ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ ನಿರೀಕ್ಷೆ

Date:

14 ವರ್ಷಗಳು… 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು… ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-… ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಬರ್ಬರವಾಗಿ ಕೊಂದವರು ಯಾರು? ಹದಿನಾಲ್ಕು ವರ್ಷಗಳಾದರೂ ಈ ಅತ್ಯಂತ ಸರಳವಾದ ಪ್ರಶ್ನೆಗೆ ನಮ್ಮ ತನಿಖಾ ವ್ಯವಸ್ಥೆಯಿಂದ ಉತ್ತರ ಸಿಕ್ಕಿಲ್ಲ. ಆದ್ದರಿಂದಲೇ, ಇದುವರೆಗೆ ನಡೆದ ತನಿಖೆಯ ರೀತಿಯೇ ತನ್ನ ಮನಸ್ಸನ್ನು ಕದಡಿದೆ ಎಂದು ಸುಪ್ರೀಂ ಕೋರ್ಟ್ ಮರುಗಿದೆ. ಹೊಸದಾಗಿ ಮರುತನಿಖೆಗೆ ಆದೇಶಿಸಿದೆ. ಈ ತೀರ್ಪು, ಕೇವಲ ಮರುತನಿಖೆಯ ಆದೇಶವಲ್ಲ; ಕಳೆದ ಹದಿನಾಲ್ಕು ವರ್ಷಗಳ ತನಿಖೆಯ ಮೇಲೆಯೇ ಗಂಭೀರ ಪ್ರಶ್ನೆಯನ್ನು ಎತ್ತಿದೆ.  

- Advertisement -

ಅಂದು 2012ರ ಅಕ್ಟೋಬರ್ 9. ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಕಾಲೇಜು ಮುಗಿಸಿ ಮನೆಗೆ ಹೊರಟಿದ್ದರು. ಮಣ್ಣಸಂಕದ ಬಳಿ ಬಸ್‌ನಿಂದ ಇಳಿದ ಆಕೆ, ನಂತರ ಮನೆ ತಲುಪಲಿಲ್ಲ. ಕುಟುಂಬ ಆತಂಕಗೊಂಡು, ಅದೇ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತು. ಇಡೀ ರಾತ್ರಿ ಹುಡುಕಾಟ ನಡೆಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಮರುದಿನ, ಅಕ್ಟೋಬರ್ 10ರಂದು, ಸ್ನಾನಘಟ್ಟದ ದಾರಿಯಲ್ಲಿದ್ದ ಹಳ್ಳದ ಪೊದೆಯಲ್ಲಿ ಸೌಜನ್ಯಳ ಮೃತದೇಹ ಪತ್ತೆಯಾಯಿತು. ಮರಣೋತ್ತರ ಪರೀಕ್ಷೆಯು ಸೌಜನ್ಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದನು ಸಾರಿ ಹೇಳಿತು. ಸೌಜನ್ಯ ತನ್ನ ಮನೆಗೆ ಹಿಂದಿರುಗುವ ದಾರಿಯಲ್ಲಿ ಅಪರಹಣಗೊಂಡು, ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಳು.

ಇಲ್ಲಿಂದ ಆರಂಭವಾಗಬೇಕಾಗಿದ್ದು ಅತ್ಯಂತ ಸೂಕ್ಷ್ಮ, ವೈಜ್ಞಾನಿಕ ಹಾಗೂ ನಿರ್ದಯವಾಗಿ ಸತ್ಯವನ್ನು ಬೆನ್ನಟ್ಟುವ ತನಿಖೆ. ಆದರೆ, ತನಿಖೆ ಹಾಗೆ ನಡೆಯಲಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ನ ಇಂದಿನ ತೀರ್ಪು ಒತ್ತಿ ಹೇಳಿದೆ. ತನಿಖೆಯ ಬೇರುಗಳು ದುರ್ಬಲವಾಗತೊಡಗಿದ್ದವು ಎಂಬ ಸತ್ಯವನ್ನು ಬಹಿರಂಗಪಡಿಸಿದೆ.

ಆದ್ದರಿಂದಲೇ, ಹಿಂದಿನ ತನಿಖೆಯಲ್ಲಿದ್ದ ಅಧಿಕಾರಿಗಳನ್ನು ಸಂಪೂರ್ಣವಾಗಿ ಹೊರಗಿಟ್ಟು, ಹೊಸ ಅಧಿಕಾರಿಗಳನ್ನು ಒಳಗೊಂಡು ಹೊಸ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಪ್ರಕರಣವನ್ನು ಮೊದಲಿನಿಂದಲೇ ತನಿಖೆ ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಅಷ್ಟೇ ಅಲ್ಲ, ಮೂರು ತಿಂಗಳ ಒಳಗಾಗಿ ತನಿಖೆಯನ್ನು ಮುಗಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ನೀಡಬೇಕೆಂದೂ ಕಟ್ಟುನಿಟ್ಟಿನ ಗಡುವು ನೀಡಿದೆ.

ಹಾಗಾದರೆ ಇಲ್ಲಿ ಪ್ರಶ್ನೆ ಒಂದೇ. ಪೊಲೀಸ್, ಸಿಐಡಿ, ಸಿಬಿಐ—ಮೂರು ತನಿಖಾ ವ್ಯವಸ್ಥೆಗಳು ವರ್ಷಗಟ್ಟಲೆ ಪರಿಶೀಲಿಸಿದ ಪ್ರಕರಣವನ್ನು ಈಗ ಮತ್ತೆ ಶೂನ್ಯದಿಂದ ಆರಂಭಿಸಬೇಕಾದ ಪರಿಸ್ಥಿತಿ ಏಕೆ ಬಂತು? ಮೊದಲ ತನಿಖೆಯಲ್ಲೇ ಮಾಡಬೇಕಿದ್ದ ಕೆಲಸಗಳನ್ನು ಈಗ 14 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಹೇಳಿಕೊಡಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಯಿತು?

ಅತ್ಯಾಚಾರ ಮತ್ತು ಕೊಲೆಯಂತಹ ಪ್ರಕರಣದಲ್ಲಿ ಪ್ರತಿಯೊಂದು ನಿಮಿಷವೂ ಮುಖ್ಯ, ಪ್ರತಿಯೊಂದು ಸಾಕ್ಷ್ಯವೂ ಅಮೂಲ್ಯ. ಆದ್ದರಿಂದಲೇ ಪ್ರಕರಣ ನಡೆದ ಮೊದಲ ಗಂಟೆಗಳನ್ನು ಅಪರಾಧ ಶಾಸ್ತ್ರದಲ್ಲಿ ‘ಗೋಲ್ಡರ್‌ ಹವರ್’ ಎನ್ನುತ್ತಾರೆ. ಆದರೆ, ಸೌಜನ್ಯ ಪ್ರಕರಣದಲ್ಲಿ ‘ಗೋಲ್ಡನ್‌ ಹವರ್‌’ಗೆ ಮನ್ನಣೆಯೇ ಕೊಡಲಾಗಿಲ್ಲ ಎಂಬುದು ಸೌಜನ್ಯ ಕುಟುಂಬಸ್ಥರು ಮತ್ತು ಹೋರಾಟಗಾರರ ಆರೋಪ.

ಈ ಆರೋಪಗಳನ್ನು ಬದಿಗಿಟ್ಟರೂ, ಈಗ ಸುಪ್ರೀಂ ಕೋರ್ಟ್‌ ಗುರುತಿಸಿದ ಸಂಗತಿಗಳನ್ನು ಬದಿಗಿಡಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಘಟನೆ ನಡೆದ ಪ್ರದೇಶಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಸರಿಯಾಗಿ ಸಂಗ್ರಹಿಸಲಾಗಿರಲಿಲ್ಲ. ಮೊಬೈಲ್ ಟವರ್ ಡಂಪ್ ಮಾಹಿತಿ ಇದ್ದರೂ ಅದು ಮುಂದಿನ ತನಿಖಾಧಿಕಾರಿಗೆ ಸರಿಯಾಗಿ ತಲುಪಿರಲಿಲ್ಲ. ಸೌಜನ್ಯ ಬಳಸುತ್ತಿದ್ದ ಛತ್ರಿ, ಚಪ್ಪಲಿ ಹಾಗೂ ಒಳ ಉಡುಪುಗಳಂತಹ ಪ್ರಮುಖ ವಸ್ತುಗಳೂ ಪತ್ತೆಯಾಗಿರಲಿಲ್ಲ. ಅಷ್ಟೇ ಅಲ್ಲ. ಅತ್ಯಾಚಾರ ಪ್ರಕರಣದಲ್ಲಿ ಅತ್ಯಂತ ಮಹತ್ವದ ವೈದ್ಯಕೀಯ ಸಾಕ್ಷ್ಯವಾಗಬಹುದಾಗಿದ್ದ vaginal swab ಅನ್ನು ಸಮರ್ಪಕವಾಗಿ ಸಂರಕ್ಷಿಸಿರಲೇ ಇಲ್ಲ. ಆದ್ದರಿಂದ, ಅದು ಡಿಎನ್‌ಎ ಪರೀಕ್ಷೆಗೆ ಯೋಗ್ಯವಾಗಿರಲಿಲ್ಲ. ಘಟನಾ ಸ್ಥಳ ಮತ್ತು ಮರಣೋತ್ತರ ಪರೀಕ್ಷೆಯ ವಿಡಿಯೋಗ್ರಫಿಯಲ್ಲೂ ಲೋಪಗಳಿದ್ದವು. ಮಳೆ ಬಂದಿದ್ದ ಸಂದರ್ಭದಲ್ಲೂ ಘಟನಾ ಸ್ಥಳದಲ್ಲಿ ಪತ್ತೆಯಾದ ಬ್ಯಾಗ್ ಮತ್ತು ಪುಸ್ತಕಗಳು ಏಕೆ ಒದ್ದೆಯಾಗಿರಲಿಲ್ಲ ಎಂಬ ವಿಚಾರಗಳನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ.

ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡಿದರೆ ಒಂದೊಂದೂ ತನಿಖಾ ತಪ್ಪುಗಳನ್ನು ಬಿಚ್ಚಿಡುತ್ತವೆ. ಅಂದರೆ, ಒಂದೇ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಇಂತಹ ಅನೇಕ ನಿರ್ಣಾಯಕ ಕೊಂಡಿಗಳು ಕೈತಪ್ಪಿದಾಗ, ಅದು ಕೇವಲ ‘ಸಣ್ಣ ಲೋಪ’ ಎಂದು ಹೇಳಿ ಮುಂದೆ ಹೋಗಲು ಸಾಧ್ಯವಿಲ್ಲ. ಕೊಲೆ ತನಿಖೆಯಲ್ಲಿ ಮೊದಲ ದಿನದಲ್ಲೇ ಹಿಡಿಯಬೇಕಾಗಿದ್ದ ಕೊಂಡಿಗಳನ್ನು ತನಿಖೆಗಳು ಕಂಡುಕೊಳ್ಳದ ಕಾರಣ, ವರ್ಷಗಳ ನಂತರವೂ ಆ ಕೃತ್ಯಗೈದ ಕೊಂಡಿಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಅದಕ್ಕಾಗಿಯೇ ಈಗ ಇಡೀ ತನಿಖೆಯ ಗುಣಮಟ್ಟವೇ ನ್ಯಾಯಾಲಯದ ಪರಿಶೀಲನೆಗೆ ಒಳಗಾಗಿದೆ.

ಘಟನೆಯ ಮರುದಿನ, ಧರ್ಮಸ್ಥಳದ ಬೆಟ್ಟದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಸಂತೋಷ್ ರಾವ್ ಎಂಬ ಅಮಾಯಕ ವ್ಯಕ್ತಿಯನ್ನು ಹಿಡಿದು ಧರ್ಮಸ್ಥಳದ ದೊಡ್ಡ ಮನೆಯ ಒಡನಾಟ ಹೊಂದಿದ್ದವರು ಪೊಲೀಸರಿಗೆ ಒಪ್ಪಿಸಿದರು. ಆತನನ್ನೇ ಪೊಲೀಸರು ಬಂಧಿಸಿದರು. ಆರಂಭಿಕ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ನಡೆಸಿದರು. ಆದರೆ ಕುಟುಂಬ ಮತ್ತು ಸಾರ್ವಜನಿಕರಿಂದ ತನಿಖೆಯ ಬಗ್ಗೆ ಅನುಮಾನ, ಆಕ್ಷೇಪಗಳು ಹೆಚ್ಚಾಗುತ್ತಿದ್ದಂತೆ 2012ರ ಡಿಸೆಂಬರ್‌ನಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು. ಸಿಐಡಿ ಕೂಡ ಸಂತೋಷ್ ರಾವ್ ವಿರುದ್ಧ ಮಾತ್ರವೇ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿತು.

ಆದರೆ, ಸೌಜನ್ಯ ಕುಟುಂಬದ ಪ್ರಶ್ನೆಗಳು ಮತ್ತು ಆರೋಪಗಳು ಸ್ಪಷ್ಟವಾಗಿದ್ದವು. ಸಂತೋಷ್ ರಾವ್ ನಿಜವಾದ ಅಪರಾಧಿಯೇ? ಈ ಪ್ರಕರಣದಲ್ಲಿ ದೊಡ್ಡ ಕುಳಗಳ ಕೈವಾಡವಿದೆ ಎಂಬ ಅನುಮಾನವಿದೆ. ಸಮಗ್ರವಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯಬೇಕು ಎಂದು ನಿರಂತರವವಾಗಿ ಸೌಜನ್ಯ ಕುಟುಂಬ ಆಗ್ರಹಿಸಿತ್ತು.

ಪ್ರತಿಭಟನೆ ಮತ್ತು ಸಾರ್ವಜನಿಕ ಒತ್ತಡ ಹೆಚ್ಚಿದ ಬಳಿಕ 2013ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತು. ದೇಶದ ಪ್ರಮುಖ ತನಿಖಾ ಸಂಸ್ಥೆ ಬಂದಿರುವುದರಿಂದ ಈಗಲಾದರೂ ಎಲ್ಲ ಅನುಮಾನಗಳಿಗೆ ಉತ್ತರ ಸಿಗಬಹುದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಬಹುದು ಎಂಬ ನಿರೀಕ್ಷೆ ಕುಟುಂಬಸ್ಥರು ಮತ್ತು ಸಾರ್ವಜನಿಕರಲ್ಲಿತ್ತು.

ಆದರೆ, ಸಿಬಿಐ ತನಿಖೆಯಲ್ಲಿಯೂ ಆರೋಪಿ ಸ್ಥಾನದಲ್ಲಿ ಇದ್ದವರು ಸಂತೋಷ್ ರಾವ್ ಅವರೇ. ಇಡೀ ತನಿಖೆ ಸುತ್ತುವರೆದಿದ್ದರೂ, ಸಂತೋಷ್‌ ರಾವ್‌ ವಿರುದ್ಧವೇ. ಸಿಬಿಐ ತನಿಖೆಯೊಂದಿಗೆ ಪ್ರಕರಣ ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಡೆಯಿತು. ಸಿಬಿಐ ತನಿಖೆಯೂ ಕೇವಲ ಸಂತೋಷ್‌ ರಾವ್ ಸುತ್ತಲೇ ಸುತ್ತುರಿಸುವುದನ್ನು ಗಮನಿಸಿದ ಸೌಜನ್ಯ ಕುಟುಂಬ, ಪ್ರಕರಣದಲ್ಲಿ ಬೇರೆ ವ್ಯಕ್ತಿಗಳ ಪಾತ್ರವನ್ನೂ ಪರಿಶೀಲಿಸಬೇಕು ಎಂದು ಹಲವು ಕಾನೂನು ಹೋರಾಟಗಳನ್ನು ನಡೆಸಿತು. ಆದರೆ, ತನಿಖೆ ಸಂತೋಷ್‌ ರಾವ್‌ ವಿರುದ್ಧ ಬಿಟ್ಟು ಅತ್ತಿತ್ತ ಕದಲಲೇ ಇಲ್ಲ.

ಕೊನೆಗೆ, 2023ರ ಜೂನ್ 16ರಂದು ಪ್ರಕರಣದಲ್ಲಿ ಅತ್ಯಂತ ಮಹತ್ವದ ತಿರುವು ಬಂತು. ವಿಶೇಷ ಸೆಷನ್ಸ್ ಕೋರ್ಟ್ ಸಂತೋಷ್ ರಾವ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತು. ಅವರನ್ನು ಅಪರಾಧಿ ಎಂದು ಸಾಬೀತು ಮಾಡುವ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ, ತನಿಖೆಯಲ್ಲಿ ಒದಗಿಸಲಾಗಿರುವ ಸಾಕ್ಷ್ಯಗಳು ಅಪೂರ್ಣವಾಗಿವೆ. ತನಿಖೆಯಲ್ಲಿ ಗಂಭೀರ ಲೋಪಗಳಿವೆ ಎಂದು ನ್ಯಾಯಾಲಯ ಹೇಳಿತು. ಅಂದರೆ, ಇಷ್ಟು ವರ್ಷಗಳ ತನಿಖೆ ಮತ್ತು ವಿಚಾರಣೆಗಳು ಬಂಧಿಸಲ್ಪಟ್ಟ ವ್ಯಕ್ತಿಯೇ ಅಪರಾಧಿ ಎಂದು ಸಾಬೀತುಪಡಿಸುವಲ್ಲಿಯೂ ವಿಫಲವಾದವು. ನೈಜ ಅಪರಾಧಿಯನ್ನು ಗುರುತಿಸುವಲ್ಲಿಯೂ ಸೋತಿದ್ದವು.

ಆ ನಂತರ, ಸೌಜನ್ಯ ಪ್ರಕರಣದ ಹೋರಾಟ ಮತ್ತಷ್ಟು ತೀವ್ರಗೊಂಡಿತು. ‘ಹೌದು…. ಸೌಜನ್ಯಳನ್ನು ಕೊಂದಿದ್ದ ಸಂತೋಷ್ ರಾವ್ ಅಲ್ಲ. ಹಾಗಿದ್ದರೆ, ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಂದವರು ಯಾರು? ಒಬ್ಬ ನಿರಪರಾಧಿಯನ್ನು ಆರೋಪಿಯೆಂದು ಬಿಂಬಿಸಿ ತನಿಖೆ ಹಳ್ಳಹಿಡಿದಿದೆ. ಹಾಗಿದ್ದರೆ ನಿಜವಾದ ಅಪರಾಧಿಗಳನ್ನು ಹುಡುಕುವತ್ತೆ ತನಿಖೆ ಏಕೆ ಸಾಗಲಿಲ್ಲ’ ಎಂಬ ಪ್ರಶ್ನೆ ರಾಜ್ಯಾದ್ಯಂತ ಸ್ಪೋಟಿಸಿತು. ಆದರೆ, ಈ ಪ್ರಶ್ನೆಗಳಿಗೆ ತನಿಖಾ ಸಂಸ್ಥಗಳು ಮತ್ತು ಸರ್ಕಾರದ ಬಳಿ ಉತ್ತವೇ ಇಲ್ಲ. ಆದರೆ, ಹೋರಾಟಗಾರರ ಬಳಿ ಉತ್ತರವಿದೆ. ಸೌಜನ್ಯ ಕುಟುಂಬವೂ ಸೇರಿ ಸಾರ್ವಜನಿಕರು ಮತ್ತು ಹೋರಾಟಗಾರರು ಕೆಲವು ಹೆಸರುಗಳನ್ನು ಹೇಳುತ್ತಲೇ ಇದ್ದಾರೆ. ಆದರೆ, ಅವರನ್ನು ತನಿಖಗೆ ಒಳಪಡಿಸುವ ಧೈರ್ಯವನ್ನು ತನಿಖಾ ಸಂಸ್ಥೆಗಳು ಮಾಡಲಿಲ್ಲ.

ಇದೆಲ್ಲದರ ನಡುವೆ, ಸಿಬಿಐ – ಸಂತೋಷ್ ರಾವ್ ಅವರ ಖುಲಾಸೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಆದರೆ, 2024ರ ಆಗಸ್ಟ್ 30ರಂದು ಹೈಕೋರ್ಟ್ ಕೂಡ ಅವರ ಖುಲಾಸೆಯನ್ನು ಎತ್ತಿಹಿಡಿಯಿತು. ಇದೇ ವೇಳೆ, ಸಂತೋಷ್ ರಾವ್ ಅಪರಾಧ ಮಾಡಿಲ್ಲದಿದ್ದರೆ ಮತ್ತೊಬ್ಬ ವ್ಯಕ್ತಿ ಅಪರಾಧ ಮಾಡಿರಲೇಬೇಕು ಮತ್ತು ಪ್ರಕರಣ ಮರುತನಿಖೆಯನ್ನು ಬೇಡುತ್ತದೆ ಎಂಬ ಅರ್ಥದ ಗಂಭೀರ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿತು. ಆದರೆ, ಘಟನೆ ನಡೆದು ಬಹಳ ಕಾಲ ಕಳೆದಿರುವುದರಿಂದ ಮರುತನಿಖೆಯಿಂದ ಪ್ರಯೋಜನವಾಗುವ ಸಾಧ್ಯತೆ ಕಡಿಮೆ ಎಂದು ಮರುತನಿಖೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿತು.

ಬಳಿಕ, ಮರುತನಿಖೆಯ ಅರ್ಜಿ ಸುಪ್ರೀಂ ಕೋರ್ಟ್‌ನ ಕದ ಬಿಡಿಯಿತು. ಅದೃಷ್ಟವಶಾತ್, ಹೈಕೋರ್ಟ್‌ನ ನಿಲುವನ್ನು ಸುಪ್ರೀಂ ಕೋರ್ಟ್‌ ಒಪ್ಪಲಿಲ್ಲ. ‘ಕಾಲ ಕಳೆದಿದೆ ಎಂದ ಮಾತ್ರಕ್ಕೆ ಸತ್ಯ ಹುಡುಕುವುದನ್ನು ನಿಲ್ಲಿಸಲಾಗುವುದಿಲ್ಲ’ ಎಂಬ ಸಂದೇಶ ರವಾನಿಸಿದ ಸುಪ್ರೀಂ ಕೋರ್ಟ್, ಎಲ್ಲ ಸಾಕ್ಷ್ಯಗಳೂ ನಾಶವಾಗಿವೆ, ಈಗ ಹೊಸ ತನಿಖೆಯಿಂದ ಏನೂ ಸಿಗುವುದಿಲ್ಲ ಎಂಬ ವಾದವನ್ನು ತಿರಸ್ಕಿಸಿದೆ. ಮರು ತನಿಖೆಗೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ವೈಜ್ಞಾನಿಕ ಸಾಕ್ಷ್ಯಗಳು ತನಿಖೆಗೆ ಅವಕಾಶ ನೀಡುತ್ತವೆ. ಪ್ರಮುಖ ಸಾಕ್ಷ್ಯಗಳಲ್ಲಿ ಒಂದಾಗಿರುವ ಸೌಜನ್ಯಳ ಚೂಡಿದಾರ್‌ನಲ್ಲಿ ಸಂತೋಷ್ ರಾವ್ ಅವರ ಕೂದಲಿನ ಜೊತೆಗೆ ಮತ್ತೊಬ್ಬ ಪುರುಷನ ಕೂದಲು ಕೂಡ ಪತ್ತೆಯಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಡಿಎನ್‌ಎ ತಜ್ಞರ ಹೇಳಿಕೆಯ ಪ್ರಕಾರ, ಸಂಶಯಿತ ವ್ಯಕ್ತಿಗಳು ಪತ್ತೆಯಾದರೆ ಅವರ ರಕ್ತದ ಮಾದರಿಗಳನ್ನು ಪಡೆದು ಆ ಕೂದಲಿನ ಡಿಎನ್‌ಎ ಜೊತೆ ಈಗಲೂ ಹೋಲಿಕೆ ನಡೆಸಲು ಸಾಧ್ಯವಿದೆ.

ಜೊತೆಗೆ, ಇನ್ನೊಂದು ಸಂಗತಿ ಸುಪ್ರೀಂ ಕೋರ್ಟ್‌ನ ಗಮನ ಸೆಳೆದಿದೆ. 2026ರ ಏಪ್ರಿಲ್ 29ರಂದು ಪ್ರಕರಣಕ್ಕೆ ಸಂಬಂಧಿಸಿದ ಎಂಟು ಸಂಭಾವ್ಯ ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ರಾಜ್ಯ ಸರ್ಕಾರ ಕೇವಲ ಮೂರು ವಾರಗಳಲ್ಲೇ ಆ ಎಂಟು ಜನರನ್ನೂ ಪತ್ತೆಹಚ್ಚಿ ರಕ್ಷಣೆ ನೀಡಿತು. ಈ ಬೆನ್ನಲ್ಲೇ, ‘ಈಗ ಮೂರು ವಾರಗಳಲ್ಲಿ ಪತ್ತೆಯಾಗುವವರು, ಹಿಂದಿನ ಮೂರು ತನಿಖಾ ಸಂಸ್ಥೆಗಳಿಗೆ ಇಷ್ಟು ವರ್ಷ ಏಕೆ ಸಿಗಲಿಲ್ಲ’ ಎಂಬ ಪ್ರಶ್ನೆಯನ್ನೂ ಮುನ್ನೆಲೆಗೆ ತಂದಿದೆ.

ಈ ಪ್ರಶ್ನೆಯನ್ನು ಸುಲಭವಾಗಿ ಬದಿಗಿಡಲು ಸಾಧ್ಯವಿಲ್ಲ. ಬೆಳ್ತಂಗಡಿ ಪೊಲೀಸ್, ಸಿಐಡಿ ಮತ್ತು ಸಿಬಿಐ—ಮೂರು ಹಂತದ ತನಿಖೆಯ ನಂತರವೂ ಕೆಲವು ಸುಳಿವುಗಳು ಸಂಪೂರ್ಣವಾಗಿ ತನಿಖೆಯಾಗದೇ ಉಳಿದಿದ್ದರೆ, ತನಿಖೆಯ ಗಂಭೀರತೆ ಯಾವ ರೀತಿಯಲ್ಲಿತ್ತು ಎಂಬುದನ್ನೂ ನಾವು ನೋಡಬೇಕು.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಕೊನೆಯ ಭಾಗದಲ್ಲಿ ಬಳಸಿರುವ ಭಾಷೆ ಗಮನಿಸಿ; “17 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣವನ್ನು ತನಿಖೆ ಮಾಡಿದ ರೀತಿ, ವಿವಿಧ ತನಿಖಾ ಸಂಸ್ಥೆಗಳು ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದ ವಿಧಾನವು ನ್ಯಾಯಾಲಯದ ಮನಸ್ಸನ್ನೇ ತೀವ್ರವಾಗಿ ಕದಡಿದೆ” ಎಂದು ಮರುಗಿದೆ.

ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಇನ್ನೂ ಗಂಭೀರವಾಗಿ, “ವಿಚಾರಣೆಗೆ ಒಳಗಾದ ವ್ಯಕ್ತಿ ಅಪರಾಧ ಮಾಡಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಹೀಗಿರುವ ಪರಿಸ್ಥಿತಿಯಲ್ಲಿ, ನಿಜವಾದ ಅಪರಾಧಿಗಳು ತನಿಖೆಯ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ” ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಇನ್ನೊಮ್ಮೆ ಕೇಳಿ; “ವಿಚಾರಣೆಗೆ ಒಳಗಾದ ವ್ಯಕ್ತಿ ಅಪರಾಧ ಮಾಡಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಹೀಗಿರುವ ಪರಿಸ್ಥಿತಿಯಲ್ಲಿ, ನಿಜವಾದ ಅಪರಾಧಿಗಳು ತನಿಖೆಯ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಂದರೆ, ತನಿಖೆಯ ದಿಕ್ಕೇ ಪ್ರಭಾವಿತವಾಗಿರಬಹುದೆಂಬ ಸಾಧ್ಯತೆಯನ್ನು ದೇಶದ ಸರ್ವೋಚ್ಛ ನ್ಯಾಯಾಲಯ ಉಲ್ಲೇಖಿಸುವ ಮಟ್ಟಕ್ಕೆ ಪ್ರಕರಣ ತಲುಪಿದೆ.

ಆದ್ದರಿಂದಲೇ,  ಕರ್ನಾಟಕ ಹೈಕೋರ್ಟ್‌ನ 2024ರ ಆಗಸ್ಟ್ 30ರ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಪ್ರಕರಣವನ್ನು ಸಂಪೂರ್ಣ ಹೊಸದಾಗಿ, ಅಂದರೆ de novo ತನಿಖೆ ನಡೆಸಬೇಕು ಎಂದು ಹೇಳಿದೆ. ಅದಕ್ಕಾಗಿ, ಹೊಸ ಅಧಿಕಾರಿಗಳನ್ನು ಒಳಗೊಂಡು ಎಸ್‌ಐಟಿಯನ್ನು ಕರ್ನಾಟಕ ಸರ್ಕಾರ ರಚಿಸಬೇಕು. ಈ ಎಸ್‌ಐಟಿಯಲ್ಲಿ ಈ ಹಿಂದೆ, ಈ ಪ್ರಕರಣದ ತನಿಖೆ ನಡೆಸಿದ್ದ ಯಾವೊಬ್ಬ ಅಧಿಕಾರಿಯೂ ಇರಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದೆ.

ಜೊತೆಗೆ, ಹೊಸ ತನಿಖೆ ನಡೆಸುವ ಎಸ್‌ಐಟಿಗೆಹಿರಿಯ ರಾಜ್ಯ ಪೊಲೀಸ್ ಅಧಿಕಾರಿ ನೇತೃತ್ವ ವಹಿಸಬೇಕು. ಆಧುನಿಕ ತನಿಖಾ ತಂತ್ರಜ್ಞಾನ ಮತ್ತು ವೈಜ್ಞಾನಿಕ ತನಿಖೆಯಲ್ಲಿ ಪರಿಣತಿ ಹೊಂದಿರುವ ಸಮರ್ಥ ಅಧಿಕಾರಿಗಳನ್ನು ಸೇರಿಸಬೇಕು ಎಂದು ಹೇಳಿದೆ.

ಅಂದರೆ ,ನ್ಯಾಯಾಲಯಕ್ಕೆ ಬೇಕಾಗಿರುವುದು ಹಳೆಯ ತನಿಖೆಯ ಮುಂದುವರಿಕೆ ಅಲ್ಲ. ಸಂಪೂರ್ಣ ಹೊಸ ಕಣ್ಣು. ಹೊಸ ತಂಡ. ಹೊಸ ದೃಷ್ಟಿಕೋನ.

ಇದೇ ಹೊತ್ತಿನಲ್ಲಿ; ನಿರಪರಾಧಿ ಸಂತೋಷ್ ರಾವ್‌ಗೆ ಸುಪ್ರೀಂ ಕೋರ್ಟ್‌ ರಕ್ಷಣೆಯನ್ನೂ ನೀಡಿದೆ. “ಸಂತೋಷ್‌ ರಾವ್ ಈಗಾಗಲೇ ವಿಚಾರಣೆಗೆ ಒಳಗಾಗಿ ಖುಲಾಸೆಯಾಗಿರುವುದರಿಂದ, ಅವರಿಗೆ ಸಂವಿಧಾನದ ಅನುಚ್ಛೇದ 20(2) ಮತ್ತು CrPC ಸೆಕ್ಷನ್ 300ರ ರಕ್ಷಣೆ ನೀಡಲಾಗುತ್ತದೆ. ಇದೇ ಪ್ರಕರಣದಲ್ಲಿ ಅವರನ್ನು ಮತ್ತೆ ತನಿಖೆ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ” ಎಂದು ಘೋಷಿಸಿದೆ.

ಆದಾಗ್ಯೂ, “ಸೌಜನ್ಯ ಕುಟುಂಬ ಅನುಮಾನಿಸಿರುವ ‘ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಅಥವಾ ಮತ್ತಾವುದೇ ವ್ಯಕ್ತಿಯ ಪಾತ್ರದ ಬಗ್ಗೆ ತಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಯಾರನ್ನೂ ಮೊದಲೇ ಅಪರಾಧಿ ಎಂದು ಕಾಣಲಾಗದು. ಎಸ್ಐಟಿ ಸಾಕ್ಷ್ಯ ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗಬೇಕು. ಯಾರ ಹೆಸರೇ ಬಂದರೂ ಸಾಕ್ಷ್ಯವೇ ಅಂತಿಮವಾಗಬೇಕು. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು” ಎಂದು ಸುಪ್ರೀಂ ಕೋರ್ಟ್ ಗಡುವು ನೀಡಿದೆ.

ಸೌಜನ್ಯ ಪ್ರಕರಣದ ಅತಿ ದೊಡ್ಡ ದುರಂತ ಆಕೆಯ ಸಾವು ಮಾತ್ರವಲ್ಲ, ಆಕೆಯ ಸಾವಿನ ನಂತರವೂ ಆಕೆಯ ಕುಟುಂಬ 14 ವರ್ಷಗಳಿಂದ ನ್ಯಾಯಕ್ಕಾಗಿ ಎದುರು ನೋಡುತ್ತಿದ್ದರೂ, ನ್ಯಾಯ ದೊರೆಯದೇ ಇರುವುದು.

ಪೊಲೀಸ್ ತನಿಖೆ ನಡೆಯಿತು, ಸಿಐಡಿ ಬಂತು, ನಂತರ ಸಿಬಿಐ ಬಂತು, ನ್ಯಾಯಾಲಯದಲ್ಲಿ ದೀರ್ಘ ವಿಚಾರಣೆ ನಡೆಯಿತು; ಆದರೂ ಇರುವ ಒಂದೇ ಪ್ರಶ್ನೆ; ಸೌಜನ್ಯಳನ್ನು ಕೊಂದವರು ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಈಗ ಸುಪ್ರೀಂ ಕೋರ್ಟ್ ಹೊಸ ಬಾಗಿಲು ತೆರೆದಿದೆ. ಈ ಬಾರಿ ತನಿಖೆ ಕೇವಲ ಕಡತ ಮುಚ್ಚಲು ನಡೆಯಬಾರದು. ಹಿಂದಿನ ತನಿಖೆಯ ದಾಖಲೆಗಳನ್ನು ನಕಲಿಸಬಾರದು. ಬದಲಾಗಿ, ಹಿಂದಿನ ತನಿಖೆಗಳು ಗಮನಿಸದ, ಪರಿಶೀಲಿಸಿದ ಸಂಗತಿ, ಸಾಕ್ಷ್ಯಗಳನ್ನು ಪರಿಶೀಲಿಸಬೇಕು. ವೈಜ್ಞಾನಿಕವಾಗಿ ಪರೀಕ್ಷಿಸಲು ಸಾಧ್ಯವಿರುವ ಪ್ರತಿಯೊಂದು ಕೊಂಡಿಯನ್ನೂ ಪರೀಕ್ಷಿಸಬೇಕು. ಹಿಂದಿನ ಲೋಪಗಳನ್ನು ಮರೆಮಾಚದೆ ಪರಿಶೀಲಿಸಬೇಕು. ಯಾರ ಒತ್ತಡಕ್ಕೂ, ಯಾರ ಪ್ರಭಾವಕ್ಕೂ ಜಗ್ಗದೆ ಸತ್ಯದವರೆಗೆ ಹೋಗಬೇಕು.

ಏಕೆಂದರೆ ಹದಿನಾಲ್ಕು ವರ್ಷಗಳ ವಿಳಂಬದ ನಂತರ ಸೌಜನ್ಯ ಕುಟುಂಬ ಕೇಳುತ್ತಿರುವುದು ಒಂದೇ; “ನಮ್ಮ ಮಗಳಿಗೆ ನ್ಯಾಯ ಕೊಡಿ. ನಿಜವಾದ ಅಪರಾಧಿಗಳು ಯಾರು ಎಂಬುದನ್ನು ದೇಶದ ಮುಂದೆ ತಂದು ನಿಲ್ಲಿಸಿ”. ಹೊಸ ಎಸ್‌ಐಟಿ ಈ ಕೆಲಸ ಮಾಡುವಂತಾಗಲಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಗೆ ಸೋನಿಯಾ ಹೆಸರು: ಮ್ಯಾಜಿಸ್ಟ್ರೇಟ್ ಆದೇಶ ರದ್ದು

ಭಾರತೀಯ ಪೌರತ್ವ ಪಡೆಯುವ ಮುನ್ನವೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ...

E-KYC: ಎಲ್ಲವೂ ‘ಆನ್‌ಲೈನ್‌’… ಆದರೆ, ಜನರ ಸಂಕಷ್ಟ ಮಾತ್ರ ‘ಆಫ್‌ಲೈನ್‌’!

ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಸಾಲು, ಸರ್ವರ್‌ ಸಮಸ್ಯೆಗೆ ಕಾಯುವಿಕೆ; ವ್ಯವಸ್ಥೆ ಬದಲಾದರೂ...

UAPA ಇರಲಿ, ಯಾವುದೇ ಕೇಸಿರಲಿ ಲಿಖಿತ ಕಾರಣವಿಲ್ಲದ ಬಂಧನ ಅಕ್ರಮ: ಸುಪ್ರೀಂ ಕೋರ್ಟ್

ಭಯೋತ್ಪಾದನೆ ತಡೆ ಕಾಯ್ದೆ (UAPA) ಸೇರಿದಂತೆ ಯಾವುದೇ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದರೂ,...

ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ: ಸಿಸಿಟಿವಿಯಲ್ಲಿ 105 ಕೃತ್ಯ ಸೆರೆ

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಹಣ ದುರ್ಬಳಕೆ ಹಾಗೂ ಕಳ್ಳತನ ನಡೆದಿದೆ ಎನ್ನಲಾದ...