ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI) ಹೊರಡಿಸಿದ್ದ ಸೋಲಾರ್ ಪವರ್ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಮತ್ತು ಸಂಬಂಧಿಸಿದ ಸಂಸ್ಥೆಗಳು ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿವೆ ಹಾಗೂ ಮಾರುಕಟ್ಟೆ ಪ್ರಾಬಲ್ಯದ ದುರುಪಯೋಗ ಮಾಡಿಕೊಂಡಿವೆ ಎಂದು ಸಲ್ಲಿಕೆಯಾಗಿದ್ದ ದೂರನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ವಜಾಗೊಳಿಸಿದೆ. ಪ್ರಕರಣದ ಸಂಬಂಧ ಯಾವುದೇ ಪ್ರಾಥಮಿಕ ಪುರಾವೆಗಳು ಲಭ್ಯವಿಲ್ಲದ ಕಾರಣ ಈ ತೀರ್ಪು ನೀಡಲಾಗಿದೆ ಎಂದು ತಿಳಿಸಿದೆ.
ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಅಜುರೆ ಪವರ್ ಇಂಡಿಯಾದಂತಹ ದೊಡ್ಡ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಏಕಸ್ವಾಮ್ಯ ಸಾಧಿಸಿವೆ. ಟೆಂಡರ್ ಅನ್ನು ಈ ಕಂಪನಿಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಹಾಗೂ ಸಣ್ಣ ಕಂಪನಿಗಳನ್ನು ಸ್ಪರ್ಧೆಯಿಂದ ಹೊರಗಿಡಲು ಪ್ರಯತ್ನಿಸಲಾಗಿದೆ ಎಂದು ದೆಹಲಿಯ ರವಿ ಶರ್ಮಾ ಎಂಬುವವರು ಆರೋಪಿಸಿ ದೂರು ದಾಖಲಿಸಿದ್ದರು. ಅಲ್ಲದೆ, ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿತ್ತು.
ಆದರೆ ಆಯೋಗವು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಭಾರತದ ವಿದ್ಯುತ್ ಉತ್ಪಾದನಾ ಮಾರುಕಟ್ಟೆಯಲ್ಲಿ ಎನ್‌ಟಿಪಿಸಿ (NTPC), ಟಾಟಾ ಪವರ್, ಟೊರೆಂಟ್ ಪವರ್ ಮತ್ತು ರಿಲಯನ್ಸ್ ಪವರ್‌ನಂತಹ ಪ್ರಬಲ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಹೀಗಾಗಿ, ಅದಾನಿ ಸಮೂಹವು ಈ ಮಾರುಕಟ್ಟೆಯಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಷ್ಟು ‘ಪ್ರಬಲ ಸ್ಥಾನ’ದಲ್ಲಿಲ್ಲ (Dominant Player) ಎಂದು ಹೇಳಿದೆ.
ಇದನ್ನೂ ಓದಿ: ಭಾರತದ ಜಿಡಿಪಿ ಬೆಳವಣಿಗೆ: ಹೊಸ ಆರಂಭಕ್ಕಾಗಿ ಹೊಸ ಸಾಕ್ಷ್ಯಾಧಾರಗಳು
ದೂರುದಾರರು ಮಾಡಿದ ಲಂಚದ ಆರೋಪ, ಪ್ರವೇಶ ತಡೆ ಹಾಗೂ ಅನ್ಯಾಯದ ಪದ್ಧತಿಗಳ ಬಗ್ಗೆ ಯಾವುದೇ ಬಲವಾದ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಸಿಸಿಐ ಅಭಿಪ್ರಾಯಪಟ್ಟಿದೆ. ಟೆಂಡರ್‌ನಲ್ಲಿನ ‘ಗ್ರೀನ್ ಶೂ ಆಪ್ಷನ್’ ಮತ್ತು ದರ ಪರಿಷ್ಕರಣೆಯಂತಹ ನಿಯಮಗಳು ದೊಡ್ಡ ಕಂಪನಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿವೆ ಎಂಬ ಆರೋಪವನ್ನೂ ಸಿಸಿಐ ತಳ್ಳಿಹಾಕಿದೆ. ಟೆಂಡರ್ ವಿನ್ಯಾಸವನ್ನು ಖರೀದಿ ಮಾಡುವ ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿರುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ಸ್ಪರ್ಧಾತ್ಮಕ ಕಾಯ್ದೆಯ ಸೆಕ್ಷನ್ 3 (ವಿರೋಧಿ ಒಪ್ಪಂದಗಳು) ಮತ್ತು ಸೆಕ್ಷನ್ 4 (ಪ್ರಬಲ ಸ್ಥಾನದ ದುರ್ಬಳಕೆ) ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಈ ಕಾರಣದಿಂದಾಗಿ, ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ತಿಳಿಸಿರುವ ಆಯೋಗವು ಪ್ರಕರಣವನ್ನು ತಕ್ಷಣವೇ ಮುಕ್ತಾಯಗೊಳಿಸಿದೆ.




