ಬೆಳಗಾವಿ ನಗರದ ಬಿಮ್ಸ್ (BIMS) ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಆಸ್ಪತ್ರೆಗೆ ಪ್ರವೇಶಿಸುತ್ತಿದ್ದಂತೆ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ತುಂಬಿದ್ದ ಜನಜಂಗುಳಿಯನ್ನು ಕಂಡು ಉಪ ಲೋಕಾಯುಕ್ತರು ಅಚ್ಚರಿ ವ್ಯಕ್ತಪಡಿಸಿದರು. ಬಳಿಕ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು. ರೋಗಿಗಳಿಗೆ ಅನುಕೂಲವಾಗುವಂತೆ ಒಪಿಡಿ ಕೌಂಟರ್ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಸೈನಿಕರಿಗಾಗಿ ಪ್ರತ್ಯೇಕ ಕೌಂಟರ್ ಆರಂಭಿಸುವಂತೆ ವೈದ್ಯರಿಗೆ ಸೂಚಿಸಿದರು.
ಪರಿಶೀಲನೆ ವೇಳೆ ಪ್ರತಿಯೊಬ್ಬ ರೋಗಿಯ ಬಳಿಗೂ ತೆರಳಿ, ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ವೈದ್ಯರು ನೀಡುತ್ತಿರುವ ಚಿಕಿತ್ಸೆಯ ಕುರಿತು ವಿಚಾರಿಸಿದರು. ರೋಗಿಗಳಿಗೆ ಸರಿಯಾಗಿ ಡ್ರೆಸ್ಸಿಂಗ್ ಮಾಡದಿರುವುದು ಗಮನಕ್ಕೆ ಬಂದಾಗ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
‘ಸರಿಯಾಗಿ ಡ್ರೆಸ್ಸಿಂಗ್ ಮಾಡಲು ಆಗುವುದಿಲ್ಲವೇ? ಆಸ್ಪತ್ರೆಯಲ್ಲೇ ಔಷಧಗಳಿದ್ದರೂ ರೋಗಿಗಳಿಗೆ ಹೊರಗಡೆ ಔಷಧ ಖರೀದಿಸುವಂತೆ ಏಕೆ ಚೀಟಿ ಬರೆದುಕೊಡುತ್ತೀರಿ?’ ಎಂದು ಪ್ರಶ್ನಿಸಿದರು. ರೋಗಿಗಳಿಗೆ ಅಗತ್ಯವಿರುವ ಎಲ್ಲ ಔಷಧಗಳನ್ನು ಆಸ್ಪತ್ರೆಯಲ್ಲೇ ಒದಗಿಸುವಂತೆ ಸೂಚಿಸಿದರು.
ರೋಗಿ ಸಂಬಂಧಿಗೆ ಕನ್ನಡ ಕಲಿಯಲು ಕಿವಿಮಾತು
ಆಸ್ಪತ್ರೆಯ ಪರಿಶೀಲನೆ ವೇಳೆ ರೋಗಿಗಳ ಬಗ್ಗೆ ಕಾಳಜಿ ವಹಿಸುವಂತೆ ಅವರ ಕುಟುಂಬದ ಸದಸ್ಯರಿಗೂ ಉಪ ಲೋಕಾಯುಕ್ತರು ತಿಳಿಹೇಳಿದರು. ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡದ ರೋಗಿಯ ಸಂಬಂಧಿಯೊಬ್ಬರಿಗೆ ಕನ್ನಡ ಕಲಿಯುವಂತೆ ಕಿವಿಮಾತು ಹೇಳಿದರು.
ಬಿಮ್ಸ್ ಆಸ್ಪತ್ರೆಯಲ್ಲಿನ ಚಿಕಿತ್ಸಾ ವ್ಯವಸ್ಥೆ, ಔಷಧ ವಿತರಣೆ ಹಾಗೂ ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು, ಆಸ್ಪತ್ರೆಯ ವ್ಯವಸ್ಥೆಗಳನ್ನು ಸುಧಾರಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸಂಬಂಧಿಸಿದ ವೈದ್ಯರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.



