ರಾಜಸ್ಥಾನದಲ್ಲಿ ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜಿಸಿದ ಪ್ರಕರಣ ಮಾಸುವ ಮುನ್ನವೆ ಆಂಧ್ರಪ್ರದೇಶದ ಓಂಗೋಲ್ ಜಿಲ್ಲೆಯ ಪಟ್ಟಣವೊಂದರಲ್ಲಿ ಒಂಬತ್ತು ಮಂದಿಯ ಗುಂಪು ದಲಿತ ವ್ಯಕ್ತಿಯೊಬ್ಬನನ್ನು ಥಳಿಸಿ ಮೂತ್ರ ವಿಸರ್ಜಿಸಿದ ಅಮಾನುಷ ಘಟನೆ ನಡೆದಿದೆ.
ಹಲ್ಲೆ ನಡೆಸಿದ ಒಬ್ಬಾತ ಮಾಡಿಕೊಂಡ ವಿಡಿಯೋ ವೈರಲ್‌ನಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದವರಲ್ಲಿ ಇಬ್ಬರು ಮೂತ್ರ ವಿಸರ್ಜಿಸಿದ್ದಾರೆ.
ಅಮಾನುಷ ಕೃತ್ಯಕ್ಕೆ ಒಳಗಾದ ವ್ಯಕ್ತಿಯ ಹೆಸರು ಮೋಟಾ ನವೀನ್. ಇವರು ಪರಿಶಿಷ್ಟ ಪಂಗಡಕ್ಕೆ ಸೇರಿದವನಾಗಿದ್ದಾರೆ. ಒಂಬತ್ತು ಮಂದಿ ಈತನ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರು ಆತನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ಪ್ರಮುಖ ಆರೋಪಿಯನ್ನು ಮನ್ನೆ ರಾಮಾಂಜನೇಯುಲು ಎಂದು ಗುರುತಿಸಲಾಗಿದ್ದು, ಗುಂಪಿನಲ್ಲಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂತ್ರ ವಿಸರ್ಜಿಸಿಕೊಂಡ ಮೋಟಾ ನವೀನ್ ಮತ್ತು ಪ್ರಮುಖ ಆರೋಪಿ ರಾಮಾಂಜನೇಯುಲು ನಡುವೆ ಹುಡುಗಿಯ ವಿಷಯಕ್ಕಾಗಿ ಜಗಳ ನಡೆದಿತ್ತು. ನಂತರ ರಾಮಾಂಜನೇಯುಲು ಮತ್ತು ಆತನ ಸ್ನೇಹಿತರು ಜೂನ್ 19 ರಂದು ರಾತ್ರಿ 9 ಗಂಟೆಗೆ ನವೀನ್ ಅವರನ್ನು ಪ್ರತ್ಯೇಕ ಸ್ಥಳಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿ ಮೂತ್ರ ವಿಸರ್ಜಿಸಿದ್ದಾರೆ ಎಂದು ಓಂಗೋಲ್ ಎಸ್‌ಪಿ ಮಲಿಕಾ ಗಾರ್ಗ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರಿನಲ್ಲಿ ಹುಟ್ಟಿರುವ ‘ಇಂಡಿಯಾ’ದ ದಾರಿ ಸಲೀಸಲ್ಲ
“ಹಲ್ಲೆಗೊಳಗಾದ ನಂತರ ಮೋಟಾ ನವೀನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಕೃತ್ಯದ ಬಗ್ಗೆ ಏನನ್ನೂ ಹೇಳಲಿಲ್ಲ. ಪೊಲೀಸರು ಆತನೊಂದಿಗೆ ಮಾತನಾಡುವ ಮೊದಲು ಅವರು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಐದು ದಿನಗಳ ಹಿಂದೆ ಘಟನೆ ನಡೆಸಿದ ಒಬ್ಬಾತನಿಂದ ವಿಡಿಯೋ ವೈರಲ್ ಆಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ.
ಒಂಬತ್ತು ಶಂಕಿತರ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ರಾಮಾಂಜನೇಯುಲು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಘಟನೆ ಬೆಳಕಿಗೂ ಬರುವ ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೋವೊಂದು ಆಕ್ರೋಶಕ್ಕೆ ಕಾರಣವಾದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೂಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನೊಬ್ಬ ಮೂತ್ರ ವಿಸರ್ಜಿಸಿದ್ದ. ಆತನನ್ನು ಬಂಧಿಸಿ ಎನ್‌ಎಸ್‌ಜಿಯಡಿ ಪ್ರಕರಣ ದಾಖಲಿಸಲಾಗಿತ್ತು.