ಭಾರತೀಯ ಬಾಸ್ಕೆಟ್‌ಬಾಲ್ ಆಟಗಾರ ಕುಶಾಲ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ ಹಾಗೂ ಅಪ್ರಾಪ್ತೆಯರ ವಿರುದ್ಧ ಅನುಚಿತ ವರ್ತನೆ ನಡೆಸಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸುವಂತೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಶುಕ್ರವಾರ ಈ ಆದೇಶ ನೀಡಿದ್ದು, ಸಿಂಗಾಪುರ ಮೂಲದ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ತಿವಾರಿ ವಿರುದ್ಧ ಕುಶಾಲ್ ಸಿಂಗ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ಈ ನಿರ್ದೇಶನ ಹೊರಡಿಸಿದ್ದಾರೆ.
ಮುಸ್ಕಾನ್ ತಿವಾರಿ ತಮ್ಮ ಇನ್‌ಸ್ಟಾಗ್ರಾಂ ಖಾತೆ ಹಾಗೂ ತಮ್ಮ ನಿಯಂತ್ರಣದಲ್ಲಿರುವ ಇತರೆ ಖಾತೆಗಳಲ್ಲಿ ಪ್ರಕಟಿಸಿರುವ ಪೋಸ್ಟ್‌ಗಳು, ರೀಲ್ಸ್, ಸ್ಟೋರಿ ಹೈಲೈಟ್ಸ್, ಕ್ಯಾಪ್ಷನ್‌ಗಳು, ಕಾಮೆಂಟ್‌ಗಳು ಸೇರಿದಂತೆ ಕುಶಾಲ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಅಥವಾ ಲೈಂಗಿಕ ದುರ್ವರ್ತನೆ ಆರೋಪಗಳನ್ನು ಮಾಡುವ ಎಲ್ಲ ವಿಷಯಗಳನ್ನು ಕೂಡಲೇ ತೆಗೆದುಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಆದೇಶವನ್ನು ಪಾಲಿಸದಿದ್ದರೆ, ಸಂಬಂಧಿತ ಸಾಮಾಜಿಕ ಜಾಲತಾಣ ಸಂಸ್ಥೆಯನ್ನು ಕುಶಾಲ್ ಸಿಂಗ್ ಸಂಪರ್ಕಿಸಬಹುದಾಗಿದ್ದು, ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ಜವಾಬ್ದಾರಿ ಆ ಸಂಸ್ಥೆಯದ್ದಾಗಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕುಶಾಲ್ ಸಿಂಗ್ ಪರ ವಕೀಲರು, ಮುಸ್ಕಾನ್ ತಿವಾರಿ ಜುಲೈ 2026ರಿಂದ ನಿರಂತರವಾಗಿ ಹೊಸ ರೀಲ್ಸ್, ಪೋಸ್ಟ್‌ಗಳು ಹಾಗೂ ಸ್ಟೋರಿಗಳನ್ನು ಪ್ರಕಟಿಸುವ ಮೂಲಕ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಲ್ಲದೆ, ಆ ಪೋಸ್ಟ್‌ಗಳಲ್ಲಿ ಮಾಡಲಾಗಿರುವ ಲೈಂಗಿಕ ದುರ್ವರ್ತನೆ ಸಂಬಂಧಿತ ಆರೋಪಗಳು ಸುಳ್ಳಾಗಿದ್ದು, ಅವು ಸಾವಿರಾರು ಜನರನ್ನು ತಲುಪಿವೆ. ತಮ್ಮ ಅನುಯಾಯಿಗಳಿಗೆ ವಿವಿಧ ಬಾಸ್ಕೆಟ್‌ಬಾಲ್ ಸಂಸ್ಥೆಗಳನ್ನು ಟ್ಯಾಗ್ ಮಾಡುವಂತೆ ಕರೆ ನೀಡುವ ಮೂಲಕ ಆರೋಪಗಳನ್ನು ವ್ಯಾಪಕವಾಗಿ ಹರಡುವ ಪ್ರಯತ್ನವೂ ನಡೆದಿದೆ ಎಂದು ಕುಶಾಲ್ ಸಿಂಗ್ ಆರೋಪಿಸಿದ್ದಾರೆ.
ಕುಶಾಲ್ ಸಿಂಗ್ ಭಾರತೀಯ ಹಿರಿಯ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ತಂಡದ ಆಟಗಾರರಾಗಿದ್ದು, 2022ರ ಫಿಬಾ ಅಂಡರ್-16 ಏಷ್ಯನ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ: 10 ಕೋಟಿ ಕೊಡುವುದಾಗಿ ನಂಬಿಸಿ 2.5 ಕೋಟಿ ದೋಚಿದ ಸ್ವಯಂಘೋಷಿತ ದೇವಮಾನವ
ಮುಸ್ಕಾನ್ ತಿವಾರಿ ಈ ಆರೋಪಗಳನ್ನು ಒಳಗೊಂಡ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಮೂಲಕ ತಮ್ಮ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಕುಶಾಲ್ ಸಿಂಗ್ ಮಾನನಷ್ಟ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಕಾನ್ ತಿವಾರಿ ಸೇರಿದಂತೆ ಪ್ರತಿವಾದಿಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಸಮನ್ಸ್ ಸ್ವೀಕರಿಸಿದ 30 ದಿನಗಳೊಳಗೆ ಲಿಖಿತ ಉತ್ತರ ಸಲ್ಲಿಸುವಂತೆ ಸೂಚಿಸಿದೆ.
ಪ್ರಕರಣದ ಮುಂದಿನ ಪ್ರಕ್ರಿಯೆಗಾಗಿ ಸೆಪ್ಟೆಂಬರ್ 17ರಂದು ಜಂಟಿ ನೋಂದಣಾಧಿಕಾರಿ (Joint Registrar) ಮುಂದೆ ವಿಚಾರಣೆ ನಡೆಯಲಿದ್ದು, ಮುಖ್ಯ ವಿಚಾರಣೆಯನ್ನು 2027ರ ಜನವರಿ 13ಕ್ಕೆ ಮುಂದೂಡಲಾಗಿದೆ.




