ತನ್ನ ಮಗನಿಗೆ ಕಿಡ್ನಿ ದಾನ ಮಾಡಲು ಅನುಮತಿ ಕೋರಿದ್ದ ತಾಯಿಯ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸಾರಾಧಿಕಾರ ಸಮಿತಿಯ (State Authorization Committee) ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ತಾಯಿ-ಮಗನ ಸಂಬಂಧವನ್ನು ಸಾಬೀತುಪಡಿಸಲು DNA ಪರೀಕ್ಷೆ ನಡೆಸುವಂತೆ ಒತ್ತಾಯಿಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳದ ಹೌರಾದ ನಿವಾಸಿಯಾದ ರೋಹಿತ್ ಕುಮಾರ್ ಚೌರಾಸಿಯಾ ಎಂಬುವರು ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ತುರ್ತು ಕಿಡ್ನಿ ಕಸಿ ಚಿಕಿತ್ಸೆಗಾಗಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ತಾಯಿ ರೀತಾ ಚೌರಾಸಿಯಾ ಅವರು ತಮ್ಮ ಮಗನಿಗೆ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದರು. ಆದರೆ, ತಮಿಳುನಾಡು ಸಾರಾಧಿಕಾರ ಸಮಿತಿಯು “ದಾನಿ ಮತ್ತು ಸ್ವೀಕೃತಿದಾರರ ನಡುವಿನ ಸಂಬಂಧ ಸರಿಯಾಗಿ ಸಾಬೀತಾಗಿಲ್ಲ” ಎಂಬ ಕಾರಣ ನೀಡಿ 2026ರ ಏ.17ರಂದು ಈ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ವಿರೋಧಿಸಿ ತಾಯಿ-ಮಗ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ಪೀಠವು ಕೆಲ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಆದೇಶ ನೀಡಿದೆ:
ಮಗನ ಜನನ ಪ್ರಮಾಣಪತ್ರ, ತಾಯಿ ಹಾಗೂ ಮಗನ ಪ್ಯಾನ್ ಕಾರ್ಡ್ ಮತ್ತು ಇತರ ಗುರುತಿನ ಚೀಟಿಗಳನ್ನು ನ್ಯಾಯಾಲಯ ಪರಿಶೀಲಿಸಿದೆ. ದಾಖಲೆಗಳಲ್ಲಿ ರೀತಾ ಚೌರಾಸಿಯಾ ಅವರನ್ನು ರತನ್ ಲಾಲ್ ಚೌರಾಸಿಯಾ ಅವರ ಪತ್ನಿ ಎಂದು ಮತ್ತು ರೋಹಿತ್ ಅವರನ್ನು ರತನ್ ಲಾಲ್ ಅವರ ಮಗ ಎಂದು ನಮೂದಿಸಲಾಗಿದೆ. ಲಭ್ಯವಿರುವ ಸಾಕ್ಷ್ಯಗಳು ಮತ್ತು ದಾಖಲೆಗಳ ಆಧಾರದ ಮೇಲೆ ಅರ್ಜಿದಾರರು ಪರಸ್ಪರ ತಾಯಿ-ಮಗ ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ತಾಯಿಗೆ ಡಿಎನ್ಎ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.
ಇದನ್ನೂ ಓದಿ: ದಿನಕ್ಕೆ 4 ಲಕ್ಷ ಬ್ಯಾರೆಲ್ ಎಲ್‌ಪಿಜಿ ಕೊರತೆ: ಅಸಲಿಯತ್ತು ಮುಚ್ಚಿಡುತ್ತಿದೆಯೇ ಮೋದಿ ಸರ್ಕಾರ?
ತಾನೇ ಹೆತ್ತ ಮಗನಿಗೆ ಕಿಡ್ನಿ ನೀಡಲು ತಾಯಿ ಮುಂದೆ ಬಂದಾಗ, ಅಧಿಕಾರಿಗಳು ಇಷ್ಟು ಬೇಜವಾಬ್ದಾರಿಯಿಂದ ಮನವಿಯನ್ನು ತಿರಸ್ಕರಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ರೋಹಿತ್ ಚೌರಾಸಿಯಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್, ತಕ್ಷಣವೇ ಕಿಡ್ನಿ ಕಸಿ ಪ್ರಕ್ರಿಯೆಗೆ ಅನುಮತಿ ನೀಡುವಂತೆ ಸಾರಾಧಿಕಾರ ಸಮಿತಿಗೆ ಆದೇಶಿಸಿದೆ. ಮುಂದಿನ ವಾರದೊಳಗಾಗಿ ಈ ಶಸ್ತ್ರಚಿಕಿತ್ಸೆ ನಡೆಯಬೇಕಿರುವುದರಿಂದ ಯಾವುದೇ ವಿಳಂಬವಿಲ್ಲದೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಅರ್ಜಿದಾರರ ಪರವಾಗಿ ವಕೀಲ ಅಭಿನವ್ ಪಾರ್ಥಸಾರಥಿ ಮತ್ತು ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ವಕೀಲ ಎಲ್.ಎಸ್.ಎಂ. ಹಸನ್ ಫಿಜಲ್ ಅವರು ವಾದ ಮಂಡಿಸಿದ್ದರು.




