ಕರ್ನಾಟಕದ ಬರಪೀಡಿತ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪತ್ರ ಬರೆದಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ 22,400.58 ಕೋಟಿ ರೂ. ಬರ ಪರಿಹಾರವನ್ನು ಶೀಘ್ರವಾಗಿ ಮಂಜೂರು ಮಾಡಿ, ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ‘
ಪ್ರಧಾನಿ ಮೋದಿಗೆ ತಾವು ಬರೆದಿರುವ ಪತ್ರದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪರಮೇಶ್ವರ್, ತಾವು ಮೋದಿ ಅವರಿಗೆ ಮಾತ್ರವಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಕರ್ನಾಟಕದ ಬರ ಪರಿಸ್ಥಿತಿ ಮತ್ತು ರೈತರ ಸಂಕಷ್ಟವನ್ನು ಖುದ್ದಾಗಿ ವಿವರಿಸಲು ಮೂವರ ಭೇಟಿಗೂ ಸಮಯ ಕೋರಿರುವುದಾಗಿ ಹೇಳಿದ್ದಾರೆ.
ಮೋದಿಗೆ ಬರೆದ ಪತ್ರದಲ್ಲಿ, “ರಾಜ್ಯದ 226 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಇದರಿಂದ, 62,481.88 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರದ ಪರಿಷ್ಕೃತ ವಿಪತ್ತು ಪರಿಹಾರ ಮಾನದಂಡಗಳ ಪ್ರಕಾರ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ದೊರೆಯಬೇಕಿರುವ ಒಟ್ಟು ಪರಿಹಾರದ ಅಗತ್ಯ 22,400.58 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ರೈತರು ಅನುಭವಿಸಿರುವ ನೈಜ ಆರ್ಥಿಕ ನಷ್ಟಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ. ಆದರೂ, ರಾಜ್ಯದ ಬೇಡಿಕೆಯ ಈ ಹಣವನ್ನಾದರೂ, ತ್ವರಿತವಾಗಿ ಬಿಡುಗಡೆ ಮಾಡಬೇಕು” ಎಂದು ಪರಮೇಶ್ವರ ಒತ್ತಾಯಿಸಿದ್ದಾರೆ.
ಈ ಹಿಂದೆ, 2026ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ರಾಜ್ಯದ 226 ಬರಪೀಡಿತ ತಾಲೂಕುಗಳಿಗೆ 20,585.73 ಕೋಟಿ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ಬರಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂಬುದನ್ನು ಅರಿತಿರುವ ರಾಜ್ಯ ಸರ್ಕಾರ, ಬರ ಪರಿಹಾರದ ಬೇಡಿಕೆಯನ್ನು 22,400 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಈ ನಡುವೆ, ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ 26ರಂದು ಅಧಿಸೂಚನೆ ಹೊರಡಿಸಿದ್ದು, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾನದಂಡಗಳು ಮತ್ತು ಮೊತ್ತವನ್ನು ಪರಿಷ್ಕರಿಸಿದೆ. ಕರ್ನಾಟಕದ ಬೆಳೆ ನಷ್ಟದ ಇನ್ಪುಟ್ ಸಬ್ಸಿಡಿಯನ್ನು 6,128.70 ಕೋಟಿ ರೂ.ನಿಂದ 7,943.55 ಕೋಟಿ ರೂ.ಗೆ ಹೆಚ್ಚಿಸಿದೆ. ಇದರಂತೆ; ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 11,000 ರೂ., ನೀರಾವರಿ ಬೆಳೆಗಳಿಗೆ 22,000 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 30,000 ರೂ. ಪರಿಹಾರ ಒದಗಿಸಲು ಅವಕಾಶವಿದೆ.
ಈ ಪರಿಷ್ಕರಣೆಯನ್ನು ಸ್ವಾಗತಿಸುತ್ತಲೇ, ಅಸಮಾಧಾನವನ್ನೂ ವ್ಯಕ್ತಪಡಿಸಿರುವ ಪರಮೇಶ್ವರ, “ಪರಿಷ್ಕೃತ ಮೊತ್ತಗಳು ರೈತರ ನೈಜ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಸಾಕಾಗುವುದಿಲ್ಲ. ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ, ನೀರಾವರಿ ಹಾಗೂ ಇತರ ಕೃಷಿ ಪರಿಕರಗಳ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಬೆಳೆ ನಷ್ಟ ಸಂಭವಿಸಿದಾಗ ರೈತರಿಗೆ ದೊರೆಯುವ ಪರಿಹಾರವು ಅವರು ಮಾಡಿದ ಕೃಷಿ ವೆಚ್ಚಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ” ಎಂದು ವಿವರಿಸಿದ್ದಾರೆ.
“ಒಂದು ಹಂಗಾಮಿನಲ್ಲಿ ಬೆಳೆ ನಷ್ಟವಾದರೆ ರೈತರು ಬೀಜ, ರಸಗೊಬ್ಬರ, ಕೂಲಿ ಮತ್ತು ನೀರಾವರಿಗಾಗಿ ಮಾಡಿರುವ ವೆಚ್ಚವನ್ನಷ್ಟೇ ಕಳೆದುಕೊಳ್ಳುವುದಿಲ್ಲ. ಸಾಲದ ಹೊರೆ, ಮುಂದಿನ ಹಂಗಾಮಿಗೆ ಬಂಡವಾಳದ ಕೊರತೆ ಹಾಗೂ ಕುಟುಂಬದ ಜೀವನೋಪಾಯದ ಸಂಕಷ್ಟವನ್ನೂ ಎದುರಿಸಬೇಕಾಗುತ್ತದೆ. ಹೀಗಾಗಿ, ವಿಪತ್ತು ಪರಿಹಾರ ವ್ಯವಸ್ಥೆಯು ಕೇವಲ ಸೀಮಿತ ಮೊತ್ತದ ನೆರವು ನೀಡುವುದಕ್ಕೆ ಸೀಮಿತವಾಗಬಾರದು. ರೈತರು ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಂಡು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿರಬೇಕು” ಎಂದು ಪರಮೇಶ್ವರ ಪ್ರತಿಪಾದಿಸಿದ್ದಾರೆ.
“ರಾಜ್ಯದ 226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು ಆರ್ಥಿಕ ನಷ್ಟ 62,481.88 ಕೋಟಿ ರೂ. ಆಗಿದೆ. ಆದರೆ, ಪರಿಷ್ಕೃತ ಮಾನದಂಡಗಳ ಪ್ರಕಾರ ಬೆಳೆ ನಷ್ಟದ ಇನ್ಪುಟ್ ಸಬ್ಸಿಡಿಗಾಗಿ ಕೋರಬಹುದಾದ ಮೊತ್ತ 7,943.55 ಕೋಟಿ ರೂ. ಮಾತ್ರ. ಅಂದರೆ, ರಾಜ್ಯವು ಅಂದಾಜಿಸಿರುವ ಒಟ್ಟು ಆರ್ಥಿಕ ನಷ್ಟಕ್ಕೆ ಹೋಲಿಸಿದರೆ ಒಟ್ಟು ಬೆಳೆ ನಷ್ಟದ 12.3% ಮತ್ತು ರಾಜ್ಯದ ಬೇಡಿಕೆಯ ಸುಮಾರು 35.9%ರಷ್ಟು ಮಾತ್ರವೇ ಆಗಿದೆ. ಇದರಿಂದ, ರೈತರ ಸಂಕಷ್ಟ ಪರಿಹಾರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು; ಬಹುಮತ ಕಳೆದುಕೊಂಡರೆ ಸರ್ಕಾರ ‘ಹಲ್ಲು…
“ಬರ ಪರಿಹಾರದ ಫಲಾನುಭವಿಗಳನ್ನು ಗುರುತಿಸಲು 2015–16ರ ಕೃಷಿ ಗಣತಿಯ ಮಾಹಿತಿಯನ್ನು ಬಳಸುತ್ತಿರುವುದು ಸರಿಯಲ್ಲ. ಹತ್ತು ವರ್ಷಗಳ ಹಿಂದಿನ ಕೃಷಿ ಗಣತಿಯು ಪ್ರಸ್ತುತ ಕೃಷಿ ಭೂಹಿಡುವಳಿ ಪರಿಸ್ಥಿತಿಯನ್ನು ಸಮರ್ಪಕವಾಗಿ ಪ್ರತಿಬಿಂಬಿಸುವುದಿಲ್ಲ. ಇದರಿಂದ ಸಣ್ಣ ಮತ್ತು ಅತಿಸಣ್ಣ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಯಿದೆ” ಎಂದು ಅವರು ತಿಳಿಸಿದ್ದಾರೆ.
“ಬರ ಪರಿಹಾರಕ್ಕೆ ಫಲಾನುಭವಿಗಳನ್ನು ಗುರುತಿಸಲು ಕರ್ನಾಟಕ ಸರ್ಕಾರದ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆಯಾದ ‘FRUITS’ ದತ್ತಾಂಶವನ್ನು ಬಳಸಬೇಕು. ಈ FRUITS ವ್ಯವಸ್ಥೆಯಲ್ಲಿ ರೈತರ ಸಮಕಾಲೀನ ಮತ್ತು ಪರಿಶೀಲಿತ ಮಾಹಿತಿ ಲಭ್ಯವಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವು ನೆರವಾಗಲಿದೆ” ಎಂದಿದ್ದಾರೆ.
“ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಂಕಷ್ಟ, ಹೆಚ್ಚುತ್ತಿರುವ ಕೃಷಿ ವೆಚ್ಚ ಮತ್ತು ರೈತರ ಆರ್ಥಿಕ ದುರ್ಬಲತೆಯನ್ನು ಪರಿಗಣಿಸಿ ವಿಪತ್ತು ಪರಿಹಾರದ ಮಾನದಂಡಗಳನ್ನು ಸಮಗ್ರವಾಗಿ ಮರುಪರಿಶೀಲಿಸುವ ಅಗತ್ಯವಿದೆ” ಎಂದು ಪತ್ರದಲ್ಲಿ ಪರಮೇಶ್ವರ ತಿಳಿಸಿದ್ದಾರೆ.
“ಹೊಸ ಹಣಕಾಸು ಆಯೋಗದ ಅವಧಿಯ ಆರಂಭದಲ್ಲಿ ಪರಿಹಾರದ ಮಾನದಂಡಗಳನ್ನು ಪರಿಷ್ಕರಿಸುವಾಗ ಕೇವಲ ಮೊತ್ತವನ್ನು ಹೆಚ್ಚಿಸುವುದಕ್ಕೆ ಸೀಮಿತವಾಗಬಾರದು. ರೈತರ ಇಂದಿನ ಕೃಷಿ ವೆಚ್ಚ ಮತ್ತು ನೈಜ ನಷ್ಟವನ್ನು ಆಧರಿಸಿ ಪರಿಹಾರ ವ್ಯವಸ್ಥೆಯನ್ನು ರೂಪಿಸಬೇಕು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ರೈತರ ಆರ್ಥಿಕ ಭದ್ರತೆ ಮತ್ತು ಸಮೃದ್ಧಿಗೂ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಕರ್ನಾಟಕದ ರೈತರು ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅವರ ನೆರವಿಗೆ ನಿಲ್ಲಬೇಕು” ಎಂದು ಒತ್ತಾಯಿಸಿದ್ದಾರೆ.



