ಉತ್ತರಾಖಂಡ್ನ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯನ್ನು ‘ಶುದ್ಧೀಕರಣ’ಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯದ ಹಿಂದೆ ಇರುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಹಾಗೂ ಎಫ್ಐಆರ್ ದಾಖಲಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ‘X’ ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, “ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ನಂತರ ಬಿಜೆಪಿ ಮತ್ತು ಆರ್ಎಸ್ಎಸ್ ಬೆಂಬಲಿತ ವ್ಯಕ್ತಿಗಳು ವೇದಿಕೆಯ ಶುದ್ಧೀಕರಣ ನಡೆಸಿದ್ದಾರೆ. ಈ ಶುದ್ಧೀಕರಣವು ಅತ್ಯಂತ ಅಸಹ್ಯಕರ ಹಾಗೂ ನಾಚಿಕೆಗೇಡಿನ ಮನಸ್ಥಿತಿಯ ಸಂಕೇತ ಮಾತ್ರವಲ್ಲದೆ, ನಮ್ಮ ಸಂವಿಧಾನ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಗಂಭೀರ ಉಲ್ಲಂಘನೆಯಾಗಿದೆ ಹಾಗೂ ಇದೊಂದು ಅಪರಾಧವಾಗಿದೆ” ಎಂದು ಖಂಡಿಸಿದ್ದಾರೆ.
ಇದನ್ನೂ ಓದಿ: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಪ್ರಧಾನಿಯ ಉತ್ತರ ಕೋರಿದ ಪ್ರಿಯಾಂಕಾ ಗಾಂಧಿ
ಸಂಸತ್ತಿನ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಕುರಿತು ನಡೆಸಿದ ಪತ್ರಿಕಾಗೋಷ್ಠಿಯ ವಿಡಿಯೋವನ್ನು ಹಂಚಿಕೊಂಡಿರುವ ಪ್ರಿಯಾಂಕಾ, ಘಟನೆ ನಡೆದು 20 ದಿನಗಳು ಕಳೆದರೂ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ದೇಶದ ಸಂವಿಧಾನದ ಮೇಲೆ ನಿಜವಾದ ಗೌರವವಿದ್ದರೆ, ಉತ್ತರಾಖಂಡದಲ್ಲಿ ಈ ಅಪರಾಧ ಎಸಗಿದವರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಿ, ಎಸ್ಸಿ/ಎಸ್ಟಿ ಕಾಯ್ದೆಯಡಿ ಸೂಕ್ತ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಆಗಸ್ಟ್ 8ರಂದು ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಅದರ ನಂತರ, ‘ಶ್ರೀ ರಾಮ ಸೇನಾ’ ಎಂಬ ಸಂಘಟನೆಯ ಸದಸ್ಯರು ಸ್ಥಳದಲ್ಲಿ ‘ಶುದ್ಧೀಕರಣ ಹವನ’ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಖರ್ಗೆ ಅವರು ದಲಿತ ಸಮುದಾಯದ ನಾಯಕರಾಗಿರುವುದರಿಂದಲೇ ಈ ರೀತಿ ಅಸ್ಪೃಶ್ಯತೆಯ ಮನಸ್ಥಿತಿಯಿಂದ ಶುದ್ಧೀಕರಣ ನಡೆಸಲಾಗಿದೆ ಎಂಬುದು ಕಾಂಗ್ರೆಸ್ನ ಗಂಭೀರ ಆರೋಪವಾಗಿದೆ. ಈ ವಿಷಯವನ್ನು ಸ್ವತಃ ಖರ್ಗೆ ಅವರೂ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದರು.




