ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ.
ಅಕ್ಟೋಬರ್ 10ರಂದು ದೆಹಲಿಯಲ್ಲಿ ಸಾರ್ವಜನಿಕ ಪ್ರತಿಭಟನೆಯನ್ನು ತಡೆಯಲು ಸರ್ಕಾರವು ತನ್ನ ಅಧಿಕಾರ ಬಲವನ್ನು ಅತಿಯಾಗಿ ಬಳಸಿಕೊಂಡಿತು. ಸುಮಾರು 7,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಯಿತು; 250ಕ್ಕೂ ಹೆಚ್ಚು ರೈಲು ಸೇವೆಗಳನ್ನು ರದ್ದುಗೊಳಿಸಲಾಯಿತು ಹಾಗೂ 45 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಯಿತು. ಇಂತಹ ಕಠಿಣ ಕ್ರಮಗಳನ್ನು ಸಾಮಾನ್ಯವಾಗಿ ಗಂಭೀರ ಸ್ವರೂಪದ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ನಿರೀಕ್ಷಿಸಬಹುದು. ಬರೀ ಅಂಕಿ-ಅಂಶಗಳಿಂದಲೇ ಅಪಾಯವನ್ನು ಅಂದಾಜಿಸಲು ಸಾಧ್ಯವಿಲ್ಲ ನಿಜ. ಆದರೆ ಇಡೀ ರಾಜಧಾನಿಯ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುವಂತಹ ಯಾವ ಅನಿವಾರ್ಯ ಬೆದರಿಕೆ ಇತ್ತು? ಈ ಇಡೀ ಬೆಳವಣಿಗೆಯಿಂದ ಪ್ರತಿಭಟನಾಕಾರರಿಗೆ ದೊಡ್ಡ ಪ್ರಚಾರ ಸಿಕ್ಕಿತು. ಸರ್ಕಾರ ಪ್ರತಿಭಟನಾ ಸಭೆಯನ್ನು ತಡೆಯಿತು. ಆದರೆ ಪ್ರತಿಭಟನಾಕಾರರ ಸಂದೇಶ ಎಲ್ಲೆಡೆ ಮತ್ತಷ್ಟು ತೀವ್ರವಾಗಿ ಹರಡುವುದಕ್ಕೆ ಈ ಕ್ರಮ ಸಹಾಯ ಮಾಡಿತು.
ಇದಕ್ಕೆ ಲಂಡನ್‌ನ ಒಂದು ಸೂಕ್ತ ಉದಾಹರಣೆಯನ್ನು ಗಮನಿಸಬಹುದು. 2023ರ ನವೆಂಬರ್‌ನಲ್ಲಿ ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸ್ ಕಮಿಷನರ್ ಸರ್ ಮಾರ್ಕ್ ರೌಲಿ ಅವರ ಮೇಲೆ ‘ಆರ್ಮಿಸ್ಟಿಸ್ ಡೇ’ (ಕದನವಿರಾಮ ದಿನ) ಸಂದರ್ಭದಲ್ಲಿ ಪ್ಯಾಲೆಸ್ಟೈನ್ ಪರ ನಡೆದ ಮೆರವಣಿಗೆಯನ್ನು ನಿಷೇಧಿಸಲು ಬಲವಾದ ರಾಜಕೀಯ ಒತ್ತಡವಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು. ಅವರು ಸಣ್ಣಪುಟ್ಟ ಕ್ರಮಗಳಿಂದ ತಡೆಯಲು ಸಾಧ್ಯವೇ ಇಲ್ಲದಂತಹ ಭೀಕರ ಅಶಾಂತಿ ಎದುರಾಗಲಿದೆ ಎಂಬ ಯಾವುದೇ ಸುಳಿವು ಇಲ್ಲವೆಂದು ತಿಳಿಸಿದರು. 1986ರ ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆಯ ಸೆಕ್ಷನ್ 13ರ ನಿಯಮವನ್ನು ಅವರು ಉಲ್ಲೇಖಿಸಿದರು. ಸಾಮಾನ್ಯ ಕ್ರಮಗಳಿಂದ ನಿಯಂತ್ರಿಸಲಾಗದ ಅಶಾಂತಿ ಸೃಷ್ಟಿಯಾಗುವ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದರ ಹಿಂದಿನ ತತ್ವ ನೇರವಾಗಿತ್ತು: ರಾಜಕೀಯ ಒತ್ತಡವು ವೃತ್ತಿಪರ ಪೊಲೀಸ್ ನಿರ್ಧಾರಕ್ಕೆ ಪರ್ಯಾಯವಾಗಬಾರದು.
ದೆಹಲಿಯಲ್ಲಿ ಇಂತಹ ನಿಲುವನ್ನು ಏಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ? ಒಬ್ಬ ಪೊಲೀಸ್ ಕಮಿಷನರ್‌ಗೆ ಪ್ರತಿಭಟನೆಗಳನ್ನು ನಿಭಾಯಿಸಿದ ದಶಕಗಳ ಅನುಭವವಿರುತ್ತದೆ. ಸೂಕ್ತ ಕಾರಣಗಳನ್ನು ಬಹಿರಂಗಪಡಿಸದೆ ಇಡೀ ನಗರಕ್ಕೆ ಇಂತಹ ಕಠಿಣ ನಿರ್ಬಂಧಗಳನ್ನು ಹೇರಿದಾಗ, ಅಧಿಕಾರಶಾಹಿಯ ಮೂಲಕ ರವಾನೆಯಾದ ರಾಜಕೀಯ ಇಚ್ಛೆಗೆ ಪೊಲೀಸರ ವೃತ್ತಿಪರ ತೀರ್ಮಾನ ತಲೆಬಾಗಿದೆ ಎಂಬ ಅನುಮಾನ ಹುಟ್ಟುವುದು ಸಹಜ.
ಇದನ್ನು ಓದಿದ್ದೀರಾ?: ದೆಹಲಿಯಲ್ಲಿ ಹೆಚ್ಚಿದ ಕಟ್ಟೆಚ್ಚರ: ಒಂದು ತಿಂಗಳು 20,000 ಅರೆಸೇನಾ ಸಿಬ್ಬಂದಿ ನಿಯೋಜನೆ
ಸರ್ಕಾರಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕರ ಆಕ್ರೋಶಕ್ಕೆ ಹಲವು ಬಾರಿ ಪೊಲೀಸರೇ ಬಲಿಯಾಗುತ್ತಾರೆ. ಆದ್ದರಿಂದ, ಪೊಲೀಸರ ಮೊದಲ ಜವಾಬ್ದಾರಿ ಮಾತುಕತೆಯ ಮಾರ್ಗಗಳನ್ನು ತೆರೆಯುವುದು, ಅಪಾಯಗಳನ್ನು ಅಂದಾಜಿಸುವುದು ಮತ್ತು ಸಾಧ್ಯವಾಗಬಹುದಾದ ಒಪ್ಪಂದಗಳನ್ನು ಮಾಡಿಕೊಳ್ಳುವುದು. ಒಂದು ನಿರ್ದಿಷ್ಟ ಸ್ಥಳ, ಸೀಮಿತ ಸಮಯ, ಇಂತಿಷ್ಟೇ ಜನಸಂಖ್ಯೆ, ಸ್ವಯಂಸೇವಕರ ನಿಯೋಜನೆ ಹಾಗೂ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡದಂತೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸುವ ಮೂಲಕ ಸುಗಮ ವ್ಯವಸ್ಥೆ ಮಾಡಬಹುದಿತ್ತು. ಇದರಿಂದ ಸಂಘಟಕರ ಮೇಲೂ ಜವಾಬ್ದಾರಿ ಇರುತ್ತಿತ್ತು. ಬಾಡಿ ಕ್ಯಾಮೆರಾಗಳು, ವೀಡಿಯೊ ಚಿತ್ರೀಕರಣ ಮತ್ತು ಸಮನ್ವಯ ಅಧಿಕಾರಿಗಳ ಮೂಲಕ ಪ್ರತಿಭಟನಾಕಾರರ ಮತ್ತು ಪೊಲೀಸರ ನಡವಳಿಕೆಯನ್ನು ದಾಖಲಿಸಬಹುದಿತ್ತು. ತಪ್ಪು ಮಾಡಿದವರನ್ನು ಗುರುತಿಸಿ ನೇರವಾಗಿ ಅವರ ವಿರುದ್ಧವೇ ಕ್ರಮ ಕೈಗೊಳ್ಳಬಹುದಿತ್ತು.
ಪ್ರತಿಭಟನೆಗೆ ಕೇವಲ ಮೂರು ದಿನಗಳ ಮುಂಚಿತವಾಗಿ ಅನುಮತಿ ಕೋರಿ ಅರ್ಜಿ ಬಂದಿತ್ತು ಎಂಬ ಸಬೂಬು ಸಾಕಾಗುವುದಿಲ್ಲ. ಪೊಲೀಸರು ಹತ್ತಾರು ಸಾವಿರ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಿದ್ದಾಗ, ಮಾತುಕತೆಯ ಮೂಲಕ ಸುಗಮ ಪ್ರತಿಭಟನೆಗೆ ಅವಕಾಶ ಮಾಡಿಕೊಡಲು ಏಕೆ ಸಾಧ್ಯವಾಗಲಿಲ್ಲ?
ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಆದರೆ ಕಲ್ಲು ತೂರಾಟ, ಹಲ್ಲೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸುವುದು ಕಾನೂನುಬಾಹಿರ. ಅವುಗಳ ವಿರುದ್ಧ ಖಂಡಿತವಾಗಿಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವೃತ್ತಿಪರ ಪೊಲೀಸ್ ವ್ಯವಸ್ಥೆಯು ಈ ಎರಡರ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಪೊಲೀಸರ ಮುಖವು ಆಡಳಿತ ಪಕ್ಷದಂತೆ ಕಾಣದೆ, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತಾ ನಿಯಮಗಳನ್ನು ಪಾಲಿಸುವ ವ್ಯವಸ್ಥಾಪಕನಂತೆ ಕಾಣಬೇಕು.

ದುರದೃಷ್ಟವಶಾತ್, ರಾಜಕೀಯ ಪಕ್ಷಗಳು ಪ್ರತಿಪಕ್ಷದಲ್ಲಿದ್ದಾಗ ಮಾತ್ರ ಪೊಲೀಸ್ ಜವಾಬ್ದಾರಿಯ ಬಗ್ಗೆ ಮಾತನಾಡುತ್ತವೆ. ಸರ್ವೋಚ್ಚ ನ್ಯಾಯಾಲಯ ನೀಡಿದ ಪೊಲೀಸ್ ಸುಧಾರಣಾ ನಿರ್ದೇಶನಗಳನ್ನು ಜಾರಿಗೊಳಿಸಲು ಅಥವಾ ಪೊಲೀಸರ ವೃತ್ತಿಪರ ನಿರ್ಧಾರಗಳನ್ನು ರಕ್ಷಿಸುವ ವ್ಯವಸ್ಥೆ ನಿರ್ಮಿಸಲು ಯಾರೂ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ. ನಂಬಲರ್ಹವಾದ ‘ರಾಜ್ಯ ಭದ್ರತಾ ಆಯೋಗ’ ಇದ್ದರೆ ಅದು ನೀತಿಗಳನ್ನು ರೂಪಿಸಲು, ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಅನಗತ್ಯ ರಾಜಕೀಯ ಹಸ್ತಕ್ಷೇಪವನ್ನು ತಡೆಯಲು ನೆರವಾಗುತ್ತದೆ. ಪೊಲೀಸರ ಕಾರ್ಯನಿರ್ವಹಣಾ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯೂ ಇರಬೇಕು; ನಿರ್ಬಂಧಗಳಿಗೆ ಲಿಖಿತ ಕಾರಣಗಳು, ಅತಿಯಾದ ಬಲಪ್ರಯೋಗದ ಸ್ವತಂತ್ರ ತನಿಖೆ ಮತ್ತು ಪಾರದರ್ಶಕ ಪರಿಶೀಲನೆ ಅಗತ್ಯ.
ಪೊಲೀಸರ ತರಬೇತಿಯೂ ಅಷ್ಟೇ ಮುಖ್ಯ. ಸಂಧಾನ ನಡೆಸುವುದು ಮತ್ತು ಉದ್ವಿಗ್ನತೆ ಶಮನಗೊಳಿಸುವುದು ತಕ್ಷಣ ಬರುವ ಕಲೆಗಳಲ್ಲ. ಸಂಯಮದಿಂದ ವರ್ತಿಸುವುದು ಮತ್ತು ಮಿತವಾಗಿ ಬಲಪ್ರಯೋಗ ಮಾಡುವುದನ್ನು ಬ್ಯಾರಿಕೇಡ್ ಮುಂದೆ ನಿಂತು ಕಲಿಯುವುದಕ್ಕೆ ಸಾಧ್ಯವಿಲ್ಲ. ಪೊಲೀಸರು ಸದಾ ಭದ್ರತಾ ಕರ್ತವ್ಯದಲ್ಲೇ ಮುಳುಗಿದ್ದರೆ ಇಂತಹ ಕೌಶಲಗಳನ್ನು ಕಲಿಯಲು ಸಮಯವೇ ಸಿಗುವುದಿಲ್ಲ.
ಗೃಹ ಸಚಿವಾಲಯದ ಅಧಿಕಾರಿಗಳ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ವೃತ್ತಿಪರ ಪೊಲೀಸ್ ವ್ಯವಸ್ಥೆಗೆ ಬೆಂಬಲ ನೀಡುವುದು ಅವರ ಕೆಲಸ. ಅಸಾಮಾನ್ಯ ನಿರ್ಬಂಧಗಳ ಅಗತ್ಯವನ್ನು ಅವರು ಪರೀಕ್ಷಿಸಬೇಕು. ಸಚಿವರಿಗೆ ನಿಷ್ಠುರವಾಗಿ ಸಲಹೆ ನೀಡಬೇಕು. ಆದರೆ ಅವರು ಕೇವಲ ರಾಜಕೀಯ ಸಂದೇಶ ರವಾನಿಸುವ ಮಾಧ್ಯಮವಾದರೆ ಆಡಳಿತದಲ್ಲಿ ವಿವೇಕವೇ ಇರುವುದಿಲ್ಲ. ವಾಸ್ತವ ಸ್ಥಿತಿ ಮತ್ತು ಸಾಂವಿಧಾನಿಕ ಜವಾಬ್ದಾರಿಗಳನ್ನು ಸರ್ಕಾರಕ್ಕೆ ದಿಟ್ಟವಾಗಿ ತಿಳಿಸಬಲ್ಲ ಆಂತರಿಕ ಭದ್ರತಾ ತಜ್ಞರೇ ಗೃಹ ಕಾರ್ಯದರ್ಶಿಯಾಗಬೇಕು. ಇದು ಇಂದಿನ ತುರ್ತು ಅಗತ್ಯ.
ಇದನ್ನು ಓದಿದ್ದೀರಾ?: ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?
ಅಕ್ಟೋಬರ್ 10ರ ವಿದ್ಯಮಾನವು ಜನರ ಮೂಲ ಅಸಮಾಧಾನದಿಂದ ಗಮನವನ್ನು ಬೇರೆಡೆ ಸೆಳೆದು ಪೊಲೀಸರ ವರ್ತನೆಯತ್ತ ತಿರುಗುವಂತೆ ಮಾಡಿದೆ. ಈ ತಪ್ಪನ್ನು ತಪ್ಪಿಸಬಹುದಿತ್ತು. ನಿರಂತರ ವಿರೋಧದ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರನ್ನು ಮುಂದುವರಿಸಲು ಸರ್ಕಾರದ ಇಷ್ಟೊಂದು ಸಂಪನ್ಮೂಲಗಳನ್ನು ವ್ಯಯಿಸುವುದು ಎಷ್ಟು ಸರಿ ಎಂಬುದನ್ನು ಆಡಳಿತ ಪಕ್ಷವೇ ನಿರ್ಧರಿಸಬೇಕಿದೆ. ಇಂತಹ ಕಠಿಣ ನಿರ್ಬಂಧಗಳು ಏಕೆ ಬೇಕಾಗಿದ್ದವು ಎಂದು ಸರ್ಕಾರ ಜನರಿಗೆ ಉತ್ತರಿಸಬೇಕು. ಮಾತುಕತೆ ನಡೆಸಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಶೀಘ್ರದಲ್ಲೇ ಮತ್ತೊಂದು ಪ್ರತಿಭಟನೆ ನಡೆಯಬಹುದು. ಇಡೀ ರಾಜಧಾನಿಯನ್ನೇ ಬಂದ್ ಮಾಡುವುದು ಸುರಕ್ಷತೆಯ ಲಕ್ಷಣವಲ್ಲ. ಪ್ರಜಾಪ್ರಭುತ್ವದ ಉಳಿವಿಗೆ ಇದು ಸೂಕ್ತವಲ್ಲ ಎಂಬ ಸತ್ಯವನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕು.
ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್, ಮೂಲ: ಯಶೋವರ್ಧನ್ ಜಾ ಅಜಾದ್, ನಿವೃತ್ತ ಐಪಿಎಸ್ ಅಧಿಕಾರಿ, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್





