ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛ ಮಾಡಿಸಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲೆ ಸಹಿತ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, “ಕೋಲಾರದ ಮಾಲೂರು ತಾಲೂಕಿನ ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿಯನ್ನು ಸ್ವಚ್ಛಗೊಳಿಸಿದ ಪ್ರಕರಣದಲ್ಲಿ ಸದರಿ ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್ ಹಾಗೂ ಡಿ ಗ್ರೂಪ್ ನೌಕರನನ್ನು ಅಮಾನತುಗೊಳಿಸಲಾಗಿರುತ್ತದೆ ಹಾಗೂ ಈ ರೀತಿಯ ಘಟನೆಗಳು ಜರುಗದಂತೆ ಮುಂದೆ ಎಚ್ಚರಿಕೆ ವಹಿಸಲಾಗುವುದು” ಎಂದು ತಿಳಿಸಿದ್ದಾರೆ.
ಕೋಲಾರದ ಮಾಲೂರು ತಾಲೂಕಿನ ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿಯನ್ನು ಸ್ವಚ್ಛಗೊಳಿಸಿದ ಪ್ರಕರಣದಲ್ಲಿ ಸದರಿ ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್ ಇವರನ್ನು ಅಮಾನತುಗೊಳಿಸಲಾಗಿರುತ್ತದೆ ಹಾಗೂ ಈ ರೀತಿಯ ಘಟನೆಗಳು ಜರುಗದಂತೆ ಮುಂದೆ ಎಚ್ಚರಿಕೆ ವಹಿಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸುತ್ತೇನೆ pic.twitter.com/i570DitFwm
— Dr H.C.Mahadevappa (@CMahadevappa) December 17, 2023
ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರು ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಹೊಡೆಯುವುದು, ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ನೀಡುವುದು ಸೇರಿದಂತೆ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮಕ್ಕಳಿಂದ ಶೌಚಾಲಯದ ಹೊಂಡ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಪರಿಶೀಲನೆ ನಡೆಸಿದ್ದರು. ಬಳಿಕ ಶೌಚಾಲಯ ಮಾಡಿಸಿದ ಸಿಬ್ಬಂದಿಗಳನ್ನು ಅಮಾನತು ಮಾಡುತ್ತೇವೆ. ಶಿಕ್ಷಕ ಅಭಿಷೇಕ್ನನ್ನು ಕೆಲಸದಿಂದ ತೆಗೆದು ಹಾಕುತ್ತೇವೆಂದು ಹೇಳಿದ್ದರು.
ಮಕ್ಕಳನ್ನು ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿರುವ ಬಗ್ಗೆ ಮಾಹಿತಿ ಪಡೆದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ ಅವರು ಪ್ರಾಂಶುಪಾಲರು, ವಾರ್ಡನ್, ಗ್ರೂಪ್ ಡಿ ನೌಕರ ಸೇರಿದಂತೆ ಎಲ್ಲರನ್ನೂ ಅಮಾನತು ಮಾಡಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದು, ಇಂತಹ ಕೆಲಸಗಳನ್ನು ರಾಜ್ಯದಲ್ಲಿ ಮಾಡಿಸದಂತೆ ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕೊಡಗು | ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯ ಶ್ಲಾಘನೀಯ: ಬಿ.ಎನ್.ವೀಣಾ
ಸಚಿವರ ಸೂಚನೆ ಮೇರೆಗೆ ವಸತಿ ಶಾಲೆಯ ಅತಿಥಿ ಶಿಕ್ಷಕ ಅಭಿಷೇಕ್ ಎಂಬಾತನನ್ನು ಕೆಲಸದಿಂದ ತೆಗೆದಿದ್ದು, ಪ್ರಾಂಶುಪಾಲೆ ಭಾರತಮ್ಮ, ಚಿತ್ರಕಲಾ ಶಿಕ್ಷಕ ಮುನಿಯಪ್ಪ, ವಸತಿ ಶಾಲೆಯ ವಾರ್ಡನ್ ಮಂಜುನಾಥ್ ಎಂಬುವವರನ್ನು ಅಮಾನತು ಮಾಡಿ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಆದೇಶ ಹೊರಡಿಸಿದ್ದಾರೆ.