ಭಾರತದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ ಕರೆಕೊಟ್ಟಿದ್ದ ಅಕ್ಟೋಬರ್ 10ರ ಬೃಹತ್ ಪ್ರತಿಭಟನೆ ಯಶಸ್ವಿಯಾಗಿದೆ. ಇದಕ್ಕೆ, ದೆಹಲಲಿಯಲ್ಲಿ 40,000 ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಿದ್ದೇ ಸಾಕ್ಷಿ ಎಂದು ಜನ ಸುರಾಜ್ ಪಾರ್ಟಿಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರಕ್ಕೆ ದೆಹಲಿಯಲ್ಲಿ 40 ಸಾವಿರಕ್ಕೂ ಅಧಿಕ ಅರೆಸೇನಾ ಸೈನಿಕರನ್ನು ರಸ್ತೆಗಳಲ್ಲಿ ನಿಯೋಜಿಸಬೇಕಾಗಿ ಬಂದಿತು. ಈ ಭಾರಿ ಭದ್ರತೆಯೇ ಸರ್ಕಾರದ ಆತಂಕ ಮತ್ತು ಈ ಪ್ರತಿಭಟನೆಯ ನಿಜವಾದ ಶಕ್ತಿಯನ್ನು ತೋರಿಸುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪ್ರತಿಭಟನಾ ಸ್ಥಳಕ್ಕೆ ಎಷ್ಟು ಜನರು ಹಾಜರಾದರು ಎಂಬುವುದಕ್ಕಿಂತಲೂ, ಆ ಪ್ರತಿಭಟನೆಯನ್ನು ತಡೆಯಲು ಸರ್ಕಾರ ಇಷ್ಟು ದೊಡ್ಡ ಪ್ರಮಾಣದ ರಕ್ಷಣಾ ಪಡೆಗಳನ್ನು ಜಮಾಯಿಸಬೇಕಾಗಿ ಬಂದಿರುವುದೇ ಈ ಹೋರಾಟದ ಯಶಸ್ಸನ್ನು ಸಾಬೀತುಪಡಿಸುತ್ತದೆ” ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
“ಈ ಪ್ರತಿಭಟನೆಯ ಹಿಂದೆ ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆ ಕುಸಿದಿರುವುದು ಪ್ರಮುಖ ಕಾರಣವಾಗಿದೆ. ಕಳೆದ 8 ರಿಂದ 10 ವರ್ಷಗಳಲ್ಲಿ ಆಯೋಗದ ಪಾತ್ರದ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ” ಎಂದು ಅವರು ಹೇಳಿದ್ದಾರೆ.
ಶನಿವಾರದ ಸಿಜೆಪಿ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸುಮಾರು 40,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ರಾಜಧಾನಿಯಲ್ಲಿ ನಿಯೋಜಿಸಲಾಗಿತ್ತು. ಇದರಲ್ಲಿ ದೆಹಲಿ ಪೊಲೀಸ್ ಇಲಾಖೆಯ 15,000ಕ್ಕೂ ಅಧಿಕ ಸಿಬ್ಬಂದಿ ಮತ್ತು ಕೇಂದ್ರ ಪಡೆಗಳ ಸುಮಾರು 26,000 ಜವಾನರು ಸೇರಿದ್ದರು. ಜಂತರ್ ಮಂತರ್ ಕಡೆಗೆ ಸಾಗುವ ಮಾರ್ಗಗಳನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ದೆಹಲಿ ಮೆಟ್ರೋದ ಸುಮಾರು 45 ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಅಲ್ಲದೆ, ಮಧ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಪ್ರತಿಭಟನೆಗೆ ಮುನ್ನವೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿದಂತೆ ಸುಮಾರು 4 ಸಾವಿರ ಪ್ರತಿನಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು.



