ರಾಜಸ್ಥಾನದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿಯಲ್ಲಿ ‘ಒಳಮೀಸಲಾತಿ’ ಜಾರಿಗೊಳಿಸಬೇಕು. ಜೊತೆಗೆ, ಎಸ್ಸಿ/ಎಸ್ಟಿ ಒಳಮೀಸಲಾತಿಯಲ್ಲಿ ‘ಕ್ರೀಮಿ ಲೇಯರ್’ (ಕೆನೆಪದರ) ವ್ಯವಸ್ಥೆಯನ್ನು ಒಳಗೊಳ್ಳಬಾರದು, ಕ್ರೀಮಿ ಲೇಯರ್ ಇಲ್ಲದ ಒಳಮೀಸಲಾತಿ ಅನುಷ್ಠಾನಗೊಳ್ಳಬೇಕು ಎಂಬ ಆಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ವಾತಂತ್ರ್ಯ ದೊರೆತು ದಶಕಗಳು ಕಳೆದರೂ ಮೀಸಲಾತಿಯ ನಿಜವಾದ ಫಲವನ್ನು ಕೇವಲ ಕೆಲವು ಪ್ರಭಾವಿ ಸಮುದಾಯಗಳು ಮಾತ್ರ ಪಡೆದುಕೊಳ್ಳುತ್ತಿದ್ದು, ಅತ್ಯಂತ ಹಿಂದುಳಿದ ಸಮುದಾಯಗಳು ಇನ್ನೂ ಅಂಚಿನಲ್ಲೇ ಉಳಿದಿವೆ ಎಂಬ ಅಸಮಾಧಾನ ಸ್ಫೋಟಗೊಂಡಿದೆ.
ಆರಕ್ಷಣ್ ಉಪವರ್ಗಿಕರಣ್ ಸಂಘಟನ್ನ ರಾಜ್ಯ ಸಂಯೋಜಕ ರಾಜೇಶ್ ಪಂಚೋರಿಯಾ ಅವರು, “ಪ್ರತಿಯೊಬ್ಬರೂ ಮೀಸಲಾತಿ ಪರವಾಗಿ ಮಾತನಾಡಲು ಚರಂಡಿ ಮತ್ತು ಒಳಚರಂಡಿ ನೈರ್ಮಲ್ಯಗೊಳಿಸುವ ವ್ಯಕ್ತಿಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ಈ ರೀತಿಯ ಅಪಾಯಕಾರಿ ನೈರ್ಮಲ್ಯ ಕೆಲಸಗಳನ್ನು ಮಾಡುವ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯ ಸೌಲಭ್ಯಗಳು ತಲುಪುತ್ತಲೇ ಇಲ್ಲ. ಬದಲಿಗೆ, ಪರಿಶಿಷ್ಟ ಜಾತಿಯಲ್ಲಿರುವ ಕೆಲವೇ ಕೆಲವು ಪ್ರಭಾವಿ ಗುಂಪುಗಳು ತಲೆಮಾರುಗಳಿಂದ ಮೀಸಲಾತಿಯ ಗರಿಷ್ಠ ಪ್ರಯೋಜನ ಪಡೆದು ಆಸ್ತಿಪಾಸ್ತಿ ಮಾಡಿಕೊಂಡಿವೆ” ಎಂದು ಆಕ್ರೋಶ ಹೊರಹಾಕಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ರಾಜಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ದಲಿತರು 17.8% ಮತ್ತು ಬುಡಕಟ್ಟು ಜನರು 13.5% ರಷ್ಟಿದ್ದಾರೆ. ರಾಜ್ಯದಲ್ಲಿರುವ ಒಟ್ಟು 59 ಎಸ್ಸಿ ಜಾತಿಗಳಿದ್ದು, ಆ ಪೈಕಿ ಕೇವಲ 4 ಸಮುದಾಯಗಳು (ಕೋಹ್ಲಿ, ಮೇಘವಾಲ್, ಜಾತವ್ ಹಾಗೂ ಬೈರ್ವಾ) ಬಹುಪಾಲು ಮೀಸಲಾತಿಯನ್ನು ಕಬಳಿಸಿವೆ. ರಾಜ್ಯ ವಿಧಾನಸಭೆಯ ಒಟ್ಟು 200 ಶಾಸಕ ಸ್ಥಾನಗಳ ಪೈಕಿ 34 ಎಸ್ಸಿ ಮತ್ತು 25 ಎಸ್ಟಿ ಕ್ಷೇತ್ರಗಳು ಮೀಸಲಾಗಿವೆ. ಮುಖ್ಯ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ನಿರ್ದಿಷ್ಟ ನಾಲ್ಕು ಜಾತಿಗಳ ಅಭ್ಯರ್ಥಿಗಳಿಗೇ ಹೆಚ್ಚಿನ ಟಿಕೆಟ್ಗಳನ್ನು ನೀಡುತ್ತವೆ ಎಂದು ಸಂಘಟನೆ ಆರೋಪಿಸಿದೆ.
“ಸುಪ್ರೀಂ ಕೋರ್ಟ್ ತನ್ನ 2024ರ ಆಗಸ್ಟ್ನ ಐತಿಹಾಸಿಕ ತೀರ್ಪಿನಲ್ಲಿ (State of Punjab & Others v. Davinder Singh & Others) ರಾಜ್ಯ ಸರ್ಕಾರಗಳಿಗೆ ಎಸ್ಸಿ/ಎಸ್ಟಿ ಒಳಮೀಸಲಾತಿ ಕಲ್ಪಿಸಲು ಸಂವಿಧಾನಾತ್ಮಕ ಅಧಿಕಾರ ನೀಡಿದೆ. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಸರಿಯಾದ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೆ ಮುಂಚೂಣಿ ಆದ್ಯತೆ ನೀಡಲು ವಿಶ್ವಾಸಾರ್ಹ ದತ್ತಾಂಶಗಳ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣ ಮಾಡಬಹುದಾಗಿ ಕೋರ್ಟ್ ಸ್ಪಷ್ಟಪಡಿಸಿದೆ” ಎಂದು ರಾಜಸ್ಥಾನ ಹೈಕೋರ್ಟ್ ವಕೀಲ, ಸಂಘಟನೆಯ ಸದಸ್ಯ ವಿನಯ್ ಮಹಾರ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?
ಇನ್ನೊಂದೆಡೆ, ‘ಭೀಲ್ ವಿಕಾಸ್ ಸಂಸ್ಥಾನ್’ನ ಸಾಮಾಜಿಕ ಕಾರ್ಯಕರ್ತ ಅರವಿಂದ್ ಭೀಲ್ ಮಾತನಾಡಿ, “ಎಸ್ಟಿ ವಿಭಾಗದಲ್ಲಿ ದೊರೆಯುವ ಮೀಸಲಾತಿಯಲ್ಲಿ 90%ಗೂ ಹೆಚ್ಚು ಪಾಲನ್ನು ಕೇವಲ ‘ಮೀನಾ’ ಸಮುದಾಯವೇ ಪಡೆಯುತ್ತಿದೆ. ಭೀಲ್ ಸಮುದಾಯದವರಲ್ಲಿ ಇಂದಿಗೂ ಅಪೌಷ್ಟಿಕತೆ ಹೆಚ್ಚಾಗಿದೆ. ಭೀಲ್ ಸಮುದಾಯದ ಜನರಿರುವ ಗ್ರಾಮಗಳಲ್ಲಿ ಸರಿಯಾದ ವಿದ್ಯುತ್ ಮತ್ತು ಶಿಕ್ಷಣವಿಲ್ಲ. ಪ್ರಜಾಸತ್ತಾತ್ಮಕವಾಗಿ ಅರ್ಹತೆ ಇದ್ದರೂ, ಭೀಲ್ ಸಮುದಾಯದಲ್ಲಿ ಒಬ್ಬನೇ ಒಬ್ಬ ಕಾಂಟ್ರಾಕ್ಟ್ ನೌಕರ ಅಥವಾ ನಾಲ್ಕನೇ ದರ್ಜೆ ನೌಕರನೂ ಇರದ ಅನೇಕ ಹಳ್ಳಿಗಳಿವೆ. ಹಾಗಾಗಿ, ಎಸ್ಟಿ ಒಳಮೀಸಲಾತಿ ತತ್ವ ಜಾರಿಯಾಗಲೇಬೇಕು” ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಒಳಮೀಸಲಾತಿಯ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು ಈ ವರ್ಷದ ಅಂತ್ಯದೊಳಗೆ ಜೈಪುರದಲ್ಲಿ ಬೃಹತ್ ‘ಎಸ್ಸಿ/ಎಸ್ಟಿ ಮಹಾಪಂಚಾಯತ್’ ನಡೆಸಲು ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿವೆ. ಈ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಂಘಟನೆಯ ನಿಯೋಗವು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಆದಾಗ್ಯೂ, ಕೇಂದ್ರ ಸರ್ಕಾರ ಮತ್ತು ವಿವಿಧ ಪಕ್ಷಗಳು ಸುಪ್ರೀಂ ಕೋರ್ಟ್ನ ತೀರ್ಪಿನಡಿ ಒಳಮೀಸಲಾತಿಯನ್ನು ಬೆಂಬಲಿಸಿದ್ದರೂ, ‘ಕ್ರೀಮಿ ಲೇಯರ್’ ನಿಷೇಧಿಸುವುದನ್ನು ವಿರೋಧಿಸಿವೆ. ರಾಜಸ್ಥಾನದ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಎರಡೂ ಈ ವಿಷಯದಲ್ಲಿ ತಮ್ಮ ನಿಖರ ನಿಲುವನ್ನು ಪ್ರಕಟಿಸದೆ ಕಾದುನೋಡುವ ತಂತ್ರ ಅನುಸರಿಸುತ್ತಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ, “ಬಿಜೆಪಿಯು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್ ಮೀಸಲಾತಿಯನ್ನೇ ಕಸಿದುಕೊಳ್ಳಲು ಸಂಚು ರೂಪಿಸುತ್ತಿದೆ” ಎಂದು ಆರೋಪಿಸಿದ್ದಾರೆ.



