ ಸರ್ಕಾರವು ಯುಸಿಸಿ ಜಾರಿಗೆ ತರಲು ಮುಂದಾಗಿದೆ. ಅದಕ್ಕಾಗಿ, ವ್ಯವಸ್ಥಿತ ಭೂಮಿಕೆಯನ್ನು ಸಿದ್ಧಪಡಿಸುತ್ತಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು, ನೇರವಾಗಿ ಯುಸಿಸಿ ಜಾರಿಗೊಳಿಸುವ ಮುನ್ನ, ಅದಕ್ಕೆ ಪೂರಕವಾಗಿ ಕೆಲವು ಚಾಲ್ತಿಯಲ್ಲಿದ್ದ ಕಾಯ್ದೆಗಳನ್ನು ರದ್ದುಗೊಳಿಸಿದೆ. ಹೊಸ ನಿಯಮಗಳನ್ನು ಜಾರಿಗೆ ತಂದು, ತಳಹದಿ ನಿರ್ಮಿಸುತ್ತಿದೆ.
ಮುಖ್ಯವಾಗಿ, ‘ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935’ಅನ್ನು ಸರ್ಕಾರ ರದ್ದುಗೊಳಿಸಿದೆ. ಈ ಕಾಯ್ದೆಯಡಿ ಮುಸ್ಲಿಂ ಸಮುದಾಯದ ವಿವಾಹ ಮತ್ತು ವಿಚ್ಛೇದನಗಳನ್ನು ನೋಂದಾಯಿಸಲು ಸರ್ಕಾರಿ ಅಧಿಕಾರಿಗಳ ಬದಲಿಗೆ ‘ಕಾಜಿ’ಗಳಿಗೆ ಅಧಿಕಾರ ನೀಡಲಾಗಿತ್ತು. ಈಗ, ಆ ಕಾಯ್ದೆಯನ್ನು ರದ್ದುಗೊಳಿಸಿ, ಮುಸ್ಲಿಂ ವಿವಾಹಗಳ ನೋಂದಣಿಯನ್ನು ಕಡ್ಡಾಯವಾಗಿ ಜಿಲ್ಲಾ ನೋಂದಣಾಧಿಕಾರಿಗಳ ಮೂಲಕವೇ ಮಾಡಬೇಕೆಂದು ಆದೇಶಿಸಿದೆ.
ಅದೇ ರೀತಿ, ಬಹುಪತ್ನಿತ್ವವನ್ನು (ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವ ಪದ್ಧತಿ) ಕಾನೂನುಬದ್ಧವಾಗಿ ನಿಷೇಧಿಸಲು ಅಸ್ಸಾಂ ಸರ್ಕಾರವು ಪ್ರತ್ಯೇಕ ಮಸೂದೆಯನ್ನು ಸಿದ್ಧಪಡಿಸಿದೆ. ಈ ಕಾನೂನು ಮುಖ್ಯವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಆದರೆ, ಇದು ರಾಜ್ಯದ ಎಲ್ಲ ನಾಗರಿಕರಿಗೂ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಅಸ್ಸಾಂ ಸರ್ಕಾರ ಮತ್ತು ಯುಸಿಸಿ ಬೆಂಬಲಿಗರು ಈ ಕಾನೂನುಗಳ ಜಾರಿಯ ಹಿಂದೆ ಯಾವುದೇ ರಾಜಕೀಯ ಅಥವಾ ಧಾರ್ಮಿಕ ದ್ವೇಷವಿಲ್ಲ. ಬದಲಿಗೆ ಇದು ಸಾಮಾಜಿಕ ನ್ಯಾಯದ ಭಾಗ ಎಂದು ವಾದಿಸುತ್ತಾರೆ. ಬಾಲ್ಯ ವಿವಾಹ ತಡೆ, ಮಹಿಳಾ ಸಬಲೀಕರಣ ಹಾಗೂ ಕಾನೂನಿನಲ್ಲಿ ಏಕರೂಪತೆ ತರುವುದಷ್ಟೇ ಸರ್ಕಾರದ ಉದ್ದೇಶವೆಂದು ಸಮರ್ಥಿಸಿಕೊಂಡಿದ್ದಾರೆ.
ಆದಾಗ್ಯೂ, ಸರ್ಕಾರದ ಈ ಕ್ರಮಗಳು ವ್ಯಾಪಕ ರಾಜಕೀಯ ಮತ್ತು ಸಾಮಾಜಿಕ ವಿರೋಧಕ್ಕೂ ಕಾರಣವಾಗಿವೆ. ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಸರ್ಕಾರದ ಉದ್ದೇಶಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಅಸ್ಸಾಂನ ಪ್ರಮುಖ ವಿಪಕ್ಷಗಳಾಗಿರುವ ಎಐಯುಡಿಎಫ್, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು, ಬಿಜೆಪಿ ಸರ್ಕಾರವು ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೂಲೆಗುಂಪು ಮಾಡಲು ಈ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸುತ್ತವೆ.
ಚುನಾವಣೆಗಳಲ್ಲಿ ಕೋಮು ಧ್ರುವೀಕರಣ ಸಾಧಿಸಲು ಇಂತಹ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಭಾರತದ ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವನ್ನು ಪಾಲಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ಮುಸ್ಲಿಂ ಪರ್ಸನಲ್ ಲಾ ಪ್ರಕಾರ ನಡೆಯುವ ವಿವಾಹ ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯದಲ್ಲಿದ್ದ ಮುಸ್ಲಿಂ ಮ್ಯಾರೇಜ್ ರಿಜಿಸ್ಟ್ರಾರ್‌ಗಳು (ಕಾಜಿ) ಈ ನಿರ್ಧಾರದಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳಲಿದ್ದಾರೆ. ಅವರಿಗೆ ಪರ್ಯಾಯ ಉದ್ಯೋಗ ಅಥವಾ ಪರಿಹಾರದ ವ್ಯವಸ್ಥೆಯನ್ನು ಸರ್ಕಾರ ಸರಿಯಾಗಿ ಕಲ್ಪಿಸಿಲ್ಲ ಎಂಬ ಆಕ್ರೋಶವೂ ಇದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’
ಗಮನಾರ್ಹವಾಗಿ, ಅಸ್ಸಾಂನಲ್ಲಿ ಯುಸಿಸಿ ಜಾರಿಗೊಳಿಸುವುದು ಉತ್ತರಾಖಂಡದಷ್ಟು ಸುಲಭವಲ್ಲ. ಏಕೆಂದರೆ, ಅಸ್ಸಾಂ ವೈವಿಧ್ಯಮಯ ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ರಾಜ್ಯ. ಅಸ್ಸಾಂನ ಬೋಡೋಲ್ಯಾಂಡ್, ಕರ್ಬಿ ಆಂಗ್ಲಾಂಗ್ ಮತ್ತು ದಿಮಾ ಹಸಾವೊ ಸ್ವಾಯತ್ತ ಪ್ರದೇಶಗಳು ಸಂವಿಧಾನದ 6ನೇ ಅನುಸೂಚಿಯಡಿ ರಕ್ಷಣೆ ಪಡೆದಿವೆ. ಈ ಪ್ರದೇಶಗಳ ಬುಡಕಟ್ಟು ಜನರಿಗೆ ತಮ್ಮದೇ ಆದ ಸಾಂಪ್ರದಾಯಿಕ ಕಾನೂನುಗಳು ಮತ್ತು ಆಚರಣೆಗಳನ್ನು ಹೊಂದುವ ಹಕ್ಕಿದೆ. ಅವರ ಹಕ್ಕಿನಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
ಅಸ್ಸಾಂ ದೇಶದಲ್ಲೇ ಜಮ್ಮು-ಕಾಶ್ಮೀರದ ನಂತರ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯ. ಇಲ್ಲಿ 34%ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯಿದೆ. ಇಲ್ಲಿ, ಸ್ಥಳೀಯ ಅಸ್ಸಾಮಿ ಮುಸ್ಲಿಮರು ಮತ್ತು ವಲಸೆ ಬಂದ ಬಂಗಾಳಿ ಭಾಷಿಕ ಮುಸ್ಲಿಮರಿದ್ದಾರೆ. ಈ ಎರಡೂ ಸಮುದಾಯಗಳನ್ನು ಗುರಿಯಾಗಿಸಿಕೊಂಡು, ಯುಸಿಸಿ ಜಾರಿಗೆ ಬಿಜೆಪಿ ಮುಂದಾಗಿದೆ ಎಂದು ಆರೋಪಿಸಲಾಗಿದೆ.



