ರಾಜ್ಯದಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಗುಟ್ಕಾ ಸಿಗುವುದಿಲ್ಲ ಎಂದರಿತ ಜನ ಸರಗಟ್ಟಲೆ ಗುಟ್ಕಾ ಖರೀದಿಸುತ್ತಿರುವ ದೃಶ್ಯ ಮಾಮೂಲಾಗಿದೆ.
ಕೈಯಲ್ಲಿದ್ದ ಹಣ ಸಾಲದೆ ಕೆಲವರು ಕೈಸಾಲ ಮಾಡಿಕೊಂಡು ಹಣ ತಂದು ಗುಟ್ಕಾ ಖರೀದಿಸಿದ್ದಾರೆ ಎನ್ನಲಾಗಿದೆ. ‘ಎಷ್ಟೇ ಬೆಲೆ ಇರಲಿ, ಗುಟ್ಕಾ ಕೊಡಿ’ ಎಂದು ಗ್ರಾಹಕರು ಚೀಲಗಳಲ್ಲಿ ಗುಟ್ಕಾ ಪ್ಯಾಕೆಟ್‌ಗಳನ್ನು ತುಂಬಿಸಿಕೊಂಡು ಸೈಕಲ್ ಹಾಗೂ ಬೈಕ್‌ಗಳಲ್ಲಿ ಹೇರಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಎಚ್ಚೆತ್ತ ವ್ಯಾಪಾರಸ್ಥರು
ಬೆಳಗಿನ ವೇಳೆಯಲ್ಲಿ ಗ್ರಾಹಕರಿಗೆ ಪ್ಯಾಕೆಟ್ ಹಾಗೂ ಚೀಲಗಳ ಲೆಕ್ಕದಲ್ಲಿ ಗುಟ್ಕಾ ಮಾರಾಟ ಮಾಡಿದ ಕೆಲ ವ್ಯಾಪಾರಸ್ಥರು, ಮಧ್ಯಾಹ್ನದ ವೇಳೆಗೆ ದಾಸ್ತಾನು ಇದ್ದರೂ ಮಾರಾಟ ಮಾಡದೆ ‘ಸ್ಟಾಕ್ ಇಲ್ಲ’ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಗೋದಾಮಿನಲ್ಲಿ ಗುಟ್ಕಾ ದಾಸ್ತಾನು ಇಟ್ಟರೆ ಕಾನೂನು ಕ್ರಮ ಎದುರಾಗಬಹುದು ಅಥವಾ ದಾಸ್ತಾನು ಜಪ್ತಿಯಾಗಬಹುದು ಎಂಬ ಆತಂಕದಿಂದ ಕೆಲ ವ್ಯಾಪಾರಸ್ಥರು ಗುಟ್ಕಾ ದಾಸ್ತಾನನ್ನು ಬೇರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
₹25ರ ಗುಟ್ಕಾ ₹100ಕ್ಕೆ!
ಯಾವುದೇ ಅಂಗಡಿಯಲ್ಲಿ ಗುಟ್ಕಾ ಕೇಳಿದರೂ ‘ಇಲ್ಲ’ ಎಂದು ಹೇಳಲಾಗುತ್ತಿದೆ. ಆದರೆ ಕದ್ದುಮುಚ್ಚಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯವಾಗಿ ₹25ಕ್ಕೆ ದೊರೆಯುತ್ತಿದ್ದ ಒಂದು ಗುಟ್ಕಾ ಪ್ಯಾಕೆಟ್ ಇದೀಗ ಕಾಳಸಂತೆಯಲ್ಲಿ ₹100ಕ್ಕೆ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ನಿಷೇಧದ ಸುದ್ದಿ ಬೆನ್ನಲ್ಲೇ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು, ದಾಸ್ತಾನು ಸ್ಥಳಾಂತರ ಮತ್ತು ಬೆಲೆ ಏರಿಕೆಯ ಆರೋಪಗಳು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿವೆ. ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮಾರಾಟ ನಡೆಯುತ್ತಿದ್ದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ




