ಎಸ್‌ಐಆರ್ ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಅಕ್ಟೋಬರ್ 10ರಂದು ದೆಹಲಿಯಲ್ಲಿ ಎರಡನೇ ಬೃಹತ್ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕರೆಕೊಟ್ಟಿದೆ. ಆದಾಗ್ಯೂ, ಈ ಪ್ರತಿಭಟನೆಗೆ ಸಿದ್ದತೆ ನಡೆಯುತ್ತಿರುವ ಹೊತ್ತಿನಲ್ಲೇ – ಪ್ರತಿಭಟನೆಗೂ ಮುನ್ನವೇ -ತಮ್ಮ ಸಂಘಟನೆಯ ಪ್ರಮುಖ ನಾಯಕರನ್ನು ಬಂಧಿಸಲು ಮೋದಿ ಸರ್ಕಾರ ಸಂಚು ಹೆಣೆಯುತ್ತಿದೆ ಎಂದು ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಜುಲೈ ತಿಂಗಳಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಧರಣಿ ನಡೆಸಿತ್ತು. ಜುಲೈ 20ರಂದು ನಡೆದ ಪಾರ್ಲಿಮೆಂಟ್ ಚಲೋ ಮೆರವಣಿಗೆ ವೇಳೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆಪೊಲೀಸರು ಕ್ರೌರ್ಯ ಮೆರೆದಿದ್ದರು. ಅಂತಿಮವಾಗಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಪ್ರತಿಭಟನೆ ಅಂತ್ಯಗೊಂಡಿತ್ತು. ಇದೀಗ ಎಸ್‌ಐಆರ್ ಮತ್ತು ಚುನಾವಣಾ ಆಯೋಗದ ವಿರುದ್ಧ ಸಿಜೆಪಿ ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ದೇಶಾದ್ಯಂತ ಹೋರಾಟಕ್ಕೆ ಮುಂದಾಗಿದೆ.
ಪ್ರತಿಭಟನೆ ಮತ್ತು ಬಂಧನದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಸೌರವ್ ದಾಸ್, “ಸರ್ಕಾರವು ನನ್ನನ್ನೂ ಸೇರಿದಂತೆ ಸಿಜೆಪಿ ನಾಯಕ ಅಭೀಜಿತ್ ದೀಪ್ಕೆ, ಅಶುತೋಷ್ ರಾಂಕಾ, ರತ್ನ ಸಿಂಗ್ ಹಾಗೂ ಇತರ ಪ್ರಮುಖರನ್ನು ಬಂಧಿಸಲು ಸಂಚು ರೂಪಿಸುತ್ತಿದೆ. ಇಂತಹ ಸರ್ವಾಧಿಕಾರಿ ಕ್ರಮಗಳಿಂದ ನಮ್ಮ ಹೋರಾಟವನ್ನು ಹತ್ತಿಕ್ಕಬಹುದು ಎಂದು ಸರ್ಕಾರ ಭಾವಿಸಿದ್ದರೆ, ಅದು ಕೇವಲ ಭ್ರಮೆ. ದೇಶದ ಯುವಜನತೆ ಜಾಗೃತರಾಗಿದ್ದಾರೆ. ನಾವು ಜೈಲಿಗೆ ಹೋಗಲು ಅಥವಾ ಅದಕ್ಕಿಂತಲೂ ಭೀಕರ ಪರಿಣಾಮ ಎದುರಿಸಲು ಸದಾ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
“ಸರ್ಕಾರ ಈ ಹಂತದಲ್ಲಿ ನಮ್ಮನ್ನು ಬಂಧಿಸಿದರೆ ಅದು ದೊಡ್ಡ ತಪ್ಪಾಗಲಿದೆ. ನಾವು ಇರಲಿ ಇಲ್ಲದಿರಲಿ, ಸಾರ್ವಜನಿಕರು ತಮ್ಮ ಹಕ್ಕು ಮತ್ತು ಭವಿಷ್ಯಕ್ಕಾಗಿ ನಡೆಸುತ್ತಿರುವ ಈ ಹೋರಾಟವನ್ನು ಮುಂದುವರಿಸುತ್ತಾರೆ. ಅಕ್ಟೋಬರ್ 10ರಿಂದ ಆರಂಭವಾಗುವ ಈ ಚಳವಳಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭೀಜಿತ್ ಡಿಪ್ಕೆ ಕೂಡ ಅಕ್ಟೋಬರ್ 10ಕ್ಕೆ ಇಡೀ ದೇಶ ದೆಹಲಿಯತ್ತ ಬರಲಿದೆ ಎಂದು ಹೇಳಿದ್ದಾರೆ. ಸಹ-ಸಂಚಾಲಕ ಅಶುತೋಷ್ ರಾಂಕಾ ಅವರು, “ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಥವಾ ಇತರ ಕಠಿಣ ಕಾನೂನುಗಳ ಅಡಿಯಲ್ಲಿ ನಮ್ಮನ್ನು ಯಾವುದೇ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆಯಿದೆ ಎಂಬುದು ಏಜೆನ್ಸಿ ಮೂಲಗಳಿಂದ ಮಾಹಿತಿ ಬಂದಿದೆ” ಎಂದು ತಿಳಿಸಿದ್ದಾರೆ.
“ಜೂನ್ 6ರಿಂದಲೇ ನಾವು ಜೈಲಿಗೆ ಹೋಗಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ. ದೇಶವನ್ನು ನಾಶಮಾಡಲು ಹೊರಟಿರುವವರೇ ನಿಜವಾಗಿ ಭಯಗೊಂಡಿದ್ದಾರೆ” ಎಂದು ರಾಂಕಾ ಹೇಳಿದ್ದಾರೆ.
ಕಾನೂನು ತಂಡದ ಮುಖ್ಯಸ್ಥೆ ರತ್ನ ಸಿಂಗ್ ಪ್ರಕಾರ, ತನಿಖಾ ಸಂಸ್ಥೆಯೊಂದರ ಹಿರಿಯ ಅಧಿಕಾರಿಯಿಂದಲೇ ಸೌರವ್ ದಾಸ್‌ಗೆ ಬಂಧನದ ಮಾಹಿತಿ ಲಭ್ಯವಾಗಿದೆ.
ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | ಇವಿಎಂ vs ಬ್ಯಾಲೆಟ್ ಪೇಪರ್: ಯಾಕೀ ವಿವಾದ?
ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮುಂಬೈ ಮತ್ತು ದೆಹಲಿಯಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಆದರೆ, ದೆಹಲಿಯ ಜಂತರ್ ಮಂತರ್‌ಗೆ ಶಾಂತಿಯುತ ಮೆರವಣಿಗೆ ಹೊರಟಿದ್ದ ಆಮ್ ಆದ್ಮಿ ಪಾರ್ಟಿ (AAP) ನಾಯಕರು, ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಸೇರಿದಂತೆ 550ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ದೆಹಲಿ ಪೊಲೀಸರ ಕ್ರಮವು ಯುವಜನರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ದೆಹಲಿಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಪ್ರತಿಭಟನೆಗಳು ಮುಂದುವರಿದಿವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ದೆಹಲಿ ಪೊಲೀಸರು ನಿರಂತರವಾಗಿ ಯತ್ನಿಸುತ್ತಿದ್ದಾರೆ. ಭಾನುವಾರ, ಎಐಎಸ್‌ಎ ನಾಯಕಿ ನೇಹಾ ಬೋರಾ ಅವರನ್ನು ಮಹಿಳಾ ಸಿಬ್ಬಂದಿಗಳನ್ನು ಒಳಗೊಳ್ಳದೆ ಪುರುಷ ಪೊಲೀಸರೇ ವಶಕ್ಕೆ ಪಡೆದು, ಪ್ರತ್ಯೇಕ ಕಾರಿನಲ್ಲಿ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.



