ಅಕ್ರಮ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ನಿವೃತ್ತಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದ ಹಿರಿಯ ಪುತ್ರಿ, ಆಕೆಯ ಪ್ರೇಮಿಯ ಸಹಕಾರದಿಂದ ವೃದ್ಧ ತಂದೆಯನ್ನು ಬರ್ಬರ ಹತ್ಯೆಗೈದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ನಡೆದಿದೆ.
ಮೃತರನ್ನುನಿವೃತ್ತ ಶಿಕ್ಷಕ ಸಿದ್ದಪ್ಪ ಬಸಣ್ಣ ಅಂಜುಟಗಿ (62) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ಹಿರಿಯ ಪುತ್ರಿ ಪ್ರಿಯಾಂಕಾ (30), ಆಕೆಯ ಪ್ರೇಮಿ ಭೀಮಾಜಿ ಅಲಿಯಾಸ್ ಸಂತೋಷ್ ಗಣಪತಿ ಸಿಂಧೆ (ವಿಜಯಪುರ) ಹಾಗೂ ಮತ್ತೋರ್ವನ ವಿರುದ್ಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದ ಸಿದ್ದಪ್ಪ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಪುತ್ರಿ ಪ್ರಿಯಾಂಕಾ ಅವರ ಪತಿ ಸುರೇಶ ಮಸಳಿ ಕೋವಿಡ್ ಸಮಯದಲ್ಲಿ ಮೃತಪಟ್ಟಿದ್ದರು. ಬಳಿಕ ಪ್ರಿಯಾಂಕಾ ವಿಜಯಪುರದ ಭೀಮಾಜಿ ಅಲಿಯಾಸ್ ಸಂತೋಷ್ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಈ ವಿಚಾರ ತಿಳಿದ ಸಿದ್ದಪ್ಪ ಅವರು ಮಗಳಿಗೆ ಹಲವು ಬಾರಿ ಬುದ್ಧಿವಾದ ಹೇಳಿ ವಿರೋಧ ವ್ಯಕ್ತಪಡಿಸಿದ್ದರು.
ತಂದೆ ತಮ್ಮ ನಿವೃತ್ತಿ ಹಣವನ್ನು ಬೇರೆಯವರಿಗೆ ನೀಡುತ್ತಿದ್ದಾರೆ. ನಮಗೆ ಅಥವಾ ನನ್ನ ಮಗನಿಗೆ ಯಾವುದೇ ಹಣ ನೀಡುತ್ತಿಲ್ಲ ಎಂದು ಪ್ರಿಯಾಂಕಾ ತಂದೆಯೊಂದಿಗೆ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆಗಸ್ಟ್ 15ರ ರಾತ್ರಿ 11ರಿಂದ ಆಗಸ್ಟ್ 16ರ ಬೆಳಿಗ್ಗೆ 6ರ ನಡುವಿನ ಅವಧಿಯಲ್ಲಿ ಆರೋಪಿಗಳು ಸಿದ್ದಪ್ಪ ಅವರ ತಲೆ ಹಾಗೂ ಎದೆ ಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಬೆಡ್‌ಶೀಟ್ ಮತ್ತು ತಲೆದಿಂಬಿನ ಕವರ್‌ನಲ್ಲಿ ಸುತ್ತಿ ವಾಹನದಲ್ಲಿ ಸಾಗಿಸಿ, ಇಂಡಿ-ಚವಡಿಹಾಳ ರಸ್ತೆಯ ಪೂಜಾರಿ ವಸ್ತಿ ಸಮೀಪದ ಜಮೀನಿನ ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 16ರಂದು ಪರಿಚಯಸ್ಥರೊಬ್ಬರು ನೀಡಿದ ಮಾಹಿತಿಯ ಮೇರೆಗೆ ಮೃತರ ಕಿರಿಯ ಪುತ್ರಿ ನಿಖಿತಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಿಖಿತಾ ನೀಡಿದ ದೂರಿನ ಆಧಾರದ ಮೇಲೆ ಇಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ತನಿಖೆ ಚುರುಕುಗೊಳಿಸಿದ್ದಾರೆ.




