ಬಸವಾದಿ ಶರಣರು ವಚನಗಳ ಜೊತೆಗೆ ಅನೇಕ ವಚನೇತರ ಸಾಹಿತ್ಯವನ್ನೂ ರಚಿಸಿದ್ದಾರೆ. ಅವುಗಳಲ್ಲಿ ಸ್ವರವಚನಗಳು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿವೆ ಎಂದು ನಾಡೋಜ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಬಸವಕಲ್ಯಾಣ ನಗರದ ಅನುಭವಮಂಟಪದಲ್ಲಿ ನಡೆದ ತಿಂಗಳ ಅನುಭವಮಂಟಪ–22ರ ದಿವ್ಯಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
12ನೇ ಶತಮಾನದಿಂದಲೇ ಸ್ವರವಚನಗಳ ಪರಂಪರೆ ಕಂಡುಬರುತ್ತದೆ. ರಾಗ, ತಾಳಗಳನ್ನು ಸಂಯೋಜಿಸಿ ಹಾಡಲು ಅನುಕೂಲವಾಗುವಂತೆ ಸ್ವರವಚನಗಳನ್ನು ರಚಿಸಲಾಗಿದೆ. ಆದರೆ, ಈ ಸಾಹಿತ್ಯ ಪ್ರಕಾರದ ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಶರಣರ ಸ್ವರವಚನಗಳ ಕುರಿತು ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಉಪನ್ಯಾಸಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದು ತಿಳಿಸಿದರು.

ಶರಣ ಜೇಡರ ದಾಸಿಮಯ್ಯನವರ ಸ್ವರವಚನಗಳ ಕುರಿತು ಉಪನ್ಯಾಸ ನೀಡಿದ ಡಾ.ಸಂಗೀತಾ ಮಂಠಾಳೆ ಅವರು, “ಶರಣರು ಸಂಗೀತದ ಜ್ಞಾನ ಹೊಂದಿದವರಾಗಿದ್ದರು ಎಂಬುದು ಅವರ ಸ್ವರವಚನಗಳ ರಚನೆಯಿಂದ ತಿಳಿದುಬರುತ್ತದೆ. ಜೇಡರ ದಾಸಿಮಯ್ಯನವರ ಸ್ವರವಚನಗಳಲ್ಲಿ ನಡೆ-ನುಡಿ, ತತ್ತ್ವಚಿಂತನೆ, ಶುದ್ಧಿ, ಆಚಾರ-ವಿಚಾರ, ನೀತಿಬೋಧನೆ, ಲಿಂಗಾರ್ಚನೆ ಹಾಗೂ ಲಿಂಗಯೋಗದಂತಹ ಮೌಲ್ಯಗಳು ಅಭಿವ್ಯಕ್ತಗೊಂಡಿವೆ” ಎಂದು ಹೇಳಿದರು.
ದಾಸಿಮಯ್ಯನವರು ಸ್ವರವಚನಗಳ ಮೂಲಕ ಮನಸ್ಸಿನ ಭಾವನೆಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಪಡಿಸಿದ್ದು, ಮನಸ್ಸಿನಲ್ಲಿ ಉಂಟಾಗುವ ತಳಮಳಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮನಸ್ಸು ಏಕಾಗ್ರವಾಗುವವರೆಗೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಮನಸ್ಸಿನ ಏಕಾಗ್ರತೆಗಾಗಿ ಶರಣರು ಲಿಂಗಯೋಗವೆಂಬ ದಿವ್ಯ ಔಷಧಿಯನ್ನು ನೀಡಿದ್ದಾರೆ. ಜೇಡರ ದಾಸಿಮಯ್ಯನವರು ಈ ತತ್ತ್ವವನ್ನು ತಮ್ಮ ಸ್ವರವಚನಗಳಲ್ಲಿ ಅರ್ಥಪೂರ್ಣವಾಗಿ ಅಭಿವ್ಯಕ್ತಪಡಿಸಿದ್ದಾರೆ ಎಂದು ಅನುಭಾವ ಹಂಚಿಕೊಂಡರು.

ಲಿಂಗೈಕ್ಯ ಸಾವಿತ್ರಿ ಸೋಮನಾಥ ನುಚ್ಚಾ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಸಮಾರಂಭದಲ್ಲಿ ಶಿವಾನಂದ ಸ್ವಾಮಿಗಳು, ಸುಗುಣಾತಾಯಿ ಸಮ್ಮುಖ ವಹಿಸಿದ್ದರು. ಡಾ.ಸೋಮನಾಥ ನುಚ್ಚಾ, ಬಸವರಾಜ ಬೇಲೂರೆ ಹಾಗೂ ಶಿವಕುಮಾರ ಸಿದ್ಧೇಶ್ವರ ಗೌರವ ಉಪಸ್ಥಿತರಿದ್ದರು. ಬಸವರಾಜ ಒಟಗೆ ಸ್ವಾಗತಿಸಿದರು. ಶಿವಶಂಕರ ಪತಂಗೆ ನಿರೂಪಿಸಿದರು.
ಇದನ್ನೂ ಓದಿ : ಬೀದರ್ | ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ: ಡಿಸಿ ಶಿಲ್ಪಾ ಶರ್ಮಾ





