ಮೊಬೈಲ್ ಅಂಗಡಿಯ ಕಿಟಕಿ ಮುರಿದು ಒಳನುಗ್ಗಿ ಮೊಬೈಲ್ ಫೋನ್ಗಳು ಹಾಗೂ ನಗದು ಕಳವು ಮಾಡಿದ್ದ ಆರೋಪಿಯನ್ನು ಬೆಳಗಾವಿ ಜಲ್ಲೆಯ ರಾಯಬಾಗ ಪೊಲೀಸರು ಬಂಧಿಸಿ, ₹45 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕಂಕಣವಾಡಿ ಗ್ರಾಮದ ರಾಮಚಂದ್ರ ಚಿಕ್ಕಯ್ಯ ಫರೀಟ್ ಅವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಜೂನ್ 28ರ ರಾತ್ರಿ 10ರಿಂದ ಜೂನ್ 29ರ ಬೆಳಗ್ಗೆ 8ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿತ್ತು. ಕಿಟಕಿ ಮುರಿದು ಅಂಗಡಿಯೊಳಗೆ ಪ್ರವೇಶಿಸಿದ್ದ ಕಳ್ಳರು ಮೊಬೈಲ್ ಫೋನ್ಗಳು ಹಾಗೂ ನಗದು ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮೇಖಳಿ ಗ್ರಾಮದ ಕ್ವಾಟೇಪ್ಪ ಲಗಮಪ್ಪ ಪೂಜೇರಿ (19) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ₹26 ಸಾವಿರ ಮೌಲ್ಯದ ವಿವೋ ಮೊಬೈಲ್, ₹18 ಸಾವಿರ ಮೌಲ್ಯದ ಲಾವಾ ಮೊಬೈಲ್ ಹಾಗೂ ₹1 ಸಾವಿರ ಮೌಲ್ಯದ ಬ್ಲೂಟೂತ್ ಸೇರಿದಂತೆ ಒಟ್ಟು ₹45 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಅಥಣಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ ಜಿ. ಮುನ್ನೋಳಿ ಅವರ ನೇತೃತ್ವದಲ್ಲಿ ರಾಯಬಾಗ ಠಾಣೆ ಇನ್ಸ್ಪೆಕ್ಟರ್ ಎಂ.ಎಂ. ಡಪ್ಪಿನ್, ಪಿಎಸ್ಐ ಶಿವಾನಂದ ಮನ್ನಿಕೇರಿ ಹಾಗೂ ಸಿಬ್ಬಂದಿ ಮತ್ತು ಟೆಕ್ನಿಕಲ್ ಸೆಲ್ನ ಸಚಿನ್ ಪಾಟೀಲ ಅವರ ತಂಡ ಕಾರ್ಯಾಚರಣೆ ನಡೆಸಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣ ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



