17ನೇ ಲೋಕಸಭೆಯ ಸಂಸತ್ತಿನ ಸಂಕ್ಷಿಪ್ತ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, 2024ರ ಮಧ್ಯಂತರ ಬಜೆಟ್‌ನ ಅಧಿವೇಶನ ಹಾಗೂ 17ನೇ ಲೋಕಸಭೆಯ ಕೊನೆಯ ಅಧಿವೇಶನ ರಾಷ್ಟ್ರಪತಿಯವರ ಭಾಷಣದೊಂದಿಗೆ ಆರಂಭಗೊಂಡು ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.01 ರಂದು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
ನೂತನ ಸರ್ಕಾರವು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ನಡೆದು ಫಲಿತಾಂಶದ ನಂತರ ಅಸ್ತಿತ್ವಕ್ಕೆ ಬರಲಿದೆ. ಪೂರ್ಣ ಪ್ರಮಾಣದ ಬಜೆಟ್ ನೂತನ ಸರ್ಕಾರದ ಅಸ್ತಿತ್ವದ ನಂತರ ಮಂಡನೆಯಾಗಲಿದೆ.
17ನೇ ಲೋಕಸಭೆಯ ಅವಧಿ ಜೂನ್ 16ರಂದು ಮುಕ್ತಾಯಗೊಳ್ಳಲಿದ್ದು, ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಮೊದಲು ಸಂಸತ್ತಿನ ಕೊನೆಯ ಅಧಿವೇಶನ ಇದಾಗಿದೆ.
2019ರಲ್ಲಿ, ಲೋಕಸಭೆ ಚುನಾವಣೆ ಮಾರ್ಚ್ 10ರಂದು ಘೋಷಣೆಯಾಗಿದ್ದು, ಏಪ್ರಿಲ್ 11 ರಿಂದ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೇ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು.