‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬುದು ನಮ್ಮಲ್ಲಿನ ಜನಪ್ರಿಯ ಗಾದೆ. ಆದರೆ, ಪ್ರಸ್ತುತ ದಿನಗಳಲ್ಲಿ ಆಡಳಿತ ಯಂತ್ರದ ದರ್ಪದ ಮುಂದೆ ಇದು ‘ಕುಂಬಾರನಿಗೆ ವರುಷ, ಬುಲ್ಡೋಜರ್‌ಗೆ ನಿಮಿಷ’ ಎಂದು ಬದಲಾದಂತಿದೆ. ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆಯ ಹೆಸರಿನಲ್ಲಿ ಸರ್ಕಾರಿ ವ್ಯವಸ್ಥೆಯೊಂದು ಬಡವರ ಮೇಲೆ ಎಷ್ಟರಮಟ್ಟಿಗೆ ಕ್ರೌರ್ಯ ಮೆರೆಯಬಹುದು ಎಂಬುದಕ್ಕೆ ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಜ್ವಲಂತ ಸಾಕ್ಷಿಯಾಗಿದೆ.
ದೈಹಿಕವಾಗಿ ವಿಕಲಚೇತನಳಾದ ಮಹಿಳೆಯೊಬ್ಬಳು ಜೀವನ ನಿರ್ವಹಣೆಗಾಗಿ ಮಾರಾಟಕ್ಕಿಟ್ಟಿದ್ದ ಮಡಕೆಗಳನ್ನು ಬುಲ್ಡೋಜರ್ ಹತ್ತಿಸಿ ನುಚ್ಚುನೂರು ಮಾಡಿದ ಹೃದಯವಿದ್ರಾವಕ ವಿಡಿಯೊವೊಂದು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಭಾಜಿನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತವು ಇತ್ತೀಚೆಗೆ ರಸ್ತೆ ಬದಿಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ಕುಳಿತು ಮಣ್ಣಿನ ಮಡಕೆ, ಕುಡಿಕೆಗಳನ್ನು ಮಾರಿ ಹೊಟ್ಟೆಹೊರೆಯುತ್ತಿದ್ದ ಅಂಗವಿಕಲ ಮಹಿಳೆಯೊಬ್ಬಳ ಅಂಗಡಿಯ ಮೇಲೂ ಅಧಿಕಾರಿಗಳು ದಯಾಹೀನವಾಗಿ ಬುಲ್ಡೋಜರ್ ಚಲಾಯಿಸಿದ್ದಾರೆ.
ಮಹಿಳೆಯು ಎಷ್ಟೇ ಅಂಗಲಾಚಿದರೂ ಕರುಣೆ ತೋರದ ಅಧಿಕಾರಿಗಳು, ಆಕೆಯ ಜೀವನಕ್ಕೆ ಆಧಾರವಾಗಿದ್ದ ನೂರಾರು ಮಡಕೆಗಳನ್ನು ಕ್ಷಣಮಾತ್ರದಲ್ಲಿ ಮಣ್ಣುಪಾಲು ಮಾಡಿದ್ದಾರೆ. ಅತ್ಯಂತ ಕಡುಬಡತನದಲ್ಲಿ, ಕಷ್ಟಪಟ್ಟು ತಯಾರಿಸಿದ ಮಡಕೆಗಳು ಯಂತ್ರದ ಅಡಿಯಲ್ಲಿ ಸಿಲುಕಿ ಚೂರುಚೂರಾಗುತ್ತಿರುವ ದೃಶ್ಯ ನೋಡುಗರ ಕರುಳು ಹಿಂಡುವಂತಿದೆ. ಬಡವರ, ಅದರಲ್ಲೂ ವಿಕಲಚೇತನರ ಬಗ್ಗೆ ಆಡಳಿತ ಯಂತ್ರಕ್ಕಿರುವ ಅಮಾನವೀಯತೆಗೆ ಈ ದೃಶ್ಯಾವಳಿ ಕನ್ನಡಿ ಹಿಡಿದಿದೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಈ ದೌರ್ಜನ್ಯದ ದೃಶ್ಯಾವಳಿಗಳು ಟ್ವಿಟರ್ ಮೂಲಕ ಜಗಜ್ಜಾಹೀರಾಗುತ್ತಿದ್ದಂತೆಯೇ, ನೆಟ್ಟಿಗರು ಸರ್ಕಾರದ ಹಾಗೂ ಅಧಿಕಾರಿಗಳ ಅಮಾನವೀಯ ನಡೆಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. “ದೊಡ್ಡ ದೊಡ್ಡ ಪ್ರಭಾವಿಗಳು ಸಾವಿರಾರು ಎಕರೆ ಒತ್ತುವರಿ ಮಾಡಿದರೂ ಕಣ್ಣುಮುಚ್ಚಿ ಕುಳಿತುಕೊಳ್ಳುವ ಸರ್ಕಾರ, ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮಾತ್ರ ಅತ್ಯುತ್ಸಾಹ ತೋರುತ್ತದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
ಈ ನಡುವೆ ಕೇವಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದಕ್ಕಷ್ಟೇ ಸೀಮಿತವಾಗದ ಅನೇಕ ಸಹೃದಯರು, ಆಕೆಯ ಕಣ್ಣೀರನ್ನು ಒರೆಸಲು ಮುಂದಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಆ ಅಂಗವಿಕಲ ಮಹಿಳೆಗೆ ಆರ್ಥಿಕ ನೆರವು ನೀಡಿ ಮರುಜೀವ ನೀಡುವ ಉದ್ದೇಶದಿಂದ, ಆಕೆಯ ಬ್ಯಾಂಕ್ ಖಾತೆ, ವಾಸಸ್ಥಳ ಹಾಗೂ ಸಂಪರ್ಕ ವಿವರಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹುಡುಕಾಟ ಆರಂಭಿಸಿದ್ದಾರೆ.
ಅಭಿವೃದ್ಧಿ ಮತ್ತು ಒತ್ತುವರಿ ತೆರವಿನ ಹೆಸರಿನಲ್ಲಿ ನಡೆಯುವ ಇಂತಹ ಕಾರ್ಯಾಚರಣೆಗಳು ಮಾನವೀಯತೆಯ ಮಿತಿಗಳನ್ನು ಮೀರಬಾರದು. ನಿರ್ಗತಿಕರ ಬದುಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅವರ ಜೀವನೋಪಾಯವನ್ನೇ ಕಸಿದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಗಂಭೀರ ಪ್ರಶ್ನೆಯನ್ನು ಈ ಘಟನೆ ಹುಟ್ಟುಹಾಕಿದೆ. ಕಾರ್ಯಾಂಗವು ಕಾನೂನು ಪಾಲನೆಯ ಜೊತೆಗೆ, ದುರ್ಬಲರ ಬಗ್ಗೆ ಸಂವೇದನಾಶೀಲತೆಯನ್ನೂ ಮೈಗೂಡಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನು ಇದು ಸಾರುತ್ತಿದೆ.




