ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರು ಮತ್ತೊಮ್ಮೆ ತಮ್ಮ ದ್ವೇಷ ಭಾಷಣದ ಮೂಲಕ ರಾಜ್ಯ ರಾಜಕೀಯದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಟ ಪ್ರಕಾಶ್ ರಾಜ್ ಹಾಗೂ ಕೆಲವು ಅಧ್ಯಾಪಕರ ಬಗ್ಗೆ ಬಳಸಿದ ಪದಗಳು ಮತ್ತು ನೀಡಿದ ಎಚ್ಚರಿಕೆಗಳು ತೀವ್ರ ಚರ್ಚೆಗೆ ಕಾರಣವಾಗಿವೆ.
ತಮ್ಮ ಭಾಷಣದಲ್ಲಿ, “24 ಗಂಟೆಗಳ ಕಾಲ ಡ್ರಗ್ಸ್ ನಶೆಯಲ್ಲಿ ತೇಲುತ್ತಿರುವ ರಾಹುಲ್ ಗಾಂಧಿಗೆ ಚಿಂತನೆ ಮಾಡುವ ಶಕ್ತಿ ಇಲ್ಲ. ಕ್ರ್ಯಾಕೊಜ್‌ಗಳೊಂದಿಗೆ ಸೇರಿ ನಮ್ಮ ಪ್ರಧಾನಿಯನ್ನು ಟೀಕೆ ಮಾಡುವ ಕೆಲಸ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಈ ರೀತಿಯ ನಾಟಕ ಮಾಡಿದರೆ, 1992ರಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬಂದಾಗ ಹೇಗೆ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದೇವೆಯೋ, ಅದೇ ರೀತಿಯಲ್ಲಿ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುವ ಕಾರ್ಯವನ್ನು ನಾವೆಲ್ಲ ಕಾರ್ಯಕರ್ತರು ಮಾಡಲಿದ್ದೇವೆ. ಈ ಮೂಲಕ ರಾಹುಲ್ ಗಾಂಧಿ ತಂಡಕ್ಕೆ ಎಚ್ಚರಿಕೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ಕಲಾವಿದರನ್ನು ಒಟ್ಟುಗೂಡಿಸಿ ವಿಷಬೀಜ ಬಿತ್ತಲು ಯತ್ನಿಸುತ್ತಿರುವ ಪ್ರಕಾಶ್ ರಾಜ್ ಕರಾವಳಿಯಲ್ಲಿ ಬಂದು ಅಧಿಕ ಪ್ರಸಂಗ ಮಾಡಿದರೆ, ಅರಬ್ಬೀ ಸಮುದ್ರದಲ್ಲಿ ಎದ್ದೇಳಬೇಕಾಗುತ್ತದೆ ಅಥವಾ ಮೀನಿಗೆ ಆಹಾರವಾಗಬೇಕಾಗುತ್ತದೆ ಎಂದು ದ್ವೇಷ ಕಾರಿದ್ದಾರೆ.

ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹಾಗೂ ಬೆದರಿಕೆ ಸ್ವರೂಪದ ಹೇಳಿಕೆಗಳನ್ನು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಕಾಂಗ್ರೆಸ್, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಸಹಬಾಳ್ವೆ ಉಡುಪಿ, ಎಸ್‌ಡಿಪಿಐ, ಸಿಜೆಪಿ ಬೆಂಬಲಿಗರು ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ತೀವ್ರ ಖಂಡನೆ ವ್ಯಕ್ತಪಡಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿವೆ.
ಯಶ್‌ಪಾಲ್ ಸುವರ್ಣ ಅವರ ರಾಜಕೀಯ ಪಯಣದಲ್ಲಿ ವಿವಾದಾತ್ಮಕ ಹೇಳಿಕೆಗಳು ಹೊಸದೇನಲ್ಲ ಎಂಬ ಟೀಕೆಗಳು ಪದೇಪದೇ ಕೇಳಿಬರುತ್ತಿವೆ. ಪ್ರತಿಯೊಂದು ರಾಜಕೀಯ ಸಂಘರ್ಷದ ಸಂದರ್ಭದಲ್ಲೂ ಅಭಿವೃದ್ಧಿ, ಜನಸಮಸ್ಯೆ, ಉದ್ಯೋಗ, ಮೂಲಸೌಕರ್ಯ ಅಥವಾ ಶಿಕ್ಷಣದಂತಹ ವಿಷಯಗಳಿಗಿಂತ ವೈಯಕ್ತಿಕ ದಾಳಿ, ಪ್ರಚೋದನಕಾರಿ ಭಾಷೆ ಮತ್ತು ಎದುರಾಳಿಗಳ ವಿರುದ್ಧ ಕಟುವಾದ ಹೇಳಿಕೆಗಳೇ ಹೆಚ್ಚಾಗಿ ಸುದ್ದಿಯಾಗುತ್ತಿವೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಚಾರ.
ಒಬ್ಬ ಶಾಸಕ ಕೇವಲ ಪಕ್ಷದ ನಾಯಕನಲ್ಲ; ಅವರು ಇಡೀ ಕ್ಷೇತ್ರದ ಪ್ರತಿನಿಧಿ. ಅವರ ಮಾತುಗಳು ಸಾರ್ವಜನಿಕರಲ್ಲಿ ಪರಿಣಾಮ ಬೀರುತ್ತವೆ. ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಅವರ ಭಾಷೆಯನ್ನು ಗಮನಿಸುತ್ತಾರೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಜನಪ್ರತಿನಿಧಿಯ ಮಾತುಗಳು ಸಂವಿಧಾನದ ಮೌಲ್ಯಗಳು, ಕಾನೂನಿನ ಗೌರವ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬಲಪಡಿಸುವಂತಿರಬೇಕು ಎಂಬ ನಿರೀಕ್ಷೆ ಸಮಾಜದಲ್ಲಿದೆ.
ಪ್ರಜಾಪ್ರಭುತ್ವದಲ್ಲಿ ತೀಕ್ಷ್ಣ ಟೀಕೆಗಳಿಗೆ ಅವಕಾಶವಿದ್ದರೂ, ರಾಜಕೀಯ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಭಾಷೆ ಹಿಂಸೆಯ ಸಂದೇಶ ಅಥವಾ ಬೆದರಿಕೆಯ ಸ್ವರೂಪ ಪಡೆಯಬಾರದು ಎಂಬುದು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾದ ಸಾಮಾನ್ಯ ನಿರೀಕ್ಷೆಯಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಈ ಕುರಿತು ಪ್ರತಿಕ್ರಿಯಿಸಿದ್ದು, “ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿರುವ ಜನಪ್ರತಿನಿಧಿಯೊಬ್ಬರು ಈ ರೀತಿಯ ದ್ವೇಷಪೂರಿತ ಭಾಷೆ ಬಳಸಿರುವುದು ಅತ್ಯಂತ ಗಂಭೀರ ವಿಷಯ” ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಗೃಹ ಸಚಿವರೊಂದಿಗೆ ಚರ್ಚಿಸಿ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ದ್ವೇಷ ಭಾಷಣ ಮಾಡಿರುವ ಶಾಸಕ ಯಶ್‌ಪಾಲ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ – ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಆಗ್ರಹ
ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಜಿಲ್ಲಾಧ್ಯಕ್ಷ ಅಫ್ವಾನ್ ಬಿ. ಅವರು, ಶಾಸಕ ಯಶ್‌ಪಾಲ್ ಸುವರ್ಣ ಅವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನಪ್ರತಿನಿಧಿಗಳು ಸಭ್ಯ ಭಾಷೆ ಬಳಸಬೇಕು. ಆದರೆ ಶಾಸಕರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಟ ಪ್ರಕಾಶ್ ರಾಜ್ ಹಾಗೂ ವಿದ್ಯಾರ್ಥಿಗಳ ಬಗ್ಗೆ ಬೆದರಿಕೆ ಧಾಟಿಯಲ್ಲಿ ಮಾತನಾಡಿರುವುದು ಜನಪ್ರತಿನಿಧಿಗೆ ತಕ್ಕ ವರ್ತನೆಯಲ್ಲ. ಆದ್ದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರು, “ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಳಸಿದ ಭಾಷೆ ಗೂಂಡಾ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕ್ಷೇತ್ರದ ಅಭಿವೃದ್ಧಿಗಿಂತ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿರುವ ಶಾಸಕ ಯಶ್‌ಪಾಲ್ ಸುವರ್ಣ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಿದೆ” ಎಂದು ಎಚ್ಚರಿಸಿದ್ದಾರೆ.
ಯಶ್‌ಪಾಲ್ ಸುವರ್ಣರ ಅಸಂವಿಧಾನಿಕ ನಡತೆಯ ಖಂಡನೆ
‘ಸಹಬಾಳ್ವೆ ಉಡುಪಿ ಜಿಲ್ಲೆ’ ಸಂಘಟನೆಯ ಪ್ರಧಾನ ಸಂಚಾಲಕ ಕೆ. ಫಣಿರಾಜ್ ಅವರು, ವಿದ್ಯಾರ್ಥಿಗಳ ಶಾಂತಿಯುತ ಚಳವಳಿಯನ್ನು ಬೆಂಬಲಿಸಿದವರ ವಿರುದ್ಧ ಅವಮಾನಕರವಾಗಿ ಮಾತನಾಡಿರುವುದು ಜನಪ್ರತಿನಿಧಿಯ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದ್ದಾರೆ. ಶಾಸಕರು ತಮ್ಮ ಸ್ಥಾನಮಾನದ ಮಿತಿಯನ್ನು ಮೀರಿ ವರ್ತಿಸಿದ್ದು, ರಾಜ್ಯ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ ಅವರು, ಶಾಸಕ ಯಶ್‌ಪಾಲ್ ಸುವರ್ಣ ಅವರ ಭಾಷಣವನ್ನು ಗೂಂಡಾ ಮನಸ್ಥಿತಿ ಹಾಗೂ ಬೆದರಿಕೆ ರಾಜಕಾರಣದ ಪ್ರತೀಕ ಎಂದು ಟೀಕಿಸಿದ್ದಾರೆ. ಜನಪ್ರತಿನಿಧಿಗಳು ಸಮಾಜದಲ್ಲಿ ಸೌಹಾರ್ದತೆ ಬೆಳೆಸಬೇಕಾದವರು. ಆದರೆ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಸರ್ಕಾರವು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವೆಲ್‌ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಉದ್ಯಾವರ ಅವರು, ಶಾಸಕ ಯಶ್‌ಪಾಲ್ ಸುವರ್ಣ ಅವರ ಹೇಳಿಕೆಗಳು ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನೇ ಅಪರಾಧೀಕರಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮಾಹೆ ವಿಶ್ವವಿದ್ಯಾಲಯದ ಅಧ್ಯಾಪಕರ ವಿರುದ್ಧ ಗಂಭೀರ ಆರೋಪ ಮಾಡಿರುವುದು ಅತ್ಯಂತ ಬೇಜವಾಬ್ದಾರಿಯ ಕ್ರಮ ಎಂದು ಹೇಳಿರುವ ಅವರು, ಶಾಸಕರ ವಿರುದ್ಧ ಕಾನೂನುಬದ್ಧ ತನಿಖೆ ನಡೆಸಿ ಅಗತ್ಯವಿದ್ದರೆ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿ ಶಾಸಕನ ಹೇಳಿಕೆ ಖಂಡನೀಯ: ಕೋಟ ನಾಗೇಂದ್ರ ಪುತ್ರನ್
ಉಡುಪಿ ದೇಶಕ್ಕೆ ಶಿಕ್ಷಣ, ಬ್ಯಾಂಕಿಂಗ್, ಕೃಷಿ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಾನ್ ವ್ಯಕ್ತಿಗಳನ್ನು ನೀಡಿರುವ ಜಿಲ್ಲೆಯಾಗಿದ್ದು, ಸೌಹಾರ್ದ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಆದರೆ ಉಡುಪಿ ಶಾಸಕನ ಇತ್ತೀಚಿನ ಹೇಳಿಕೆಗಳು ಸಮಾಜದಲ್ಲಿ ಜಾತಿ-ಧರ್ಮಗಳ ನಡುವೆ ದ್ವೇಷ ಬಿತ್ತುವಂತಿವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ಕುಟುಂಬದ ಕುರಿತು ಶಾಸಕ ನೀಡಿರುವ ಹೇಳಿಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಖಂಡಿಸಿದ ಅವರು, ಮುಂದಿನ ದಿನಗಳಲ್ಲಿ ಶಾಸಕನ ವಿರುದ್ಧದ ಭ್ರಷ್ಟಾಚಾರ ಹಾಗೂ ಬ್ಯಾಂಕ್ ಮತ್ತು ಮೀನುಗಾರಿಕಾ ಫೆಡರೇಷನ್‌ಗೆ ಸಂಬಂಧಿಸಿದ ಆರೋಪಗಳ ಬಗ್ಗೆ ದಾಖಲೆಗಳೊಂದಿಗೆ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

“ಯಶ್‌ಪಾಲ್ ಸುವರ್ಣರನ್ನು ಅನರ್ಹಗೊಳಿಸಬೇಕು” – ಸುರೇಶ್ ಶೆಟ್ಟಿ ಬನ್ನಂಜೆ
ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ, ಚುನಾವಣಾ ಆಯೋಗ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಯಶ್‌ಪಾಲ್ ಸುವರ್ಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲ ಪ್ರತಿಕ್ರಿಯೆಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಪ್ರಶ್ನೆ ಒಂದೇ: ಉಡುಪಿ ವಿಧಾನಸಭಾ ಕ್ಷೇತ್ರದ ಜನರು ತಮ್ಮ ಶಾಸಕರಿಂದ ನಿರೀಕ್ಷಿಸುವುದು ದ್ವೇಷದ ಭಾಷಣಗಳನ್ನೇ, ಅಥವಾ ಅಭಿವೃದ್ಧಿಯ ಕೆಲಸಗಳನ್ನೇ?
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಚರಂಡಿ, ಮಳೆ ನೀರಿನ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳ ಸೌಲಭ್ಯ, ಉದ್ಯೋಗ, ಪ್ರವಾಸೋದ್ಯಮ, ಮೀನುಗಾರಿಕೆ, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ಅನೇಕ ವಿಷಯಗಳು ಜನರ ಮುಂದಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಚರ್ಚೆಗಳು ಅಭಿವೃದ್ಧಿಯ ಬದಲು ವೈಯಕ್ತಿಕ ದಾಳಿ, ಪ್ರಚೋದನಕಾರಿ ಭಾಷೆ ಹಾಗೂ ವಿವಾದಗಳ ಸುತ್ತಲೇ ತಿರುಗುತ್ತಿರುವುದು ಜನರಲ್ಲೂ ಅಸಮಾಧಾನ ಮೂಡಿಸುತ್ತಿದೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಸಹಜ. ಆದರೆ ಜನಪ್ರತಿನಿಧಿಯ ಮಾತುಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನಿನ ಗೌರವವನ್ನು ಹೆಚ್ಚಿಸುವಂತಿರಬೇಕು ಎಂಬ ನಿರೀಕ್ಷೆ ಜನರದ್ದಾಗಿದೆ. ಪ್ರಕರಣದ ತನಿಖೆ ಕಾನೂನಿನ ಪ್ರಕಾರ ನಡೆಯಲಿದೆ. ಆದರೆ ಅದರಾಚೆಗೆ ಉಳಿಯುವ ಪ್ರಶ್ನೆ ಒಂದೇ – ಉಡುಪಿ ಕ್ಷೇತ್ರಕ್ಕೆ ಈಗ ಹೆಚ್ಚು ಅಗತ್ಯವಿರುವುದು ಮತ್ತಷ್ಟು ವಿವಾದಾತ್ಮಕ ಭಾಷಣಗಳೇ, ಅಥವಾ ಜನಜೀವನ ಬದಲಾಯಿಸುವ ಅಭಿವೃದ್ಧಿ ಕಾರ್ಯಗಳೇ ಎಂಬುದನ್ನು ರಾಜಕಾರಣಿಗಳು, ಕರಾವಳಿಯ ಜನರು ವಿವೇಚಿಸಬೇಕಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






