2020ರ ದೆಹಲಿ ಗಲಭೆ ಸಂಚು ಪ್ರಕರಣದಲ್ಲಿ ಆರೋಪಿಗಳಾಗಿರುವ ಉಮರ್ ಖಾಲಿದ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ್ದು, ಸಹ ಆರೋಪಿ ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯೊಂದಿಗೆ ಆಗಸ್ಟ್ 27ರಂದು ಒಟ್ಟಿಗೆ ವಿಚಾರಣೆ ನಡೆಸಲು ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ವಿಕಾಸ್ ಮಹಾಜನ್ ಅವರಿದ್ದ ವಿಭಾಗೀಯ ಪೀಠವು, ಉಮರ್ ಖಾಲಿದ್ ಸಲ್ಲಿಸಿರುವ ನಿಯಮಿತ ಜಾಮೀನು ಅರ್ಜಿಯ ಜೊತೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಮಹತ್ವದ ಕಾನೂನು ಪ್ರಶ್ನೆ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ನೀಡುವಂತೆ ಸಲ್ಲಿಸಿರುವ ಅರ್ಜಿಗೂ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೋರಿದೆ.
ಈ ಹಿಂದೆ ಜುಲೈ 4ರಂದು ವಿಚಾರಣಾ ನ್ಯಾಯಾಲಯವು ಉಮರ್ ಖಾಲಿದ್ ಅವರ ಮೂರನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಚಾರಣಾ ನ್ಯಾಯಾಲಯವು, 2026ರ ಜನವರಿಯಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ತಾನು ಬದ್ಧವಾಗಿರುವುದಾಗಿ ಹೇಳಿತ್ತು. ಜಾಮೀನು ಕೋರಿ ಮತ್ತೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ನಿರ್ದಿಷ್ಟ ಷರತ್ತುಗಳನ್ನು ವಿಧಿಸಿದ್ದರಿಂದ, ಅರ್ಜಿಯನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.
ವಿಚಾರಣೆ ವೇಳೆ ಉಮರ್ ಖಾಲಿದ್ ಪರ ಹಿರಿಯ ವಕೀಲ ತ್ರಿದೀಪ್ ಪೈಸ್, ಇದು ತಮ್ಮ ಕಕ್ಷಿದಾರರ ಮೂರನೇ ಜಾಮೀನು ಅರ್ಜಿಯಾಗಿದ್ದು, ಮಧ್ಯಂತರ ಜಾಮೀನಿನ ಮನವಿಯನ್ನೂ ಪರಿಗಣಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಇದೇ ಪ್ರಕರಣಕ್ಕೆ ಸಂಬಂಧಿಸಿದ ಇತರ ಅರ್ಜಿಗಳು ಈಗಾಗಲೇ ಆಗಸ್ಟ್ 27ಕ್ಕೆ ವಿಚಾರಣೆಗೆ ನಿಗದಿಯಾಗಿರುವುದರಿಂದ ಈ ಅರ್ಜಿಯನ್ನೂ ಅವುಗಳೊಂದಿಗೆ ಸೇರಿಸಿ ವಿಚಾರಣೆ ನಡೆಸಬಹುದು ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ಹೈಕೋರ್ಟ್, ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ, ಉಮರ್ ಖಾಲಿದ್ ಹಾಗೂ ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 27ಕ್ಕೆ ನಿಗದಿಪಡಿಸಿತು.
ಏನಿದು ಪ್ರಕರಣ?
2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಸಾಮುದಾಯಿಕ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಈ ಗಲಭೆಗೆ ಸಂಚು ರೂಪಿಸಿದ್ದ ಆರೋಪದಡಿ ದೆಹಲಿ ಪೊಲೀಸರ ವಿಶೇಷ ಘಟಕವು ಉಮರ್ ಖಾಲಿದ್ ಸೇರಿದಂತೆ ಹಲವು ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ಪ್ರಕರಣ ದಾಖಲಿಸಿತ್ತು.
ಉಮರ್ ಖಾಲಿದ್ ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿದ್ದು, ಅಂದಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈವರೆಗೆ ಅವರು ಮೂರು ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಎಲ್ಲ ಹಂತಗಳಲ್ಲೂ ನಿರಾಕರಣೆಯಾಗಿದೆ.
ಇದನ್ನೂ ಓದಿ: ಮುಳ್ಳಯ್ಯನಗಿರಿ ಸಂರಕ್ಷಣೆಗೆ ಹೈಕೋರ್ಟ್ ಮಧ್ಯಪ್ರವೇಶ: ರಾಜ್ಯ, ಕೇಂದ್ರಕ್ಕೆ ನೋಟಿಸ್
ಆದರೆ, ಇತ್ತೀಚೆಗೆ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವು, ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ್ದ ಹಿಂದಿನ ತೀರ್ಪಿನ ಕುರಿತು ಪ್ರಶ್ನೆ ಎತ್ತಿತ್ತು. “ಜಾಮೀನು ನಿಯಮ, ಜೈಲು ಅಪವಾದ” ಎಂಬ ತತ್ವವು UAPA ಪ್ರಕರಣಗಳಿಗೂ ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದ ಪೀಠ, KA Najeeb ಪ್ರಕರಣದಲ್ಲಿ ದೀರ್ಘಾವಧಿಯ ವಿಚಾರಣಾ ವಿಳಂಬ ಜಾಮೀನಿಗೆ ಆಧಾರವಾಗಬಹುದು ಎಂಬ ತೀರ್ಪಿನೊಂದಿಗೆ ಹಿಂದಿನ ಆದೇಶವು ಸಂಘರ್ಷ ಹೊಂದಿರುವಂತೆ ಕಾಣುತ್ತದೆ ಎಂದು ಹೇಳಿತ್ತು. ಈ ಕಾನೂನು ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ಒಪ್ಪಿಸಲಾಗಿದೆ.
ಉಮರ್ ಖಾಲಿದ್ ತಮ್ಮ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿ ಆರು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಪ್ರಕರಣದ ವಿಚಾರಣೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ ಮತ್ತು ಆರೋಪಗಳ ಕುರಿತ ವಾದವೇ ಇನ್ನೂ ಪೂರ್ಣಗೊಂಡಿಲ್ಲ ಎಂದು ವಾದಿಸಿದ್ದಾರೆ.




