ಮಳೆ ಅಭಾವದಿಂದ ಹತ್ತಿ ಬೆಳೆ ಸಂಪೂರ್ಣ ಒಣಗುತ್ತಿದ್ದುದನ್ನು ಕಂಡು ಮನನೊಂದ ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ಮಲ್ಲಿಕಾರ್ಜುನ (38) ಎಂದು ಗುರುತಿಸಲಾಗಿದೆ. ಅವರು 8 ಎಕರೆ ಬಾಡಿಗೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದು, ಮಳೆ ನಂಬಿ ಎರಡು ಬಾರಿ ಬಿತ್ತನೆ ಮಾಡಿದ್ದರು. ಆದರೆ ಸಮರ್ಪಕ ಮಳೆಯಾಗದ ಕಾರಣ ಬೆಳೆ ಒಣಗಲಾರಂಭಿಸಿತ್ತು. ಬೆಳೆ ಕೈಕೊಟ್ಟಿದ್ದರಿಂದ ಉಂಟಾದ ಆರ್ಥಿಕ ಸಂಕಷ್ಟ ಮತ್ತು ನಿರಾಸೆಯಿಂದ ಅವರು ಹೊಲದಲ್ಲೇ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ.
ಅಸ್ವಸ್ಥಗೊಂಡ ಅವರನ್ನು ಕುಟುಂಬದವರು ತಕ್ಷಣ ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಮುಂದುವರಿದರೂ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಮಂಗಳವಾರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇದನ್ನು ಓದಿದ್ದೀರಾ? ಕಲಬುರಗಿ | ಅಕ್ರಮ ಆಸ್ತಿ ಆರೋಪ; ಜೆಸ್ಕಾಂ ಎಇಇ ಅಮೃತರಾವ್ ಲೋಕಾಯುಕ್ತ ಬಲೆಗೆ
ರೈತನ ಸಾವಿನಿಂದ ಕುಟುಂಬಸ್ಥರು ತೀವ್ರ ದುಃಖಕ್ಕೊಳಗಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




