ಕೇರಳ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಬುಧವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವು ಕಂಡಿದೆ. ವಿಡಿ ಸತೀಶನ್, ಕೆಸಿ ವೇಣುಗೋಪಾಲ್ ಮತ್ತು ಚೆನ್ನಿತ್ತಲ – ಹೀಗೆ ಮೂವರು ಪ್ರಮುಖ ನಾಯಕರುಗಳ ನಡುವೆ ಸಿಎಂ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ವೇಣುಗೋಪಾಲ್ ಕೇರಳ ಸಿಎಂ? – ಅಚ್ಯುತ ಮೆನನ್ ಉಲ್ಲೇಖಿಸಿ ಸುಳಿವು ನೀಡಿದ ಸನ್ನಿ ಜೋಸೆಫ್
ಬಹುಪಾಲು ಕಾಂಗ್ರೆಸ್ ಶಾಸಕರ ಬೆಂಬಲದ ಹೊರತಾಗಿಯೂ, 2021ರಲ್ಲಿ ವಿಪಕ್ಷ ನಾಯಕ ಹುದ್ದೆಗೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಚೆನ್ನಿತ್ತಲ ನಾಯಕತ್ವಕ್ಕೆ ತಿಳಿಸಿದ್ದಾರೆ. ಹಾಗೆಯೇ ಈಗ ಸಿಎಂ ಸ್ಥಾನಕ್ಕೆ ತಾವು ಅರ್ಹರು ಎಂದು ವಾದಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಸಭೆಯಲ್ಲಿ ವೇಣುಗೋಪಾಲ್ ಕೂಡ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಸದ್ಯ ಸಿಎಂ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿ ವೇಣುಗೋಪಾಲ್ ಇದ್ದಾರೆ. ಅದರ ನಂತರದ ಸ್ಥಾನದಲ್ಲಿ ವಿಡಿ ಸತೀಶನ್ ಇದ್ದಾರೆ ಎಂದು ಹೇಳಲಾಗಿದೆ. ಆದರೆ ವೇಣುಗೋಪಾಲ್ ಬಹುಪಾಲು ಶಾಸಕರ ಬೆಂಬಲವನ್ನು ಹೊಂದಿದ್ದರೂ, ಪ್ರತಿಯೊಂದು ಕ್ಷೇತ್ರದ ಚುನಾಯಿತ ಪ್ರತಿನಿಧಿಗಳನ್ನು ಅವರ ವೈಯಕ್ತಿಕ ಪ್ರಭಾವ, ಸ್ಥಾನಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ಜನರು ಆಯ್ಕೆ ಮಾಡಿದ್ದಾರೆ. ಆದ್ದರಿಂದ ವೇಣುಗೋಪಾಲ್‌ಗೆ ಸಿಎಂ ಸ್ಥಾನ ಕೊಡಲಾಗದು ಎಂಬ ವಾದಗಳೂ ಇವೆ.
ಇನ್ನು ಈ ಹಿಂದೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಕೆ.ಸಿ. ವೇಣುಗೋಪಾಲ್ ಅವರು ಕೇರಳದ ಮುಂದಿನ ಸಿಎಂ ಆಗಬಹುದು ಎಂಬ ಸುಳಿವನ್ನು ಕೇರಳ ಕಾಂಗ್ರೆಸ್ ಮುಖ್ಯಸ್ಥ ಸನ್ನಿ ಜೋಸೆಫ್ ನೀಡಿದ್ದರು. ಶಾಸಕರಲ್ಲದ ಒಬ್ಬರು ಮುಖ್ಯಮಂತ್ರಿಯಾಗುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸನ್ನಿ ಜೋಸೆಫ್ ಉತ್ತರಿಸುತ್ತಾ ಅದು ಸಾಧ್ಯವಿದೆ ಎಂದಿದ್ದಾರೆ. “ಏಕೆ ಸಾಧ್ಯವಿಲ್ಲ. ಅಚ್ಯುತ ಮೆನನ್ ಅವರು ಸಿಎಂ ಆದಾಗ ಶಾಸಕರಾಗಿರಲಿಲ್ಲ” ಎಂದು ಸನ್ನಿ ಜೋಸೆಫ್ ಹೇಳಿದ್ದರು.




