ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪಕ್ಷಗಳು, ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ಕೈಗೊಂಡಿರುವ ಕಠಿಣ ಕ್ರಮಗಳನ್ನು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ತೀವ್ರವಾಗಿ ಖಂಡಿಸಿದ್ದಾರೆ. ದೆಹಲಿ ಪ್ರಸ್ತುತ ‘ಡಿಟೆನ್ಷನ್ ಸ್ಟೇಟ್’ (ಬಂಧನ ರಾಜ್ಯ) ಆಗಿ ಪರಿವರ್ತನೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, “ರಾಜಧಾನಿಯಲ್ಲಿ ‘ಪೊಲೀಸ್ ರಾಜ್’ ಸ್ಥಾಪನೆಯಾಗಿದ್ದು, ದೇಶದಲ್ಲಿ ತುರ್ತುಪರಿಸ್ಥಿತಿ (ಎಮರ್ಜೆನ್ಸಿ) ಜಾರಿಯಲ್ಲಿದೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇರುವ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರೆ, ಅವರ ಧ್ವನಿಯನ್ನು ಅಡಗಿಸಲು ಗಡಿಗಳನ್ನು ಸೀಲ್ ಮಾಡಿ, ರೈಲುಗಳನ್ನು ತಡೆದು ಪ್ರತಿಭಟನಾಕಾರರನ್ನು ಸಾಲಾಗಿ ವಶಕ್ಕೆ ಪಡೆಯಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ಹಲ್ಲೆ ಮಾಡಿದ ಹಿಂದೂ ರಕ್ಷಾ ದಳದ ನಾಲ್ವರ ಬಂಧನ
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದ ನಾಯಕರನ್ನು ಹಾಗೂ ಯುವಕರನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಗಡಿ ಪ್ರದೇಶಗಳಲ್ಲೇ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಪ್ರತಿಭಟನೆಯನ್ನು ಹತೋಟಿಯಲ್ಲಿಡಲು ಬೃಹತ್ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಹಕ್ಕನ್ನು ಹಸಿಹಸಿಯಾಗಿ ಕಸಿಯಲಾಗುತ್ತಿದೆ ಎಂದು ರಾವತ್ ದೂರಿದರು.
ಇದರೊಂದಿಗೆ, ಮಹಾರಾಷ್ಟ್ರದಲ್ಲೂ ಪ್ರತಿಭಟನಾಕಾರರ ವಿರುದ್ಧ ಮುಂಬೈ ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಖಂಡಿಸಿದ ಅವರು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಜನತೆಯಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಇನ್ನು ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಗೂ ಮುನ್ನವೇ ಹಲವು ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ, ವಿಮಾನದಲ್ಲೇ ಹಲವು ನಾಯಕರ ಬಂಧನ ಮಾಡಲಾಗಿದೆ. ಇಂದು ಬಿಡುಗಡೆ ಮಾಡಲಾಗಿದೆ.
ಬಂಧನಕ್ಕೆ ಹೆದರದ ಯುವಜನರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದರೆ ಇಂದೂ ಹಲವು ಮಂದಿಯನ್ನು ಬಂಧಿಸಲಾಗುತ್ತಿದೆ. ಇದು ಈ ಸರ್ವಾಧಿಕಾರದ ಅಂತ್ಯದ ಆರಂಭವಾಗಿದೆ ಎಂದು ಸಿಜೆಪಿ ಹೇಳಿದೆ. ಇನ್ನು ಎಸ್‌ಎಫ್‌ಐ ನಾಯಕರನ್ನೂ ಬಂಧನ ಮಾಡಲಾಗುತ್ತಿದೆ.





