ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಖಡಕ್ ಕ್ರಮಗಳು, ಸರ್ವೋಚ್ಚ ನ್ಯಾಯಾಲಯದ ಕಿಡಿನುಡಿಗಳು- ಸದ್ಯಕ್ಕೆ ಸಮಾಧಾನ ತರುವ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಚಿವರು, ಕಡ್ಡಾಯಗೊಳಿಸುವ ಮಾತಿಗಿಂತ ಅದನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸದಿದ್ದರೆ; ನ್ಯಾಯಾಧೀಶರು ವಿಚಾರಣೆ ವೇಳೆಯಲ್ಲಿ ಸರ್ಕಾರಗಳಿಗೆ, ಪ್ರಾಧಿಕಾರಗಳಿಗೆ ಛೀಮಾರಿ ಹಾಕುವುದರ ಬದಲು, ತೀರ್ಪುಗಳನ್ನು ಪ್ರಕಟಿಸಿ ಆದೇಶ ನೀಡದಿದ್ದರೆ- ಇಲ್ಲಿ ಎಲ್ಲವೂ ಯಥಾರೀತಿ ಎನ್ನುವಂತಾಗುವುದಿಲ್ಲವೇ?
ಒಂದು ಮಧ್ಯಮವರ್ಗದ ಕುಟುಂಬ ತಿಂಗಳಿಗೆ 50ರಿಂದ 60 ಸಾವಿರ ಸಂಬಳದಲ್ಲಿ, ಬೆಲೆ ಏರಿಕೆಯ ದುಬಾರಿ ದಿನಗಳಲ್ಲಿ, ನೂರಾರು ತಾಪತ್ರಯಗಳಲ್ಲಿ ಬದುಕುವುದೇ ಕಷ್ಟ. ಇಂತಹ ದುರ್ಬರ ದಿನಗಳಲ್ಲಿ ಕುಟುಂಬದ ಸದ್ಯಸರೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾದರೆ, ಗಂಡಾಂತರ ಕಾಯಿಲೆ ವಕ್ಕರಿಸಿದರೆ, ಅವರು ಆ ತಕ್ಷಣ ಯೋಚಿಸುವುದು ಸರ್ಕಾರಿ ಆಸ್ಪತ್ರೆಯನ್ನಲ್ಲ, ಖಾಸಗಿ ಆಸ್ಪತ್ರೆಯನ್ನು. ಸುಸಜ್ಜಿತ ಖಾಸಗಿ ಆಸ್ಪತ್ರೆ, ಅತ್ಯಾಧುನಿಕ ವ್ಯವಸ್ಥೆ, 24X7 ಚಿಕಿತ್ಸೆ, ಔಷಧಿ, ಸೇವೆ ಪಡೆದು, ಬಿಲ್ ಭರಿಸಿ ಬದುಕಿ ಬಂದರೆ- ಅವರು ಪುಣ್ಯವಂತರಲ್ಲ, ಪಾಪಿಗಳು. ಯಾಕೆಂದರೆ, ಅಷ್ಟೊತ್ತಿಗಾಗಲೇ ಆ ಕುಟುಂಬದ ಮೇಲೆ ಸಾಲದ ಹೊರೆ ಬಿದ್ದಿರುತ್ತದೆ. ಆ ಸಾಲ-ಬಡ್ಡಿ ಕಟ್ಟಿ ತೀರಿಸಲು ಇಡೀ ಕುಟುಂಬ ಹಲವಾರು ವರ್ಷಗಳ ಕಾಲ ಗಾಣದ ಎತ್ತಿನಂತೆ ದುಡಿಯಬೇಕಾಗುತ್ತದೆ.
ಇದು ಸಹಜವಾಗಿಯೇ, ಸರ್ಕಾರ ಏನು ಮಾಡುತ್ತಿದೆ, ಅದಕ್ಕಾಗಿಯೇ ಒಬ್ಬ ಮಂತ್ರಿ, ಇಲಾಖೆ, ಬಜೆಟ್‌ನಲ್ಲಿ ಎತ್ತಿಟ್ಟ ಕೋಟಿಗಟ್ಟಲೆ ಹಣ, ಕಾಯ್ದೆ-ಕಾನೂನು ಎಲ್ಲ ಇದೆಯಲ್ಲ ಎಂಬ ಪ್ರಶ್ನೆಗೆ ಕಾರಣವಾಗಬಹುದು. ಹೌದು, ಬಡವರ ಸ್ಥಿತಿ ಹೀಗೆಯೇ ಇದೆ, ವ್ಯವಸ್ಥೆ ಹಾಗೆಯೇ ಇದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ರಾಜಕಾರಣ, ಆಡಳಿತ ವ್ಯವಸ್ಥೆ ಕೆಟ್ಟು ಕೂತಿದೆ.
ಇವುಗಳ ನಡುವೆಯೇ ಎರಡು ಆಶಾದಾಯಕ ಬೆಳವಣಿಗೆಗಳು ನಮ್ಮನ್ನು ಈ ಕೆಟ್ಟ ವ್ಯವಸ್ಥೆಯಲ್ಲಿಯೂ ಬದುಕುವ ಭರವಸೆ ಮೂಡಿಸಿವೆ. ಒಂದು, ಆರೋಗ್ಯ ಸಚಿವ ಯು.ಟಿ. ಖಾದರ್, ಆರೋಗ್ಯ ಇಲಾಖೆಯ ಸುಧಾರಣೆಗಾಗಿ ತೆಗೆದುಕೊಳ್ಳುತ್ತಿರುವ ಖಡಕ್ ಕ್ರಮಗಳು. ಮತ್ತೊಂದು ಔಷಧಿಗಳ ಬೆಲೆ ಕುರಿತ ದೇಶದ ಸರ್ವೋಚ್ಚ ನ್ಯಾಯಾಲಯದ ಕಿಡಿನುಡಿಗಳು.
ಇದನ್ನು ಓದಿದ್ದೀರಾ?: ಎಸ್‌ಐಆರ್ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!
ಕಳೆದ ಸೆಪ್ಟೆಂಬರ್‍ನಲ್ಲಿ ರಾಜ್ಯ ಮಟ್ಟದ ಅಧ್ಯಯನವೊಂದು ಕ್ಯಾನ್ಸರ್, ಕಿಡ್ನಿ ಮತ್ತು ಏಡ್ಸ್ ಔಷಧಿಗಳನ್ನು ಅವುಗಳ ಖರೀದಿ ವೆಚ್ಚಕ್ಕಿಂತ 70 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಿತು. ಅದರಲ್ಲೂ 253 ಕ್ಯಾನ್ಸರ್ ಔಷಧಗಳನ್ನು ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತ ವರದಿ ಸಲ್ಲಿಸಿತು. ಆ ವರದಿಯನ್ನು ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಔಷಧ ಬೆಲೆ ನಿಯಂತ್ರಿಸಲು, ಆ ವರದಿಯನ್ನು ಲಗತ್ತಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿಕೊಂಡರು.
ಏತನ್ಮಧ್ಯೆ ಕ್ಯಾನ್ಸರ್ ಔಷಧಿಗಳ ಅತಿಯಾದ ಬೆಲೆ ಮತ್ತು ಖಾಸಗಿ ಆಸ್ಪತ್ರೆಗಳ ಭಾರಿ ಲಾಭಾಂಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಯಿತು. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಎಂಆರ್‌ಪಿ ಮತ್ತು ಚಿಲ್ಲರೆ ವ್ಯಾಪಾರಿಗಳ ದರದ ನಡುವಿನ ಬೃಹತ್ ವ್ಯತ್ಯಾಸವನ್ನು ಅರಿತು, ಸರ್ಕಾರ ತನ್ನ ಕಣ್ಣೆದುರೇ ಇಂತಹ ಅನ್ಯಾಯ ನಡೆಯಲು ಅವಕಾಶ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿತು. ಇಡೀ ವ್ಯವಸ್ಥೆಯನ್ನು ಯಾವುದೇ ನಿಯಂತ್ರಣವಿಲ್ಲದೆ ಮನಬಂದಂತೆ ನಡೆಯಲು ಬಿಡಬೇಕೇ ಎಂದು ಪ್ರಶ್ನಿಸಿತು.
ಅಷ್ಟೇ ಅಲ್ಲ, ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ(NPPA)ವು ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಸಂಸ್ಥೆಯಂತೆ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು. ಮುಂದುವರೆದು, ಡೀಲರ್‌ಗೆ ಕೇವಲ 11,000ಕ್ಕೆ ಸಿಗುವ ಕ್ಯಾನ್ಸರ್ ಇಂಜೆಕ್ಷನ್ ಅನ್ನು ಪ್ರಸಿದ್ಧ ಆಸ್ಪತ್ರೆಯೊಂದು 1.30 ಲಕ್ಷಕ್ಕೆ ಮಾರಾಟ ಮಾಡುತ್ತಿದೆ. ರೋಗಿ ತಾನೇ ಹೊರಗಡೆಯಿಂದ ತಂದುಕೊಡುತ್ತೇನೆ ಎಂದರೂ ಆಸ್ಪತ್ರೆ ಒಪ್ಪಲಿಲ್ಲ. ಇದು ದರೋಡೆಯಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿತು. ಹಾಗೆಯೇ, ಎಂಆರ್‌ಪಿ ಮೇಲೆ ಶೇ. 16ರಷ್ಟು ಲಾಭದ ಮಿತಿಯನ್ನು ಏಕೆ ನಿಗದಿಪಡಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.
ಸರ್ವೋಚ್ಚ ನ್ಯಾಯಾಲಯದ ನಡೆಯ ನಡುವೆಯೇ, ಖಾಸಗಿ ಆಸ್ಪತ್ರೆಗಳು ವಿಧಿಸುವ ಅತಿಯಾದ ಶುಲ್ಕಕ್ಕೆ ಕಡಿವಾಣ ಹಾಕಲು ಮತ್ತು ಚಿಕಿತ್ಸೆಯಲ್ಲಿ ಪಾರದರ್ಶಕತೆ ತರಲು ಆಸ್ಪತ್ರೆಗಳು ತಮ್ಮ ಚಿಕಿತ್ಸಾ ದರಪಟ್ಟಿ ಹಾಗೂ ಔಷಧಗಳ ಬೆಲೆಯನ್ನು ಪ್ರಮುಖವಾಗಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಖಡಕ್ ಸೂಚನೆ ನೀಡಿದ್ದಾರೆ.
ಅಂದರೆ, ಐಸಿಯು ಸೇವೆಗಳು, ಸಾಮಾನ್ಯ ವೈದ್ಯಕೀಯ ವಿಧಾನಗಳು, ಡಾಕ್ಟರ್ ಕನ್ಸಲ್ಟೇಷನ್ ಸೇರಿದಂತೆ ಸುಮಾರು 4,000ಕ್ಕೂ ಹೆಚ್ಚು ಚಿಕಿತ್ಸೆಗಳ ವಿವರ ಹಾಗೂ ದರಪಟ್ಟಿಯನ್ನು ಆಸ್ಪತ್ರೆಯ ರಿಸೆಪ್ಷನ್ ಕೌಂಟರ್‌ಗಳಲ್ಲಿ ಮತ್ತು ಕಿರುಪುಸ್ತಕಗಳ ರೂಪದಲ್ಲಿ ಪ್ರದರ್ಶಿಸುವುದು ಕಡ್ಡಾಯ ಎಂದಿದೆ. ಅಷ್ಟೇ ಅಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಏಕರೂಪದ ದರಪಟ್ಟಿಯನ್ನು ಪರಿಚಯಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಕೂಡ ಸಚಿವರು ತಿಳಿಸಿದ್ದಾರೆ.
ಆರೋಗ್ಯ ಸೇವೆ ಎನ್ನುವುದು ಇವತ್ತು ಮಾರುಕಟ್ಟೆಯ ಸರಕಾಗಿದೆ. ಖಾಸಗಿ ಆಸ್ಪತ್ರೆಗಳು ಕಾರ್ಪೊರೇಟ್ ಶೈಲಿ ಅಳವಡಿಸಿಕೊಂಡಿವೆ. ರೋಗಿ ಆಸ್ಪತ್ರೆಯ ಬಾಗಿಲು ತಟ್ಟಿದ ತಕ್ಷಣವೇ ಅನಿಶ್ಚಿತ ದರಗಳ, ಅಸ್ಪಷ್ಟ ಪರೀಕ್ಷೆಗಳ ಮತ್ತು ಅರ್ಥವಾಗದ ಬಿಲ್‌ಗಳ ಬಲೆಗೆ ಬಿದ್ದು ತಬ್ಬಿಬ್ಬುಗೊಳ್ಳುವುದು ಸಾಮಾನ್ಯವಾಗುತ್ತಿದೆ. ಅದರಲ್ಲೂ ರೋಗಿಯ ಹೆಸರಲ್ಲಿ ವಿಮೆ ಇದೆ ಎಂದಾಕ್ಷಣ, ಹೆಚ್ಚುವರಿ ಪರೀಕ್ಷೆ, ದುಬಾರಿ ಕೊಠಡಿ, ಅನಗತ್ಯ ವಿಧಾನಗಳನ್ನು ಬಿಲ್‌ಗೆ ಸೇರಿಸುವ ಪ್ರವೃತ್ತಿಗೆ ಕಡಿವಾಣವೇ ಇಲ್ಲದಂತಾಗಿದೆ. ರೋಗಿಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲಾಗುತ್ತಿದೆ.
ಅಷ್ಟೇ ಅಲ್ಲ, ಒಂದೇ ಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ವ್ಯತ್ಯಾಸವಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಅದಕ್ಕೆ ಉತ್ತಮ ವೈದ್ಯಕೀಯ ಸೇವೆ ಮತ್ತು ಗುಣಮಟ್ಟವನ್ನು ಗುರಾಣಿಯನ್ನಾಗಿ ಬಳಸಲಾಗುತ್ತಿದೆ. ಅಕಸ್ಮಾತ್ ಸತ್ತರೆ, ಬಾಕಿ ಬಿಲ್‌ಗಾಗಿ ಮೃತದೇಹ ತಡೆಹಿಡಿಯುವ ಅಮಾನವೀಯ ಕ್ರೌರ್ಯವನ್ನೂ ಕಾಣುವಂತಾಗಿದೆ.
ಇದನ್ನು ಓದಿದ್ದೀರಾ?: ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ
ಇಂತಹ ಸಂದರ್ಭ ಸೃಷ್ಟಿಯಾಗಲು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು, ಆಡಳಿತ ಪಕ್ಷ ಮತ್ತು ಸರ್ಕಾರ ಕಾರಣವಲ್ಲವೇ? ಇವತ್ತು ಸರ್ಕಾರಿ ಆಸ್ಪತ್ರೆಗಳು ಸಕಲ ಸೌಕರ್ಯಗಳ ಸುವ್ಯಸ್ಥಿತ ಚಿಕಿತ್ಸೆ, ಸೇವೆ ಸಲ್ಲಿಸುವ ಕೇಂದ್ರಗಳಾಗಿದ್ದರೆ, ಜನ ಏಕೆ ಖಾಸಗಿ ಆಸ್ಪತ್ರೆಗಳತ್ತ ಹೋಗುತ್ತಿದ್ದರು? ಸಾವಿರಾರು ಕೋಟಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆ ಕಟ್ಟಿರುವ ಹಾಗೂ ಔಷಧ ಕಂಪನಿಗಳನ್ನು ಸ್ಥಾಪಿಸಿರುವ ಪ್ರಭಾವಿಗಳು ಸಚಿವರ ಮಾತಿಗೆ, ಸರ್ಕಾರಗಳ ಕಾಯ್ದೆ-ಕಾನೂನಿಗೆ ಬಗ್ಗುತ್ತಾರೆಯೇ?
ಪರಿಸ್ಥಿತಿ ಹೀಗಿರುವಾಗ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಖಡಕ್ ಕ್ರಮಗಳು, ಸರ್ವೋಚ್ಚ ನ್ಯಾಯಾಲಯದ ಕಿಡಿನುಡಿಗಳು- ಸದ್ಯಕ್ಕೆ ಸಮಾಧಾನ ತರುವ, ಪ್ರಶಂಸೆಗೊಳಗಾಗಬೇಕಾದ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಚಿವರು, ಕಡ್ಡಾಯಗೊಳಿಸುವ ಮಾತಿಗಿಂತ ಅದನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸದಿದ್ದರೆ; ನ್ಯಾಯಾಧೀಶರು ವಿಚಾರಣೆ ವೇಳೆಯಲ್ಲಿ ಸರ್ಕಾರಗಳಿಗೆ, ಪ್ರಾಧಿಕಾರಗಳಿಗೆ ಛೀಮಾರಿ ಹಾಕುವುದರ ಬದಲು, ತೀರ್ಪುಗಳನ್ನು ಪ್ರಕಟಿಸಿ ಆದೇಶ ನೀಡದಿದ್ದರೆ- ಇಲ್ಲಿ ಎಲ್ಲವೂ ಯಥಾರೀತಿ ಎನ್ನುವಂತಾಗುವುದಿಲ್ಲವೇ?
ಹಾಗಾಗಿ ಆಡಿದ್ದನ್ನು ಮಾಡಿ ತೋರಿಸಲಿ. ಈ ದುರ್ಬರ ದಿನಗಳಲ್ಲಿ ಬಡವರು ಕೂಡ ಬದುಕುವಂತಾಗಲಿ.




