ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ರಾಜಕೀಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದು, ಶೀಘ್ರದಲ್ಲೇ ತಾವೇ ಸ್ವತಃ ಬೀದಿಗಿಳಿದು ಬೃಹತ್ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.
ಕೋಲ್ಕತ್ತಾದಲ್ಲಿ ಟಿಎಂಸಿ ವಿದ್ಯಾರ್ಥಿ ಘಟಕದ (TMCP) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಟಿಎಂಸಿ ನಾಯಕರು ಹಾಗೂ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ರಾಜಕೀಯ ದ್ವೇಷದ ನಡವಳಿಕೆ ತೋರುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಟಿಎಂಸಿ ಬಂಡಾಯ: ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ; ಗುಪ್ತ ಸಭೆ
ಸಾರ್ವಜನಿಕ ಸಭೆಗಳಿಗೆ ಆಡಳಿತ ಯಂತ್ರವು ಅನುಮತಿ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿದ ಮಮತಾ, “ನಮ್ಮ ಸಭೆಗಳಿಗೆ ಅನುಮತಿ ನೀಡದಿದ್ದರೆ ನಾನು ನೇರವಾಗಿ ಜನರ ಬಳಿಗೇ ತೆರಳಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ನಾನು ಬೀದಿಗಿಳಿದು ಹೊರಟಾಗ ನನ್ನ ಮೇಲೆ ದಾಳಿ ಮಾಡಲು ನೀವು ಎಷ್ಟು ಮೊಟ್ಟೆ ಮತ್ತು ಇಟ್ಟಿಗೆಗಳನ್ನು ಕಾಯ್ದಿರಿಸಿದ್ದೀರಿ (ಇಟ್ಟಿದ್ದೀರಿ) ಎಂಬುದನ್ನು ನಾನು ನೋಡುತ್ತೇನೆ” ಎಂದು ಸಿಎಂ ಸುವೇಂದು ಅಧಿಕಾರಿಗೆ ನೇರ ಸವಾಲು ಹಾಕಿದ್ದಾರೆ.
ತಮ್ಮ ಬೆಂಬಲಿಗರ ಮೇಲಿನ ಪೊಲೀಸರ ಕ್ರಮಗಳು ಮತ್ತು ಕಿರುಕುಳವನ್ನು ಖಂಡಿಸಿದ ಅವರು, ಪ್ರಜಾಸತ್ತಾತ್ಮಕ ಹೋರಾಟದ ಮೂಲಕವೇ ಬಿಜೆಪಿಯ ಈ ಧೋರಣೆಗೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಆಡಳಿತಾರೂಢ ಬಿಜೆಪಿ ನಾಯಕರು, ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲಾಗದೆ ಮತ್ತು ಜನಬೆಂಬಲ ಕಳೆದುಕೊಂಡು ಮಮತಾ ಬ್ಯಾನರ್ಜಿ ಅವರು ಇಂತಹ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ‘ದೀದಿ’ ಅವರ ಈ ಹೊಸ ಸವಾಲಿನಿಂದಾಗಿ ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಮತ್ತೆ ಕಾವು ಏರಿದೆ.




