2024ರ ಸಾರ್ವತ್ರಿಕ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸಲು ಮತ್ತು ಬಿಜೆಪಿಯನ್ನು ಎದುರಿಸಲು ತನ್ನ ಚುನಾವಣಾ ಪ್ರಚಾರಕ್ಕೆ ಕಾರ್ಯ ಯೋಜನೆಯನ್ನು ರೂಪಿಸಲು ಕಾಂಗ್ರೆಸ್ ಪಕ್ಷವು ಡಿಸೆಂಬರ್ 21 ರಂದು ಕಾರ್ಯಕಾರಿ ಸಮಿತಿ ಸಭೆ ಕರೆದಿದೆ ಎಂದು ಮೂಲಗಳು ತಿಳಿಸಿವೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಸಭೆಯು ಡಿಸೆಂಬರ್ 19 ರಂದು ಇಂಡಿಯಾ ಒಕ್ಕೂಟದ ಸಭೆ ನಡೆದ ಎರಡು ದಿನಗಳ ನಂತರ ಹಮ್ಮಿಕೊಳ್ಳಲಾಗುತ್ತದೆ. ಸಭೆಯಲ್ಲಿ ಸೀಟು ಹಂಚಿಕೆ ಮತ್ತು ಪ್ರಚಾರವು ಅಜೆಂಡಾದ ಪ್ರಮುಖ ಅಂಶಗಳಾಗಿರಲಿದೆ.
2024ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಪ್ರಮುಖ ಯೋಜನೆಗಳಾಗಿ ಕೈಗೊಳ್ಳಬಹುದಾದ ಯಾತ್ರೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಉತ್ತರದಲ್ಲಿ ನಡೆದ ಅಧಿವೇಶನದಲ್ಲಿ ಸಿಕ್ಕ ಉತ್ತರವೇನು?
ಕಾರ್ಯಾಕಾರಿಣಿಯಲ್ಲಿ ತೆಲಂಗಾಣದಲ್ಲಿ ಗೆಲುವು ಹಾಗೂ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿನ ಸೋಲಿನ ಫಲಿತಾಂಶಗಳ ಬಗ್ಗೆಯೂ ವಿಶ್ಲೇಷಿಸಲಾಗುತ್ತದೆ.
ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆ, ಕಾಲ್ನಡಿಗೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಪಕ್ಷವು ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ‘ಇಂಡಿಯಾ’ ಸಭೆಯ 4ನೇ ಸಭೆ ಡಿಸೆಂಬರ್ 19ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ನಡೆಯಲಿದೆ. ಇದೇ ಸಭೆಯಲ್ಲಿ ಒಕ್ಕೂಟದ ಕಾರ್ಯತಂತ್ರ, ಸೀಟು ಹಂಚಿಕೆ ಮತ್ತು ಜಂಟಿ ರ್‍ಯಾಲಿ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.