ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪುಣೆಯಲ್ಲಿ ನಡೆಸಿದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ‘ಛಾತ್ರೋನ್ ಕೀ ಗೂಂಜ್’ (ಯುವಜನರ ಧ್ವನಿ) ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಪುಣೆ ಸಮಾವೇಶವನ್ನು ‘ಕಾಮಿಡಿ ಶೋ’ ಎಂದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಆಡಳಿತ ಪಕ್ಷ ನಡುಗಿದೆ’ ಎಂದು ಕಾಂಗ್ರೆಸ್ ಹೇಳಿದೆ.
ರಾಹುಲ್ ಗಾಂಧಿ ಕಾರ್ಯಕ್ರಮ ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದಂತೆ ಈ ಕಾರ್ಯಕ್ರಮದ ಬಗ್ಗೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕೇಶವ್ ಉಪಾಧ್ಯೆ, “ಈ ಕಾರ್ಯಕ್ರಮವು ಕೇವಲ ಮತ್ತೊಂದು ರಾಜಕೀಯ ಕಾಮಿಡಿ ಶೋ ಆಗಿದೆ” ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ಜೆನ್ ಝೀಗಳ ಕ್ರಷ್ ಆದ್ರಾ ರಾಹುಲ್ ಗಾಂಧಿ? – ಪುಣೆ ಸಂವಾದದಲ್ಲಿ ಯುವತಿಯರ ಲವ್ ಮೆಸೇಜ್!
“ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವ ಬದಲು, ಕಾಲೇಜು ಬಸ್‌ಗಳಲ್ಲಿ ಜನರನ್ನು ಕರೆತಂದು ಇದನ್ನು ರಾಜಕೀಯ ಸಮಾವೇಶವನ್ನಾಗಿ ಪರಿವರ್ತಿಸಲಾಗಿದೆ. ರಾಹುಲ್ ಭಾಷಣದಲ್ಲಿ ಕೇವಲ ಹಳೆಯ ಆರೋಪಗಳಿದ್ದವು ಹೊರತು ಕಾಂಗ್ರೆಸ್ ಆಡಳಿತಾವಧಿಯ ಸಾಧನೆಗಳಿರಲಿಲ್ಲ. ಚುನಾವಣಾ ಸೋಲಿನ ನಿರಾಸೆ, ಅಧಿಕಾರ ಕಳೆದುಕೊಂಡ ಸಿಟ್ಟು ಹಾಗೂ ಪ್ರಧಾನಿ ಮೋದಿ ಅವರ ಮೇಲಿನ ಭಯದಿಂದಾಗಿ ರಾಹುಲ್ ಗಾಂಧಿ ಇಂತಹ ‘ಕಾಮಿಡಿ ಶೋ’ ನಡೆಸುತ್ತಿದ್ದಾರೆ” ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಬಿಜೆಪಿಯ ಈ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ಸಾವಂತ್, “ಪುಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಯುವತಿಯರು ಮತ್ತು ವಿದ್ಯಾರ್ಥಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮೆಟ್ರೋ ಬಂದ್ ಮಾಡಿ, ಹಲವಾರು ನಿರ್ಬಂಧಗಳನ್ನು ಹೇರಿದರೂ ಸಾವಿರಾರು ಯುವಜನರು ಭಾಗವಹಿಸಿದ್ದಾರೆ. ಇದನ್ನು ಕಂಡು ಬಿಜೆಪಿ ನಾಯಕರು ಕಂಗಾಲಾಗಿದ್ದು, ಅವರ ನಿದ್ರೆ ಕೆಟ್ಟಿದೆ” ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿ ಅವರಿಗೆ ಯುವಜನರಲ್ಲಿ ಹೆಚ್ಚುತ್ತಿರುವ ಬೆಂಬಲವನ್ನು ಸಹಿಸಲಾಗದೆ ಬಿಜೆಪಿ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಪುಣೆಯ ಎಐಸ್‌ಎಸ್‌ಎಮ್‌ಎಸ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಪ್ರಮುಖವಾಗಿ ಯುವತಿಯರೊಂದಿಗೆ ಸಂವಾದ ನಡೆಸಿ, ಪುರುಷಪ್ರಧಾನ ವ್ಯವಸ್ಥೆ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯದ ವಿಷಯಗಳ ಕುರಿತು ಮಾತನಾಡಿದ್ದರು. ಕಾರ್ಯಕ್ರಮಕ್ಕೆ ಮುನ್ನ ನಗರದ ಕಾಲೇಜು ಆವರಣದಲ್ಲಿ ಎನ್‌ಎಸ್‌ಯುಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಸಣ್ಣ ಮಟ್ಟದ ಘರ್ಷಣೆಯೂ ನಡೆದಿತ್ತು.




