- ಭಯೋತ್ಪಾದನಾ ಚಟುವಟಿಕೆ ನಡೆಸಲು ಯೋಜನೆ ರೂಪಿಸಿದ್ದ ಶಂಕಿತರು
- ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಐವರು ಶಂಕಿತ ಉಗ್ರರು ಯೋಜನೆ ರೂಪಿಸಿದ್ದರು. ನಗರವನ್ನೇ ಟಾರ್ಗೆಟ್ ಮಾಡಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದ್ದಾರೆ.
ಬುಧವಾರ ಸಿಸಿಬಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, “ಬೆಂಗಳೂರು ನಗರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಶಂಕಿತರು ಯೋಜನೆ ರೂಪಿಸಿದ್ದರು. ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಸುಲ್ತಾನ್ ಪಾಳ್ಯದ ಮುಕ್ರಾಮ್ ಮಸೀದಿ ಬಳಿ ಶಂಕಿತರು ವಾಸವಾಗಿದ್ದರು. ಸಿಸಿಬಿ ತಂಡ ಅವರ ಮನೆಗಳ ಮೇಲೆ ದಾಳಿ ನಡೆಸಿ ಶಂಕಿತ ಐವರನ್ನು ಬಂಧಿಸಿದೆ” ಎಂದರು.
“2017ರಲ್ಲಿ ಆರ್‌ಟಿ ನಗರದ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಈ ಐದು ಶಂಕಿತ ಉಗ್ರರಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದನು. ಇವರು ಭಯೋತ್ಪಾದನಾ ದಾಳಿ ನಡೆಸುವ ಮುನ್ನವೇ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಡಿ. ನಜೀರ್ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ” ಎಂದು ಹೇಳಿದರು.
“ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತ ಶಂಕಿತ ಆರೋಪಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. 2015ರ ಕೊಲೆ ಪ್ರಕರಣದಲ್ಲಿ ಶಂಕಿತ ಆರೋಪಿಗಳು ಜೈಲಿನಲ್ಲಿದ್ದರು. ಶಂಕಿತ ಉಗ್ರರಾದ ನಜೀರ್ ಮತ್ತು ಜುನೈದ್ ಸೂತ್ರದಾರರಾಗಿದ್ದಾರೆ” ಎಂದು ತಿಳಿಸಿದರು.
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಆರೋಪಿಗಳನ್ನ 15 ದಿನ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಶಂಕಿತರು ಭಯೋತ್ಪಾದಕ ಸ್ಫೋಟಗಳ ಸಂಚು ರೂಪಿಸಲು ಹತ್ತಿರದ ಮಸೀದಿಯಲ್ಲಿ ಸಭೆ ಸೇರುತ್ತಿದ್ದರು” ಎಂದರು.
“ಬಂಧಿತ ಆರೋಪಿಗಳಿಂದ 7 ದೇಶಿ ಪಿಸ್ತೂಲ್, 45 ಗುಂಡುಗಳು, 5 ರೈಫಲ್‌ಗಳು ಮತ್ತು 2 ಸ್ಯಾಟಲೈಟ್ ಫೋನ್‌ಗಳು, ಒಂದು ಡ್ರ್ಯಾಗರ್, 12 ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ವಾಕಿ ಟಾಕಿ, ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದರು.
“ಶಂಕಿತರು ಸಕ್ರಿಯ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದರು. ವಿದೇಶದಲ್ಲಿರುವ ಮುಖ್ಯ ಆರೋಪಿ ಇವರಿಗೆ ಎಲ್ಲ ವಸ್ತು ಕಳುಹಿಸಿದ್ದಾನೆ. ಯಾರು ಇಲ್ಲಿಗೆ ತಂದು ಕೊಟ್ಟಿದ್ದಾರೆ ಎಂಬ ಬಗ್ಗೆ ಪತ್ತೆ ಮಾಡಬೇಕಾಗಿದೆ” ಎಂದು ಹೇಳಿದರು.
“ಕಳೆದು ಮೂರು ತಿಂಗಳ ಹಿಂದೆ ಬಂದು ಹಿಂದೂಗಳ ಮನೆಯಲ್ಲಿ ವಾಸವಾಗಿದ್ದರು. ನಾಲ್ಕು ಜನ ಶಂಕಿತರು, ಇಬ್ಬರು ಮಹಿಳೆಯರು ಮನೆಯಲ್ಲಿ ವಾಸವಾಗಿದ್ದರು. ಆದರೆ, ಈ ಪ್ರಕರಣದಲ್ಲಿ ಯಾವುದೇ ಮಹಿಳೆಯರ ಪಾತ್ರವಿಲ್ಲ. ಈ ಕಾರ್ಯಾಚರಣೆಗಳಿಂದ ದೊಡ್ಡ ಭಯೋತ್ಪಾದಕ ದಾಳಿಯನ್ನು ತಡೆಯಲಾಗಿದೆ” ಎಂದು ತಿಳಿಸಿದರು.
“2017ರಲ್ಲಿ ನಡೆದ ಕೊಲೆ ಹಾಗೂ ಅಪಹರಣ ಪ್ರಕರಣದಲ್ಲಿ 21 ಮಂದಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅಲ್ಲಿ ಇವರಿಗೆ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಟಿ ನಜೀರ್ ಪರಿಚಯವಾಗಿದೆ. ಪ್ರಮುಖ ಆರೋಪಿ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಲ್ಲಿ ಓರ್ವ ಡ್ರೈವರ್ ಮತ್ತು ಮೆಕಾನಿಕ್ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ” ಎಂದರು.
“ಈ ಭಯೋತ್ಪಾದಕ ಕೃತ್ಯಕ್ಕೆ ಹಣ ಹೊರಗಿನಿಂದ ಬಂದಿದೆ. ಇವರೆಲ್ಲರೂ ಎಲ್ಇಟಿ ಸಂಘಟನೆಯ ಲಿಂಕ್ ಹೊಂದಿದ್ದಾರೆ. ಟಿ ನಜೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ವಿದೇಶದಿಂದ ಇವರಿಗೆ ಹಣ ಫಡಿಂಗ್ ಬಂದಿದೆ. ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಟಿ ನಜೀರ್ ಲಷ್ಕರ್-ಇ-ತೊಯ್ಬಾ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದಾನೆ” ಎಂದು ದಯಾನಂದ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ಫೋಟಕ್ಕೆ ಸಂಚು; ಐವರು ಶಂಕಿತ ಉಗ್ರರ ಬಂಧನ
ಪೊಲೀಸರಿಗೆ ಅಭಿನಂದನೆ ತಿಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ
ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, “ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.