ಪ್ರಯಾಣದ ವೇಳೆಯಲ್ಲಿ ತನ್ನ ಮೇಲೆ ಜಾತಿನಿಂದನೆ ಮಾಡಿ, ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕರನ್ನು ಕಾರಿನಿಂದ ಕೆಳಗಿಳಿಸಿದ ದಲಿತ ಕ್ಯಾಬ್ ಚಾಲಕನೊಬ್ಬನ ಡ್ರೈವಿಂಗ್ ಅಕೌಂಟ್ (ಐಡಿ) ಅನ್ನು ಆಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿಯು ಬರೋಬ್ಬರಿ 99 ವರ್ಷ 11 ತಿಂಗಳ ಕಾಲ ಅಮಾನತುಗೊಳಿಸಿರುವ ಘಟನೆ ನಡೆದಿದೆ. ಸದ್ಯ ರಾಪಿಡೋ ಕಂಪನಿಯ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಶೋಷಣೆಯ ವಿರುದ್ಧ ಧ್ವನಿ ಎತ್ತಿದ ದಲಿತ ಚಾಲಕನಿಗೆ ನ್ಯಾಯ ಒದಗಿಸುವ ಬದಲು, ಆತನ ಜೀವನಾಧಾರವಾಗಿದ್ದ ಆ್ಯಪ್ ಖಾತೆಯನ್ನೇ ದೀರ್ಘಾವಧಿಗೆ ಬ್ಲಾಕ್ ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಹಿಳೆಗೆ ಅಪಮಾನ, ಜಾತಿನಿಂದನೆ ಕೇಸ್: ಕೊನೆಗೂ ಪುನೀತ್ ಕೆರೆಹಳ್ಳಿ ಅರೆಸ್ಟ್
ಪ್ರಯಾಣದ ಮಾರ್ಗದ ವಿಚಾರವಾಗಿ ಚಾಲಕ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರ ನಡುವೆ ಸಣ್ಣ ಮಟ್ಟದ ವಾಗ್ವಾದ ಆರಂಭವಾಗಿತ್ತು. ಈ ವೇಳೆ ಕೋಪಗೊಂಡ ಪ್ರಯಾಣಿಕರು ಚಾಲಕನ ಜಾತಿಯನ್ನು ನಿಂದಿಸಿ, ಅತ್ಯಂತ ಕೀಳಾಗಿ ಮಾತನಾಡಿದ್ದಾರೆನ್ನಲಾಗಿದೆ. ಈ ಅಸಭ್ಯ ವರ್ತನೆಯನ್ನು ಸಹಿಸದ ಚಾಲಕ, ಪ್ರಯಾಣಿಕರನ್ನು ಮಧ್ಯದಾರಿಯಲ್ಲೇ ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಈ ಘಟನೆಯ ವಿಡಿಯೋವನ್ನೂ ಮಾಡಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಯಾಣಿಕರು, “ನಾವು ಬುಕ್ ಮಾಡಿದ ಮಾರ್ಗದಲ್ಲಿ ಚಾಲಕ ಕರೆದೊಯ್ಯುತ್ತಿರಲಿಲ್ಲ. ನಿಯಮದಂತೆ ಸಾಗಲು ಹೇಳಿದಾಗ ಚಾಲಕನೇ ನಮ್ಮೊಂದಿಗೆ ಅನಾಗರಿಕವಾಗಿ ವರ್ತಿಸಿದ. ನಿರ್ಜನ ಪ್ರದೇಶದಲ್ಲಿ ನಮ್ಮನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ ಅಪಾಯಕ್ಕೆ ಸಿಲುಕಿಸಿದ. ಆ ಕಾರಣಕ್ಕಾಗಿಯೇ ನಾವು ಕಂಪನಿಗೆ ದೂರು ನೀಡಿದೆವು” ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವು ಬಲಪಂಥೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ನಾವೂ ದಲಿತರು ಎಂದು ಹೇಳಿಕೊಂಡಿದ್ದಾರೆ.
ಆದರೆ, ಚಾಲಕನ ಪ್ರಕಾರ—ಪ್ರಯಾಣಿಕರು ಪೂರ್ಣ ಪ್ರಯಾಣ ಮುಗಿಯುವ ಮುನ್ನವೇ ಆತನ ಸಾಮಾಜಿಕ ಹಿನ್ನೆಲೆಯನ್ನು ಗುರಿಯಾಗಿಸಿಕೊಂಡು ಜಾತಿ ನಿಂದನೆ ಮಾಡಿದ್ದರು. ತನಗಾದ ಮಾನಸಿಕ ಕಿರುಕುಳ ಮತ್ತು ನಿಂದನೆಯನ್ನು ಪ್ರತಿಭಟಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಕ್ಕೆ ಕಂಪನಿಯು ಯಾವುದೇ ತನಿಖೆ ನಡೆಸದೆ, ಚಾಲಕನ ಅಳಲನ್ನು ಆಲಿಸದೆ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕಾರ್ಮಿಕ ಸಂಘಟನೆಗಳಲ್ಲಿ ಈ ಘಟನೆ ತೀವ್ರ ಆಕ್ರೋಶ ಹುಟ್ಟುಹಾಕಿದೆ. “ದಲಿತ ಚಾಲಕ ತನಗಾದ ಜಾತಿನಿಂದನೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದೇ ಆತ ಮಾಡಿದ ತಪ್ಪೇ? ಯಾವುದೇ ವಿಚಾರಣೆ ಇಲ್ಲದೆ 99 ವರ್ಷಗಳ ಕಾಲ ಅಕೌಂಟ್ ಅಮಾನತುಗೊಳಿಸಿರುವುದು ಆತನ ಹೊಟ್ಟೆಯ ಮೇಲೆ ಹೊಡೆದಂತೆ. ಇದು ಶೋಷಿತ ವರ್ಗದವರ ಮೇಲೆ ಆಪ್ ಆಧಾರಿತ ಕಂಪನಿಗಳು ನಡೆಸುತ್ತಿರುವ ಸಾಂಸ್ಥಿಕ ತಾರತಮ್ಯ ಮತ್ತು ಅನ್ಯಾಯ” ಎಂದು ದಲಿತ ಹಕ್ಕುಗಳ ಹೋರಾಟಗಾರರು ಆಪಾದಿಸಿದ್ದಾರೆ.




