ದಂಪತಿಗಳ ನಡುವೆ ಪರಸ್ಪರ ಗೌರವ, ನಂಬಿಕೆ ಹಾಗೂ ಸಾಂಗತ್ಯವೇ ಇಲ್ಲದಾಗ, ಕೇವಲ ಕಾನೂನಿನ ಹೆಸರಿನಲ್ಲಿ ಮದುವೆಯ ಬಾಂಧವ್ಯವನ್ನು ಉಳಿಸಿಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಒಡಿಶಾ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತಿಯಿಂದ ನಿರಂತರ ದೌರ್ಜನ್ಯಕ್ಕೆ ತುತ್ತಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಮಹಿಳೆಗೆ ವಿಚ್ಛೇದನ ನೀಡಿ ರಾಯಗಡ ಕುಟುಂಬ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ಹೈಕೋರ್ಟ್, ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಹರೀಶ್ ಟಂಡನ್ ಹಾಗೂ ನ್ಯಾಯಮೂರ್ತಿ ಚಿತ್ತರಂಜನ್ ದಾಶ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.
ಹೈಕೋರ್ಟ್ ಹೇಳಿದ್ದೇನು?
“ಪರಸ್ಪರ ಗೌರವ, ವಿಶ್ವಾಸ, ಹಾಗೂ ಬಿಟ್ಟುಕೊಡುವ ಮನೋಭಾವಗಳು ದಾಂಪತ್ಯ ಜೀವನಕ್ಕೆ ಬರಿ ಅಲಂಕಾರಿಕ ಅಂಶಗಳಲ್ಲ, ಅವು ಕುಟುಂಬದ ತಡಿಪಾಯ. ಬಾಂಧವ್ಯದ ಮೂಲ ಸತ್ವವೇ ನಶಿಸಿಹೋದಾಗ, ಬರಿ ಕಾನೂನಾತ್ಮಕ ಚೌಕಟ್ಟಿನಲ್ಲಿ ಮದುವೆಯ ಪವಿತ್ರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ” ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಮತ್ತು ಬಿ.ಟೆಕ್ ಪದವೀಧರರಾದ ಈ ಜೋಡಿ, 2021ರ ಅಕ್ಟೋಬರ್ 20 ರಂದು ಹಿಂದೂ ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಆರಂಭದಲ್ಲಿ ವಿಶಾಖಪಟ್ಟಣ ಹಾಗೂ ಹೈದರಾಬಾದ್‌ನಲ್ಲಿ ನೆಲೆಸಿದ್ದ ದಂಪತಿಗಳ ನಡುವೆ, ಅಲ್ಪಾವಧಿಯಲ್ಲೇ ದೈಹಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳು ಕೇಳಿಬಂದವು. ಎರಡೂ ಕುಟುಂಬಗಳ ನಡುವಿನ ಜಗಳ, ನಂಬಿಕೆಯ ಕೊರತೆ ಮತ್ತು ಮನಸ್ತಾಪಗಳಿಂದಾಗಿ ಇಬ್ಬರೂ ಬೇರೆಯಾಗಿದ್ದರು. ತದನಂತರ, ಪತ್ನಿಯು ದೌರ್ಜನ್ಯದ ಆಧಾರದ ಮೇಲೆ ವಿಚ್ಛೇದನ ಕೋರಿ ರಾಯಗಡದ ಕುಟುಂಬ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಕುಟುಂಬ ನ್ಯಾಯಾಲಯವು 2024 ರ ಜನವರಿ 27ರಂದು ವಿಚ್ಛೇದನ ಮಂಜೂರು ಮಾಡಿ ಆದೇಶಿಸಿತ್ತು.
ಪತಿಯ ವಾದವೇನಿತ್ತು?
ಕುಟುಂಬ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ, ತಾವು ದಾಂಪತ್ಯ ಮರುಸ್ಥಾಪನೆಗಾಗಿ ಅರ್ಜಿಸಲ್ಲಿಸಿರುವುದಾಗಿ ಮತ್ತು ತಮಗೆ ಸಂಸಾರ ಮುಂದುವರಿಸಲು ಇಷ್ಟವಿದೆ ಎಂದು ವಾದಿಸಿದ್ದರು.
ಆದರೆ ಈ ವಾದವನ್ನು ಪುರಸ್ಕರಿಸದ ಹೈಕೋರ್ಟ್, “ಪತಿ ಆ ನಂತರದಲ್ಲಿ ಅರ್ಜಿ ಸಲ್ಲಿಸಿದರು ಎಂಬ ಒಂದೇ ಕಾರಣಕ್ಕೆ, ಅದಕ್ಕೂ ಮುನ್ನ ಪತ್ನಿಗೆ ಅನುಭವವಾದ ಮಾನಸಿಕ ಹಿಂಸೆ ಅಥವಾ ಅವರ ಮೇಲಾದ ಪರಿಣಾಮವನ್ನು ಇಲ್ಲದಂತಾಗಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿತು.
ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ 2026ರ ಮಾರ್ಚ್ ತಿಂಗಳಲ್ಲಿ ಇಬ್ಬರನ್ನೂ ಮುಖಾಮುಖಿ ಭೇಟಿ ಮಾಡಿಸಿ ಸಂಧಾನಕ್ಕೆ ಪ್ರಯತ್ನಿಸಿತ್ತು. ಆದರೆ, ಆ ಸಮಯದಲ್ಲೂ ಇಬ್ಬರೂ ಒಟ್ಟಿಗೆ ಬಾಳಲು ಸಾಧ್ಯವಿಲ್ಲ, ಸಂಬಂಧ ಕೊನೆಗೊಳಿಸುವುದೇ ಸೂಕ್ತ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಹಿಂದೂ ವಿವಾಹ ಕಾಯ್ದೆಯಡಿ “ಸಂಬಂಧ ಸಂಪೂರ್ಣವಾಗಿ ಹಾಳಾಗಿದೆ” ಎಂಬುದು ನೇರವಾಗಿ ವಿಚ್ಛೇದನಕ್ಕೆ ಶಾಸನಬದ್ಧ ಕಾರಣವಲ್ಲದಿದ್ದರೂ, ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಈ ಹಿಂದೆ ನೀಡಿರುವ ಪ್ರಮುಖ ತೀರ್ಪುಗಳು ಈ ನಿಲುವಿಗೆ ಪುಷ್ಟಿ ನೀಡುತ್ತವೆ.
ಶಿಲ್ಪಾ ಸೈಲೇಶ್ vs ವರುಣ್ ಶ್ರೀನಿವಾಸನ್ (2023 – ಸುಪ್ರೀಂ ಕೋರ್ಟ್): ಸಂವಿಧಾನದ ವಿಧಿ 142 ರ ಅಡಿಯಲ್ಲಿ ಲಭ್ಯವಿರುವ ವಿಶೇಷ ಅಧಿಕಾರವನ್ನು ಬಳಸಿ, ‘ಸರಿಪಡಿಸಲಾಗದಂತೆ ಮುರಿದುಬಿದ್ದ ದಾಂಪತ್ಯ’ವನ್ನು ವಿಚ್ಛೇದನಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗಿದೆ ಎಂದು ಸಂವಿಧಾನಪೀಠ ತೀರ್ಪು ನೀಡಿತ್ತು. ಬಲವಂತವಾಗಿ ದಂಪತಿಯನ್ನು ಒಂದಾಗಿರಿಸುವುದು ಇಬ್ಬರಿಗೂ ಮಾಡುವ ಮಾನಸಿಕ ದೌರ್ಜನ್ಯ ಎಂದಿತ್ತು.
ಸಮರ್ ಘೋಷ್ vs ಜಯಾ ಘೋಷ್ (2007 – ಸುಪ್ರೀಂ ಕೋರ್ಟ್): ಮಾನಸಿಕ ಕ್ರೌರ್ಯದ ವ್ಯಾಖ್ಯಾನವನ್ನು ವಿಸ್ತರಿಸಿದ್ದ ಸುಪ್ರೀಂ ಕೋರ್ಟ್, “ದೀರ್ಘಕಾಲದ ಪ್ರತ್ಯೇಕತೆ, ಪರಸ್ಪರ ಭಾವುಕತೆ ಇಲ್ಲದಿರುವುದು ಮತ್ತು ಸರಿಪಡಿಸಲಾಗದಷ್ಟು ಹಾಳಾದ ಸಂಬಂಧವೂ ಮಾನಸಿಕ ಕ್ರೌರ್ಯದ ಭಾಗವೇ ಆಗುತ್ತದೆ” ಎಂದು ಹೇಳಿತ್ತು.
ನವೀನ್ ಕೊಹ್ಲಿ vs ನೀಲೂ ಕೊಹ್ಲಿ (2006 – ಸುಪ್ರೀಂ ಕೋರ್ಟ್): “ವಿವಾಹದ ಬಾಂಧವ್ಯವು ಕೇವಲ ಕಾಗದದ ಮೇಲೆ ಉಳಿದು, ದಂಪತಿಗಳ ನಡುವೆ ಭಾವನಾತ್ಮಕ ಬಂಧವೇ ಸಂಪೂರ್ಣವಾಗಿ ಕೊನೆಗೊಂಡಾಗ, ಅಂತಹ ಮದುವೆಯನ್ನು ಕಾನೂನಿನ ಬಲದಿಂದ ಜೀವಂತವಾಗಿಡುವುದು ಇಬ್ಬರ ಜೀವನಕ್ಕೂ ಮಾಡುವ ಅನ್ಯಾಯ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.



