ಮಾಜಿ ಪ್ರಧಾನಿ, ದಿವಂಗತ ಡಾ. ಮನಮೋಹನ್ ಸಿಂಗ್ ವಿರುದ್ಧದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಅಲ್ಲದೆ, ಅವರ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ಆದೇಶವನ್ನೂ ಕೂಡ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಮನ್ಮೋಹನ್ ಸಿಂಗ್ ಮತ್ತು ಇತರರಿಗೆ ಕ್ಲೀನ್ ಚಿಟ್ ನೀಡಿದ್ದ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಕ್ತಾಯ ವರದಿಯನ್ನು ಪುರಸ್ಕರಿಸಿದೆ. ಇದರಿಂದಾಗಿ, ಯುಪಿಎ ಸರ್ಕಾರದ ವಿರುದ್ಧದ ಕೇಳಿಬಂದಿದ್ದ ಹೈ-ಪ್ರೊಫೈಲ್ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದಾದ ಕಲ್ಲಿದ್ದಲು ಹಂಚಿಕೆ ಹಗರಣದಿಂದ ಮನ್ಮೋಹನ್ ಸಿಂಗ್ ಅವರು ದೋಷಮುಕ್ತಗೊಂಡಿದ್ದಾರೆ.
ಸಿಬಿಐ ಸಲ್ಲಿಸಿದ ಮುಕ್ತಾಯ ವರದಿಯನ್ನು ತಿರಸ್ಕರಿಸಲು ಅಥವಾ ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಕೋರ್ಟ್ ಹೇಳಿದೆ.
“ಸಂಬಂಧಪಟ್ಟ ಹಿರಿಯ ವಕೀಲರ ನೆರವಿನೊಂದಿಗೆ ನಾವು ಸಿಬಿಐ ಸಲ್ಲಿಸಿದ ಎರಡೂ ಮುಕ್ತಾಯ ವರದಿಗಳನ್ನು ಪರಿಶೀಲಿಸಿದ್ದೇವೆ. ತನಿಖಾ ಸಂಸ್ಥೆಯು ಸಲ್ಲಿಸುವ ವರದಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಕುರಿತು ಈ ನ್ಯಾಯಾಲಯವು ನಿರಂತರವಾಗಿ ರೂಪಿಸಿರುವ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು, ಸಿಬಿಐ ಸಲ್ಲಿಸಿದ ವರದಿಯನ್ನು ಬದಿಗೊತ್ತಲು ಮತ್ತು ಅಪರಾಧವನ್ನು ಪರಿಗಣಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ” ಎಂದು ಪೀಠವು ಹೇಳಿದೆ.
2005ರಲ್ಲಿ ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ಮನ್ಮೋಹನ್ ಸಿಂಗ್, ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್ ಹಾಗೂ ಇತರ ಮೂವರನ್ನು ವಿಶೇಷ ನ್ಯಾಯಾಲಯವು ಆರೋಪಿಗಳನ್ನಾಗಿ ಮಾಡಿ 2015ರಲ್ಲಿ ಸಮನ್ಸ್ ಜಾರಿಗೊಳಿಸಿತ್ತು. ಆ ಸಮನ್ಸ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ನಡುವೆ, ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಇತ್ತೀಚೆಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಮುಕ್ತಾಯದ ವರದಿ ಸಲ್ಲಿಸಿತ್ತು.
ತಮ್ಮ ವಿರುದ್ಧ ಆರೋಪಗಳು ಮತ್ತು ನಾನಾ ರೀತಿಯಲ್ಲಿ ದಾಳಿಗಳು ನಡೆದಾಗ ಮನಮೋಹನ್ ಸಿಂಗ್ ಅವರು, “ಸಮಕಾಲೀನ ಮಾಧ್ಯಮಗಳು ಅಥವಾ ಸಂಸತ್ತಿನಲ್ಲಿರುವ ವಿರೋಧ ಪಕ್ಷಗಳಿಗಿಂತ ಇತಿಹಾಸವೇ ನನ್ನ ಬಗ್ಗೆ ಹೆಚ್ಚು ಉದಾರವಾಗಿರಲಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ” ಎಂದು ಹೇಳಿದ್ದರು ಎಂಬುದನ್ನೂ ನಾವು ಸ್ಮರಿಸಬಹುದು.
2024ರ ಡಿಸೆಂಬರ್‌ನಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಮನಮೋಹನ್ ಸಿಂಗ್ ಅವರು ಸಾವನ್ನಪ್ಪಿದರು.



