ಕಾಕ್ರೋಚ್ ಚಳವಳಿಯ ಮೂಲಕ ಅನಿರೀಕ್ಷಿತವಾಗಿ ದೇಶದ ರಾಜಕೀಯದ ಕೇಂದ್ರಬಿಂದುವಾದ CJI ಸೂರ್ಯಕಾಂತ್, ಆ ಬೆಳವಣಿಗೆಯ ಬಳಿಕ ತಮ್ಮ ಮಾತು, ನಡೆ ನುಡಿಯ ರಾಜಕೀಯ ಪರಿಣಾಮವನ್ನು ಹೆಚ್ಚು ಎಚ್ಚರಿಕೆಯಿಂದ ಗಮನಿಸುತ್ತಿರುವಂತಿದೆ. ತಮ್ಮ ‘ನಿರುದ್ಯೋಗಿ ಯುವಕರು ಕಾಕ್ರೋಚ್‌ಗಳಿದ್ದಂತೆ’ ಎಂಬ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಲು ತಡವಾಗಿ ಪ್ರಯತ್ನಿಸಿದರು. ಅಷ್ಟರೊಳಗೆ ಆ ಹೇಳಿಕೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ‘ಕಾಕ್ರೋಚ್ ಜನತಾ ಪಾರ್ಟಿ’ಯ ಸುತ್ತ ಯುವ ಸಮೂಹದ ಆಕ್ರೋಶ ಸಂಘಟಿತ ರೂಪ ಪಡೆದುಕೊಂಡು, ಮೋದಿ–ಅಮಿತ್ ಶಾ–ಆರೆಸ್ಸೆಸ್ ನೇತೃತ್ವದ ಅಧಿಕಾರ ವ್ಯವಸ್ಥೆಯ ನಿದ್ದೆಗೆಡಿಸುವ ಮಟ್ಟಕ್ಕೆ ಬೆಳೆದಿತ್ತು.
ಈ ಬೆಳವಣಿಗೆಯಲ್ಲಿ ಸಿಜೆಐ ನೇರ ರಾಜಕೀಯ ಪಾತ್ರ ವಹಿಸದಿದ್ದರೂ, ಅವರ ಹೇಳಿಕೆಯೊಂದು ಇಂತಹ ರಾಜಕೀಯ ವಿದ್ಯಮಾನಕ್ಕೆ ಕಾರಣವಾಗಿದ್ದು ಮಾತ್ರ ನಿರಾಕರಿಸಲಾಗದ ಸಂಗತಿ. ಆ ಅನುಭವದ ನಂತರ ಸೂರ್ಯಕಾಂತ್ ಅವರ ಮುಂದೆ ಮತ್ತೊಂದು ಸೂಕ್ಷ್ಮ ಪರಿಸ್ಥಿತಿ ಎದುರಾಗಿದೆ.
ಹೈದರಾಬಾದ್‌ನ NALSAR ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಮನ್ನನ್ ಕುಮಾರ್ ಮಿಶ್ರಾ ತೀವ್ರವಾಗಿ ಪ್ರತಿಕ್ರಿಯಿಸಿದರು. 2026ರ ಬ್ಯಾಚ್ ವಿದ್ಯಾರ್ಥಿಗಳನ್ನು ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ನೋಂದಾಯಿಸದಂತೆ ಸೂಚಿಸುವ ಮೂಲಕ ಅವರ ವೃತ್ತಿಜೀವನದ ಮೇಲೆಯೇ ಪರಿಣಾಮ ಬೀರುವ ಕ್ರಮಕ್ಕೆ BCI ಮುಂದಾಗಿತ್ತು.
ಕಾನೂನು ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ವಕೀಲಿ ವೃತ್ತಿಗೆ ಪ್ರವೇಶಿಸಲು ಬಾರ್ ಕೌನ್ಸಿಲ್ ನೋಂದಣಿ ಅತ್ಯಗತ್ಯ. ಹೀಗಿರುವಾಗ ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಯಾಗಿ ಅವರ ವೃತ್ತಿಪರ ಭವಿಷ್ಯವನ್ನೇ ಪ್ರಶ್ನಿಸುವ ಕ್ರಮ ಸಹಜವಾಗಿಯೇ ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಈಗಾಗಲೇ ಯುವ ಸಮೂಹದ ನಡುವೆ ಅಸಮಾಧಾನವೊಂದು ಕುದಿಯುತ್ತಿರುವ ಸಂದರ್ಭದಲ್ಲಿ, ಇಂತಹ ನಡೆ ಆ ಆಕ್ರೋಶಕ್ಕೆ ಮತ್ತಷ್ಟು ಇಂಧನವಾಗಬಹುದೆಂಬುದನ್ನು CJI ಸೂರ್ಯಕಾಂತ್ ಅರಿತಿರಬಹುದು.
ಹೀಗಾಗಿಯೇ BCI ಕ್ರಮದ ವಿರುದ್ಧ ಅವರು ತಕ್ಷಣವೇ ಅಂತರ ಕಾಯ್ದುಕೊಂಡಿದ್ದಾರೆ. “ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕಿದೆ. ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ಸಂವಾದ. BCIಗೆ ಇದರಲ್ಲಿ ಯಾವುದೇ ಕೆಲಸವಿಲ್ಲ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಪ್ಪು ಹೇಳಿಕೆ ನೀಡಿದ್ದರೂ ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕು ಇರುತ್ತದೆ ಎಂದು ಹೇಳುವ ಮೂಲಕ, ಪ್ರತಿಭಟನೆಯನ್ನು ಅಪರಾಧೀಕರಿಸುವ ಪ್ರಯತ್ನಕ್ಕೆ ನ್ಯಾಯಾಂಗದ ಮೇಲ್ಮಟ್ಟದಿಂದಲೇ ತಡೆ ಹಾಕಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, BCI ತನ್ನ ಸುತ್ತೋಲೆಯನ್ನು ಹಿಂಪಡೆಯುವ ಮುನ್ನವೇ CJI ಸಾರ್ವಜನಿಕವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಕ್ಷಾತ್ಮಕ ಕ್ರಮ ಕೈಗೊಳ್ಳಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವೂ ಹೊರಬಂದಿದೆ. ಇದು ಕೇವಲ NALSAR ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರಶ್ನೆಯಲ್ಲ. ವಿದ್ಯಾರ್ಥಿಗಳು ನ್ಯಾಯಾಂಗದ ಮುಖ್ಯಸ್ಥರನ್ನೇ ಪ್ರಶ್ನಿಸಬಹುದೇ? ಪ್ರಶ್ನಿಸಿದರೆ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಸಂಸ್ಥೆಗಳು ಪ್ರತಿಕ್ರಿಯಿಸಬಹುದೇ? ಎಂಬ ದೊಡ್ಡ ಪ್ರಶ್ನೆಯೂ ಇದರ ಹಿಂದಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನಾ ಹಕ್ಕಿನಲ್ಲಿ BCI ಹಸ್ತಕ್ಷೇಪ ಬೇಡ: CJI ಸೂರ್ಯಕಾಂತ್
ಪ್ರಸ್ತುತ ಬೆಳವಣಿಗೆಗಳು CJI ಅವರು ವಿದ್ಯಾರ್ಥಿಗಳ ಹಕ್ಕುಗಳ ಪರ ಎಂಬುದನ್ನು ತೋರಿಸಿವೆ ನಿಜ. ಆದರೆ, ಇದು ಸೂರ್ಯಕಾಂತ್ ಅವರ ಹಿಂದಿನ ಅನುಭವದಿಂದ ಕಲಿತ ಎಚ್ಚರಿಕೆಯ ಹೆಜ್ಜೆ ಎಂಬುದರಲ್ಲಿ ಸಂಶಯವಿಲ್ಲ. ಕಾಕ್ರೋಚ್ ವಿವಾದದ ಬಳಿಕ ತಮ್ಮ ಹೇಳಿಕೆಯ ಪರಿಣಾಮವನ್ನು ಸ್ಪಷ್ಟಪಡಿಸಲು ಅವರು ತಡವಾಗಿ ಮುಂದಾಗಬೇಕಾಯಿತು. ಈ ಬಾರಿ ಮಾತ್ರ, ವಿವಾದ ದೊಡ್ಡದಾಗುವ ಮೊದಲೇ BCI ಕ್ರಮದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ.
ಸದ್ಯ ಬಿಸಿ ಹಾಲಿನಿಂದ ಬಾಯಿ ಸುಟ್ಟ ಬೆಕ್ಕು ತಣ್ಣನೆಯ ಹಾಲನ್ನೂ ಊದಿ ಕುಡಿಯುತ್ತದೆ ಎಂಬ ಗಾದೆಯಂತೆ, ಹಿಂದಿನ ಅನುಭವ CJI ಅವರನ್ನು ಹೆಚ್ಚು ಎಚ್ಚರಿಕೆ ವಹಿಸುವಂತೆ ಮಾಡಿದೆ ಎನ್ನಬಹುದು!
ಅಂತೂ, NALSAR ವಿವಾದದಲ್ಲಿ ಸೂರ್ಯಕಾಂತ್ ಅವರ ನಿಲುವು, ನ್ಯಾಯಾಂಗದ ಮುಖ್ಯಸ್ಥರ ಮಾತಿನ ಸುತ್ತ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳೂ ಇರುತ್ತವೆ ಎಂಬುದನ್ನು ಸ್ಪಷ್ಟಪಡಿಸಿದೆ. ಮುಂದಾಗುವ ಪರಿಣಾಮವನ್ನು ಅರಿತು ಮಾತನಾಡುವುದು, ಹಾಗೆಯೇ ವಿದ್ಯಾರ್ಥಿಗಳ ಪ್ರತಿಭಟನಾ ಹಕ್ಕನ್ನು ರಕ್ಷಿಸುವುದು.. ಈ ಎರಡರ ನಡುವಿನ ಸೂಕ್ಷ್ಮ ಗೆರೆಯ ಮೇಲೆಯೇ ಈಗ CJI ಸೂರ್ಯಕಾಂತ್ ನಡೆಯಬೇಕಾಗಿದೆ, ನಡೆಯುತ್ತಿದ್ದಾರೆ.




