ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರು ಮತ್ತು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಅತ್ಯಂತ ವಿಕೃತ ಮತ್ತು ಕಾನೂನುಬಾಹಿರವಾಗಿ ನಡೆಸಿಕೊಂಡಿದ್ದಾರೆ. ಪ್ರತಿಭಟನಾ ಸ್ಥಳಗಳಿಂದ ವಶಕ್ಕೆ ಪಡೆದವರನ್ನು ದೆಹಲಿ ನಗರ ಕೇಂದ್ರದಿಂದ ಬರೋಬ್ಬರಿ 40 ಕಿಲೋಮೀಟರ್ ದೂರದಲ್ಲಿರುವ ಪಾಂಡ್ವಾಲನ್ ಖುರ್ದ್ ಎಂಬಲ್ಲಿನ ಸಮುದಾಯ ಭವನದಲ್ಲಿ ಬಂದಿಯಾಗಿಸಿ ಅವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ. ಪ್ರತಿಭಟನಾಕಾರರೊಂದಿಗೆ ಪೊಲೀಸರು ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 11ರಂದು ಕನ್ನಾಟ್ ಪ್ಲೇಸ್ ಮತ್ತು ಜಂತರ್ ಮಂತರ್ ಪ್ರದೇಶಗಳಿಂದ ಕನಿಷ್ಠ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ತಮ್ಮ ವಾಹನಗಳಿಗೆ ತುರುಕಿದರು. ಈ ರೀತಿ ವಶಕ್ಕೆ ಪಡೆಯಲಾದವರಲ್ಲಿ 16ರಿಂದ 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕರೂ ಸೇರಿದ್ದರು. ಬಂಧಿತರನ್ನು ಮೊದಲು ಚಾವ್ಲಾ ಪೊಲೀಸ್ ಠಾಣೆಗೆ ಕರೆದೊಯ್ದು, ನಂತರ ಪಾಂಡ್ವಾಲನ್ ಖುರ್ದ್ ಸಮುದಾಯ ಭವನದಲ್ಲಿ ಸ್ಥಳಾಂತರಿಸಿದರು. ಈ ವೇಳೆ, ಪೊಲೀಸರು ಪ್ರತಿಭಟನಾಕಾರರಿಗೆ ಯಾವುದೇ ರೀತಿಯ ವೈದ್ಯಕೀಯ ನೆರವು ಸಿಗದಂತೆ ಮತ್ತು ವಕೀಲರನ್ನು ಭೇಟಿಯಾಗದಂತೆ ಪ್ರತ್ಯೇಕಿಸಿ ಕತ್ತಲಲ್ಲಿಟ್ಟಿದ್ದರು. ವಕೀಲರು ಮತ್ತು ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ತಡೆಯಬಾರದು ಎಂಬ ಸರ್ವೋಚ್ಛ ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಸಹ, ಪೊಲೀಸರು ತಮ್ಮ ಠಾಣೆಗಳ ಗೇಟ್‌ಗಳನ್ನು ಮುಚ್ಚಿ ವಕೀಲರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ‘ದಿ ವೈರ್’ ನಡೆಸಿದ ಗ್ರೌಂಡ್-ರಿಪೋರ್ಟ್ ವೇಳೆ ಬೆಳಕಿಗೆ ಬಂದಿದೆ.
ಪೊಲೀಸ್ ವಶದಲ್ಲಿದ್ದ 30 ವರ್ಷದ ವಕೀಲ ಅರ್ಜುನ್ ಉನ್ನಿಕೃಷ್ಣನ್ ಅವರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. “ಕನ್ನಾಟ್ ಪ್ಲೇಸ್‌ನಲ್ಲಿ ಮಹಿಳಾ ಸಿಬ್ಬಂದಿ ಇಲ್ಲದೆಯೇ ಪುರುಷ ಪೊಲೀಸರು ದಂಪತಿಯನ್ನು ಬಲವಂತವಾಗಿ ಎಳೆದೊಯ್ಯುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನೂ ಮತ್ತು ನಮ್ಮ ಸ್ನೇಹಿತರನ್ನು ಬಂಧಿಸಲಾಯಿತು. ನೆಮ್ಮೆಲ್ಲರನ್ನು ಎಲ್‍ಐಸಿ ಕಟ್ಟಡದ ಬಳಿಯ ನಿರ್ಜನ ರಸ್ತೆಗೆ ಕರೆದೊಯ್ದು, ಎಲ್ಲರನ್ನೂ ಸಾಲಾಗಿ ಕುಳ್ಳಿರಿಸಿ ತಪಾಸಣೆ ನಡೆಸಲಾಯಿತು. ಯಾರೆಲ್ಲ ಪ್ರತಿಭಟನೆಯ ವಿಡಿಯೋ ಅಥವಾ ಫೋಟೋ ತೆಗೆದಿದ್ದಾರೋ ಅವರನ್ನು ಗುರುತಿಸಿ, ಅವರ ಮೊಬೈಲ್ ಫೋನ್‌ಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಯಿತು. ಫೋನ್ ಪಾಸ್‌ವರ್ಡ್ ನೀಡಲು ನಿರಾಕರಿಸಿದವರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಪೊಲೀಸರು ಖಾಸಗಿತನವನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಬಂಧಿತರ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ನೋಡುತ್ತಾ ವಿಕೃತವಾಗಿ ನಗುತ್ತಿದ್ದರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಿಂದ ಮುಂದೆ ಜೈಲಿನಂತೆ ಕಬ್ಬಿಣದ ಸರಳುಗಳಿರುವ ದೆಹಲಿ ಪೊಲೀಸರ ವಿಶೇಷ ವ್ಯಾನ್‌ಗೆ ಪ್ರತಿಭಟನಾಕಾರರನ್ನು ತಳ್ಳಲಾಯಿತು. ವ್ಯಾನ್‌ನ ಒಳಗಿದ್ದ ಸಾಲುಗಳಲ್ಲಿ ಜನರನ್ನು ಕುಳ್ಳಿರಿಸಿ, ಪೊಲೀಸರು ಸಾಲಾಗಿ ನಿಂತು ಪ್ರತಿಯೊಬ್ಬರಿಗೂ ಕಪಾಳಮೋಕ್ಷ ಮಾಡುವುದು, ಗುಪ್ತಾಂಗಗಳಿಗೆ ಹೊಡೆಯುವುದು ಮತ್ತು ಮನಬಂದಂತೆ ಹಲ್ಲೆ ನಡೆಸುವುದನ್ನು ಮುಂದುವರಿಸಿದರು. ಅಪ್ರಾಪ್ತ ಬಾಲಕರ ಮೇಲೂ ದೌರ್ಜನ್ಯ ಎಸಗಲಾಯಿತು. ವ್ಯಾನ್‌ನ ಒಳಗೆ ಓಡಿಹೋಗಲು ಅಥವಾ ತಪ್ಪಿಸಿಕೊಳ್ಳಲು ಜಾಗವಿಲ್ಲದ ಕಾರಣ, ಪೊಲೀಸರ ಈ ಮೃಗೀಯ ದಾಳಿಗೆ ಪ್ರತಿಭಟನಾಕಾರರು ಬಲಿಯಾಗಬೇಕಾಯಿತು” ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ
20 ವರ್ಷದ ವಿದ್ಯಾರ್ಥಿಯೊಬ್ಬರು ಮಾತನಾಡಿ, “ಪ್ರತಿಯೊಬ್ಬ ಪ್ರತಿಭಟನಾಕಾರನ ಮೇಲೆಯೂ ಐದೈದು ಜನ ಪೊಲೀಸರು ಸರದಿಯಂತೆ ಹಲ್ಲೆ ನಡೆಸಿದರು. ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡರೂ, ನನ್ನನ್ನು ಅಮಾನುಷವಾಗಿ ಥಳಿಸಿದರು” ಎಂದು ಕಣ್ಣೀರಿಟ್ಟಿದ್ದಾರೆ.
ಪಾಂಡ್ವಾಲನ್ ಖುರ್ದ್ ಸಮುದಾಯ ಭವನಕ್ಕೆ ಕರೆದೊಯ್ಯಲ್ಪಟ್ಟ ಬಳಿಕವೂ ಪರಿಸ್ಥಿತಿ ಬದಲಾಗಲಿಲ್ಲ. ಅಲ್ಲಿ ಬಂಧಿತರಿಗೆ ಕುಡಿಯಲು ನೀರಾಗಲಿ, ತಿನ್ನಲು ಆಹಾರವಾಗಲಿ ನೀಡಲಿಲ್ಲ. ಹಲವರಿಗೆ ತೀವ್ರ ಗಾಯಗಳಾಗಿದ್ದು, ಒಬ್ಬರ ಕೈ ಮೂಳೆ ಮುರಿದಿರುವುದು ಕಂಡುಬಂದಿದೆ. ರಾತ್ರಿ 8 ಗಂಟೆಯ ಸುಮಾರಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ವಕೀಲ ಫಹಾದ್ ಎಂ. ಖಾನ್ ಮತ್ತು ಗೌರವ್ ಸೈಕಲ್‌ವಾಲಾ ಅವರಿಗೆ ಒಳಗಿದ್ದವರನ್ನು ಭೇಟಿಯಾಗಲು ಪೊಲೀಸರು ಬಿಡಲಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿ ತೋರಿಸಿದರೂ ಪೊಲೀಸರು ‘ನಮಗೆ ಗೊತ್ತಿಲ್ಲ’ ಎಂದು ಸಮಜಾಯಿಷಿ ನೀಡುತ್ತಾ ಗೇಟ್ ತೆರೆಯಲು ನಿರಾಕರಿಸಿದರು. ಕೊನೆಗೆ ವಕೀಲರು 112 ಪಿಆರ್‌ವಿ ವಾಹನಕ್ಕೆ ಕರೆ ಮಾಡಿ, ಆ ಪೊಲೀಸ್ ವಾಹನದ ಜೊತೆಗೇ ಬಲವಂತವಾಗಿ ಒಳಪ್ರವೇಶಿಸಬೇಕಾಯಿತು ಎಂದು ‘ದಿ ವೈರ್’ ವರದಿ ಮಾಡಿದೆ.
ವಕೀಲರ ಪ್ರವೇಶದ ನಂತರವಷ್ಟೇ ಗಾಯಗೊಂಡಿದ್ದ ಪ್ರತಿಭಟನಾಕಾರರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು. ಈ ಸಂಪೂರ್ಣ ಬಂಧನವು ಹಲವು ಕಾನೂನಾತ್ಮಕ ನೆಲೆಗಳಲ್ಲಿ ಸಂಪೂರ್ಣ ಅಕ್ರಮವಾಗಿದೆ. ಬಂಧನಕ್ಕೆ ಸೂಕ್ತ ಕಾರಣಗಳನ್ನು ನೀಡದಿರುವುದು, ಸೂರ್ಯಾಸ್ತದ ನಂತರ ಮಹಿಳೆಯರನ್ನು ವಶದಲ್ಲಿಟ್ಟಿರುವುದು, ಅಪ್ರಾಪ್ತರನ್ನು ಬಂಧನ ಕೇಂದ್ರದಲ್ಲಿ ಬಂಧಿಸಿಟ್ಟಿರುವುದು, ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಹಿಂಸೆ ನೀಡಿರುವುದು ಹಾಗೂ ನಗರದಿಂದ 40 ಕಿಮೀ ದೂರದಲ್ಲಿ ಆಸರೆಯಿಲ್ಲದೆ ಜನರನ್ನು ಬಿಟ್ಟಿರುವುದು ಕಾನೂನಿನ ತೀವ್ರ ಉಲ್ಲಂಘನೆಯಾಗಿದೆ. ಈ ಸಂಬಂಧ ವಕೀಲರ ತಂಡವು ದ್ವಾರಕಾ ಡಿಸಿಪಿ ಮತ್ತು ಚಾವ್ಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರಿಗೆ ಅಧಿಕೃತ ದೂರು ನೀಡಿದೆ.



